ಗದಗ: ನಾಗರ ಪಂಚಮಿ ಹಬ್ಬದ ಅಂಗವಾಗಿ ನಗರದ ಗಂಗಾಪುರಪೇಟೆ ಕುಂಬಾರ ಓಣಿಯಲ್ಲಿ ಬುಧವಾರ ಸಂಜೆ ನಡೆದ ಸೆಗಣಿ ಆಟದಲ್ಲಿ ವಿಶಿಷ್ಟ ವೇಷಭೂಷಣ ತೊಟ್ಟಿದ್ದ ಯುವಕರು ಪರಸ್ಪರ ಸೆಗಣಿ ಎರಚಾಡಿಕೊಂಡು ಸಂಭ್ರಮಿಸಿದರು.
ಓಣಿಯುದ್ದಕ್ಕೂ ಅತ್ತಿಂದಿತ್ತ-ಇತ್ತಿದಂತ್ತ ಓಡಾಡಿ ಸೆಗಣಿ ತೂರುತ್ತಾ ನೋಡುಗರ ಮನರಂಜಿಸಿದರು. ನಾಗರ ಪಂಚಮಿ ಹಬ್ಬದ ನಿಮಿತ್ತ ಇಲ್ಲಿನ ಕುಂಬಾರ ಓಣಿ ಜನರು ಬುಧವಾರ ಕೆರೆ ಕಟ್ಟಂಬಲಿ ಹಬ್ಬವನ್ನು ಆಚರಿಸಿದರು. ಮನೆಗಳಲ್ಲಿ ಉಂಡೆ, ಚಕ್ಕುಲಿಯೊಂದಿಗೆ ಎಲ್ಲರೂ ಹಬ್ಬದ ಸಿಹಿಯೂಟ ಸವಿದು, ಸಂಪ್ರದಾಯದಂತೆ ಸಂಜೆ ಕುಂಬಾರ ಗಲ್ಲಿ ಯುವಕರು ಸೆಗಣಿಯಾಟ ಆರಂಭಿಸಿದರು. ಮೊದಲೇ ಎರಡು ಗುಂಪುಗಳಲ್ಲಿ ಪ್ರತ್ಯೇಕಗೊಂಡಿದ್ದ ಯುವಕರು, ವಿರೋಧಿ ಗುಂಪಿನವರ ಮೇಲೆ ಸೆಗಣಿ ಎರಚುತ್ತಿದ್ದರು. ಈ ವೇಳೆ ಒಬ್ಬಂಟಿಯಾಗಿ ಎದುರಾಗುವ ಆಟಗಾರನಿಗೆ ನಾಲ್ಕೈದು ಮಂದಿ ಸೇರಿ ಮೈಮೇಲೆ ಸೆಗಣಿ ಸುರಿದು ಕೇಕೆ ಹಾಕಿ ಸಂಭ್ರಮಿಸಿದರು.
ಈ ವೇಳೆ ನೆರೆದವರು ಸಿಳ್ಳೆ, ಚಪ್ಪಾಳೆ ಬಾರಿಸುವುದು ಹಾಗೂ ಹೋ ಎಂದು ಕೂಗಿ ಆಟಗಾರರನ್ನು ಹುರಿದುಂಬಿಸುತ್ತಿದ್ದರು. ಸೆಗಣಿ ಎರಚಾಟದಲ್ಲಿ ಕೊನೆವರೆಗೂ ಉಳಿಯುವವರನ್ನು ವಿಜೇತರೆಂದು ಘೋಷಿಸಲಾಯಿತು. ಸುಮಾರು 20 ನಿಮಿಷಗಳ ಕಾಲ ನಡೆಯುವ ಈ ಆಟದಲ್ಲಿ ಭಾಗಶಃ ಯುವಕರು ಹೆಣ್ಣು ಮಕ್ಕಳಂತೆ ಚೂಡಿದಾರ, ಸೀರೆತೊಟ್ಟು ಗಮನ ಸೆಳೆದರು.
ಇದಕ್ಕೂ ಮುನ್ನ ಬಡಾವಣೆಯ ಹನುಮಂತ ದೇವರ ಗುಡಿಯಲ್ಲಿ ಸಿಂಗಾರಗೊಂಡ ಯುವಕರರಲ್ಲಿ ಕೆಲವರು ಹೆಣ್ಣು ವೇಷಧಾರಿಗಳಾಗಿ, ಕೊರಳಲ್ಲಿ ತರಕಾರಿ ಮತ್ತಿತರೆ ತ್ಯಾಜ್ಯ ವಸ್ತುಗಳ ಹಾರ ತೊಟ್ಟು ಮೆರವಣಿಗೆಯಲ್ಲಿ ಆಗಮಿಸಿದರು. ಬಳಿಕ ಸೆಗಣಿಯಾಟಕ್ಕೆಂದೇ ಕುಂಬಾರ ಓಣಿಯ 100 ಮೀ. ಉದ್ದದ ಕಾಂಕ್ರೀಟ್ ರಸ್ತೆಯ ಅಲ್ಲಲ್ಲಿ 20ಕ್ಕೂ ಹೆಚ್ಚು ಕಡೆ ಸೆಗಣಿ ಗುಡ್ಡೆ ಹಾಕಲಾಗಿತ್ತು. ಅದರ ಮೇಲೆ ಎಲೆ, ಹೂವು, ಗುಲಾಲ್ ಚೆಲ್ಲಿ ಅಲಂಕರಿಸಲಾಗಿತ್ತು. ಸೆಗಣಿ ಎರಚಾಟದ ಬಳಿಕ ಸಿಸಿ ರಸ್ತೆ ಅಕ್ಷರಶಃ ದನದಕೊಟ್ಟಿಗೆಯಂತೆ ಭಾಸವಾಗುತ್ತಿತ್ತು. ಸುತ್ತಲಿನ ಪ್ರದೇಶದಲ್ಲಿ ಸೆಗಣಿ ವಾಸನೆ ಹರಡಿತ್ತು. ಆದರೂ ಅವಳಿ ನಗರದ ವಿವಿಧೆಡೆಯಿಂದ ಬಂದಿದ್ದ ನೂರರು ಜನರು ಸೆಗಣಿ ಆಟ ಕಣ್ತುಂಬಿಕೊಂಡರು. ಇನ್ನೂ ಕೆಲವರು ವಿಶಿಷ್ಟ ಆಟವನ್ನು ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಿರುವ ದೃಶ್ಯಕಂಡುಬಂತು.
ಸೆಗಣಿ ಆಟದ ಹಿನ್ನೆಲೆ, ಯಾವ ವರ್ಷದಲ್ಲಿ ಅದನ್ನು ಆರಂಭಿಸಲಾಯಿತು ಎನ್ನುವುದರ ಬಗ್ಗೆ ನಿಖರವಾಗಿಲ್ಲ. ಆದರೆ, ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಮೊದಲೆಲ್ಲ ನೂರಾರು ಜನ ಆಟದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಆಧುನಿಕತೆ ಭರಾಟೆಯಲ್ಲಿ ಆಟ ಕ್ಷೀಣಿಸುತ್ತಿದೆ ಎನ್ನುತ್ತಾರೆ ಬಡಾವಣೆಯ ಹಿರಿಯರು.
ಸಗಣಿ ಸಂಭ್ರಮಕ್ಕೆ ಮಳೆ ಅಡ್ಡಿ
ಪ್ರತೀವರ್ಷ ನಾಗರ ಪಂಚಮಿಯಾದ ಮಾರನೇ ದಿನ ಕೆರೆ ಕಟ್ಟಂಬಲಿ ಆಚರಿಸಿ, ಸಗಣಿ ಆಟ ಆಡಲಾಗುತ್ತಿತ್ತು. ಆದರೆ, ಮಂಗಳವಾರ ನಡೆಯಬೇಕಿದ್ದ ಕೆರೆ ಕಟ್ಟಂಬಲಿ ಕಾರಣಾಂತರದಿಂದ ಬುಧವಾರಕ್ಕೆ ಮುಂದೂಡಲಾಗಿತ್ತು. ಬುಧವಾರ ಬೆಳಗ್ಗೆಯಿಂದಲೇ ಬಿಡುವಿಲ್ಲದೇ ಮಳೆ ಸುರಿದಿದ್ದು, ಈ ಭಾಗದ ಯುವಕರ ಸೆಗಣಿ ಆಟದ ಸಂಭ್ರಮಕ್ಕೆ ಅಡ್ಡಿ ಯಾಯಿತು. ಮಳೆಯಿಂದಾಗಿ ಸಗಣಿ ಆಟ ವೀಕ್ಷಣೆಗೆ ಬರುವ ಜನರ ಸಂಖ್ಯೆಯಲ್ಲೂ ಇಳಿಮುಖವಾಗಿತ್ತು.