Advertisement

Gadaga: ಗದಗ-ವಾಡಿ ರೈಲ್ವೆ ಮಾರ್ಗಕ್ಕೆ 2026ರ ಮಾರ್ಚ್‌ ಗಡುವು

04:04 PM Sep 07, 2023 | Team Udayavani |

ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಮಹತ್ವದ ರೈಲ್ವೆ ಯೋಜನೆಗಳಲ್ಲಿ ಒಂದಾದ 257 ಕಿಲೋಮೀಟರ್‌ ಉದ್ದದ ಗದಗ- ವಾಡಿ ನಡುವಿನ ಮಾರ್ಗದ ಕಾಮಗಾರಿಯನ್ನು 2026ರ ಮಾರ್ಚ್‌ ಒಳಗೆ ಪೂರ್ಣಗೊಳಿಸಲು ಗಡುವು ವಿಧಿಸಲಾಗಿದೆ ಎಂದು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

Advertisement

ರೈಲ್ವೆ ಯೋಜನೆಗಳಾದ ಗದಗ-ವಾಡಿ ಮತ್ತು ಬಾಗಲಕೋಟೆ-ಕುಡಚಿ ನಡುವಿನ ಮಾರ್ಗಗಳ ಪ್ರಗತಿ ಪರಿಶೀಲನೆ ಬಗ್ಗೆ ಪ್ರತ್ಯೇಕ ಸಭೆಗಳನ್ನು ನಡೆಸಿದ ಸಂದರ್ಭದಲ್ಲಿ ಅವರು ಈ ಸೂಚನೆ ನೀಡಿದರು.

ಒಟ್ಟು 1,922 ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆಯು ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆಗಳ ತಲಾ ಶೇ. 50ರಷ್ಟು ವೆಚ್ಚ ಹಂಚಿಕೆಯಲ್ಲಿ ನಡೆಯುತ್ತಿದೆ. ಈ ಕಾಮಗಾರಿಗೆ 4,002 ಎಕರೆ ಭೂಮಿ ಅಗತ್ಯವಿದ್ದು, ಈಗಾಗಲೇ 3,945 ಎಕರೆ ಭೂಮಿಯನ್ನು ಕಾಮಗಾರಿಗಾಗಿ ಬಿಟ್ಟುಕೊಡಲಾಗಿದೆ. ಉಳಿದ 57 ಎಕರೆ ಭೂಮಿಯನ್ನು ಇನ್ನೊಂದು ತಿಂಗಳೊಳಗೆ
ಕೊಡಲಾಗುತ್ತದೆ ಎಂದು ಸಚಿವರು ವಿವರಿಸಿದರು.

ಗದಗದಿಂದ ತಳಕಲ್‌ವರೆಗೆ ಈಗಾಗಲೇ ರೈಲ್ವೆ ಹಳಿ ಇದೆ. ತಳಕಲ್‌ನಿಂದ ಕುಷ್ಟಗಿವರೆಗಿನ 57 ಕಿ.ಮೀ. ಪೈಕಿ ಹನುಮಪುರದವರೆಗೆ ಕೆಲಸ ಮುಗಿದಿದೆ. ಕುಷ್ಟಗಿವರೆಗಿನ ಮಾರ್ಗ ಮಾರ್ಚ್‌ 24ರೊಳಗೆ ಮುಗಿಯಲಿದೆ.ಬಳಿಕ ಪ್ರಾಯೋಗಿಕ ರೈಲು ಸಂಚಾರ ಆರಂಭವಾಗಲಿದೆ. ಇನ್ನೊಂದು ಭಾಗದಲ್ಲಿ ವಾಡಿ ಕಡೆಯಿಂದ ಶೋರಾಪುರದವರೆಗೆ ಕಾಮಗಾರಿ ನಡೆಯುತ್ತಿದೆ ಎಂದೂ ಹೇಳಿದರು. ಗದಗ-ವಾಡಿ ರೈಲು ಮಾರ್ಗ ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಒತ್ತು ಕೊಡುವಂತೆ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರು ಸಚಿವರನ್ನು ಕೋರಿದರು.

ಆಗ ಸಚಿವ ಪಾಟೀಲರು ಸಭೆಯಲ್ಲಿದ್ದ ರೈಲ್ವೆ ಅಧಿಕಾರಿಗಳಿಗೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚಿಸಿದರು. ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ತಂಡಗಳನ್ನು ಕಳುಹಿಸಿ ಗುಣಮಟ್ಟ ಖಾತ್ರಿ ಗೊಳಿಸಿಕೊಳ್ಳುವಂತೆಯೂ ನಿರ್ದೇಶನ ನೀಡಿದರು.

Advertisement

ಮತ್ತೊಂದು 1530 ಕೋಟಿ ರೂ.ಗಳ ಯೋಜನೆಯಾದ 142 ಕಿ.ಮೀ. ಉದ್ದದ ಬಾಗಲಕೋಟೆ- ಕುಡಚಿಗೆ ಅಗತ್ಯವಿರುವ
2,496 ಎಕರೆ ಭೂಮಿಯ ಪೈಕಿ 2,476 ಎಕರೆ ಈಗಾಗಲೇ ಹಸ್ತಾಂತರವಾಗಿದೆ. ಉಳಿದ 20 ಎಕರೆ ಭೂಮಿಯನ್ನು ಸದ್ಯದಲ್ಲೇ ಬಿಟ್ಟುಕೊಡಲಾಗುವುದು. 2025ರ ಡಿಸೆಂಬರ್‌ ಒಳಗೆ ಈ ಕಾಮಗಾರಿ ಮುಗಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

ಬಾಗಲಕೋಟೆ- ಖಚ್ಚಿದೋಣಿ- ಲೋಕಾಪುರದವರೆಗಿನ 60 ಕಿ.ಮೀ. ರೈಲ್ವೆ ಕಾಮಗಾರಿ 2024ರ ಮಾರ್ಚ್‌ ವೇಳೆಗೆ
ಮುಗಿಯಲಿದೆ. ಆನಂತರ, ಈ ಭಾಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ. ಮತ್ತೂಂದು ಕಡೆ ಕುಡಚಿ ಭಾಗದಿಂದ ಕಾಮಗಾರಿ ಆರಂಭಿಸಲು ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಕೆಲಸಗಳಿಗೆ ಚಾಲನೆ ಕೊಡಬೇಕಿದೆ. ಕುಡಚಿಯಿಂದ ಜಗದಾಳ್‌ ವರೆಗಿನ ಕೆಲಸ ಶುರುವಾಗಲಿದೆ ಎಂದರು.

ಶಾಸಕ ಬಸವರಾಜ ರಾಯರೆಡ್ಡಿ, ವಿಧಾನ ಪರಿಷತ್ತಿನ ಸದಸ್ಯ ಹಾಗೂ ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ ಪ್ರಕಾಶ್‌ ಹುಕ್ಕೇರಿ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್‌ , ರೈಲ್ವೆ ಅಧಿಕಾರಿಗಳು, ಮೂಲಸೌಕರ್ಯ ಇಲಾಖೆ ಎಸಿಎಸ್‌ ಗೌರವ ಗುಪ್ತ, ಹಾಜರಿದ್ದರು. ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next