“ಕಂತ್ರಿ ಬಾಯ್ಸ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಸಂಧ್ಯಾ, ಆರಂಭದಲ್ಲಿ ನಿರ್ದೇಶಕರಿಗೆ ಒಂದು ತಿಂಗಳು ಆಟವಾಡಿಸಿದ್ದರಂತೆ. “ನನ್ನ ಸಿನಿಮಾದಲ್ಲಿ ನಟಿಸ್ತೀರಾ’ ಎಂದು ಕೇಳಿದ್ದ ನಿರ್ದೆಶಕ ರಾಜು ಅವರಿಗೆ “ತಾನು ಬಿಝಿ ಇದ್ದೇನೆ’ ಎನ್ನುತ್ತಾ ಒಂದು ತಿಂಗಳು ಆಟವಾಡಿಸಿದ ನಂತರ ತಮ್ಮ ಪಾತ್ರ ಕೇಳಿ ಒಪ್ಪಿಕೊಂಡರಂತೆ. ಅವರು ಕಥೆ ಹೇಳಲು ಬಂದಾಗ ಒಂದು ವಿಷಯವನ್ನು ಮೊದಲೇ ಸ್ಪಷ್ಟಪಡಿಸಿದರಂತೆ. “ನಾನು ಟಾಮ್ ಗರ್ಲ್. ನನಗೆ ನಯ, ನಾಜೂಕು ಗೊತ್ತಿಲ್ಲ. ಹಾಗಾಗಿ, ಆ ತರಹದ ಪಾತ್ರವಾದರೆ ಕಷ್ಟವಾಗುತ್ತದೆ’ ಎಂದರಂತೆ. ಕೊನೆಗೆ ನಿರ್ದೇಶಕರು ತುಂಬಿದ ದೈರ್ಯದಿಂದ ತಾನು ನಟಿಸಿದ್ದಾಗಿ ಹೇಳಿಕೊಂಡರು ಶಾಲಿನಿ.
ಅಂದಹಾಗೆ, “ಕಂತ್ರಿಬಾಯ್ಸ’ ಸಂಪೂರ್ಣ ಹೊಸಬರ ಚಿತ್ರ. ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರುವ ಈ ಚಿತ್ರವನ್ನು ಎಸ್. ರಾಜು ಚಟ್ನಳ್ಳಿ ಎನ್ನುವವರು ನಿರ್ದೇಶಿಸಿದ್ದಾರೆ. ಇವರಿಗಿದು ಮೊದಲ ಚಿತ್ರ. ಈ ಹಿಂದೆ ಅನೇಕ ಕಾಮಿಡಿ ಧಾರಾವಾಹಿ ಹಾಗೂ ಶೋಗಳಿಗೆ ಬರೆಯುತ್ತಿದ್ದ ಇವರಿಗೆ ಅವಕಾಶ ಕೊಟ್ಟವರು ಹೇಮಂತ್ ಗೌಡ. ಹೇಮಂತ್ ಗೌಡ ಅವರು ಕೂಡಾ ಸಿನಿಮಾ ಮಾಡಬೇಕೆಂದು ಓಡಾಡಿಕೊಂಡಿದ್ದಾಗ, ರಾಜು ಅವರ ಪರಿಚಯವಾಯಿತಂತೆ. ಜೊತೆಗೆ ಅವರ ಪ್ರತಿಭೆಯ ಪರಿಚಯವೂ ಆಗಿ ಸಿನಿಮಾ ನಿರ್ಮಿಸಿದ್ದಾಗಿ ಹೇಳಿಕೊಂಡರು ಹೇಮಂತ್ ಗೌಡ.
ಎಲ್ಲಾ, ಓಕೆ “ಕಂತ್ರಿ ಬಾಯ್ಸ’ ಸಿನಿಮಾದಲ್ಲಿ ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ಅದಕ್ಕೆ ರಾಜು ಉತ್ತರಿಸುತ್ತಾರೆ. “ಚಿತ್ರದಲ್ಲಿ ಸಾಕಷ್ಟು ತರೆಲ ಅಂಶ, ಫನ್ನಿ ಡೈಲಾಗ್‌ಗಳಿವೆ. ಅದರ ಜೊತೆಗೆ ಒಂದು ಗಟ್ಟಿ ಕಥೆ ಇದೆ. ಸಮಾಜದಲ್ಲಿ ವೇಶ್ಯೆಯೊಬ್ಬಳು ಅನುಭವಿಸುವ ಕಷ್ಟಗಳ ಬಗ್ಗೆ ಇಲ್ಲಿ ಹೇಳಲಾಗಿದೆ. ವೇಶ್ಯೆಯ ಜೀವನಕ್ಕೆ ಕೇವಲ ಆಕೆ ಮಾತ್ರ ಕಾರಣವಾಗಿರೋದಿಲ್ಲ. ಪುರುಷ ಕೂಡಾ ಕಾರಣನಾಗುತ್ತಾನೆ ಎಂಬ ಅಂಶವನ್ನು ಇಲ್ಲಿ ಹೇಳಿದ್ದೇವೆ. ಜೊತೆಗೆ ಕಂತ್ರಿಬಾಯ್ಸ ಮುಂದೆ ಹೇಗೆ ಕಂಟ್ರಿಬಾಯ್ಸ ಆಗುತ್ತಾರೆಂಬ ಅಂಶವೂ ಇಲ್ಲಿದೆ’ ಎಂದು ಚಿತ್ರದ ಬಗ್ಗೆ ವಿವರ ನೀಡಿದರು ರಾಜು.
ಚಿತ್ರದಲ್ಲಿ ಅರವಿಂದ್ ನಾಯಕರಾಗಿ ನಟಿಸಿದ್ದಾರೆ. ಚಿತ್ರದಲ್ಲಿ ವಾಸಂತಿ ಹಾಗೂ ಕನಕ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರದಲಿ ಗಡ್ಡಪ್ಪ ಕೂಡಾ ನಟಿಸಿದ್ದು, ಮತ್ತೂಮ್ಮೆ ಅವರ ಬಾಯಲ್ಲಿ ಡಬಲ್ ಮೀನಿಂಗ್ ಸಂಭಾಷಣೆಗಳು “ನಲಿ’ದಾಡಿವೆ.