Advertisement

ಮಾಗಡಿ ಕೆರೆಯಲ್ಲಿ ವಿದೇಶಿ ಪಕ್ಷಿಗಳ ಕಲರವ!

11:39 AM Dec 08, 2019 | Naveen |

„ಪ್ರಹ್ಲಾದಗೌಡ ಗೊಲ್ಲಗೌಡರ
ಗದಗ:
ಉತ್ತರ ಕರ್ನಾಟಕದ ರಂಗನತಿಟ್ಟು ಎಂದು ಖ್ಯಾತಿ ಪಡೆದಿರುವ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಗೆ ವಲಸೆ ಪಕ್ಷಿಗಳ ಆಗಮನವಾಗಿದೆ. ದೇಶ-ವಿದೇಶಿ ಪಕ್ಷಿಗಳು ಆಹಾರ-ನೀರು ಅರಿಸಿ ಬರುವುದು ಈ ಕೆರೆಯ ವೈಶಿಷ್ಟ್ಯತೆ. ಮಳೆಗಾಲ ಕಳೆದು ಚಳಿಗಾಲ ಆರಂಭವಾಗುತ್ತಿದಂತೆ ಮಾಗಡಿ ಕೆರೆಯಲ್ಲಿ ವಲಸೆ ಪಕ್ಷಿಗಳ ಕಲರವ ಕಾಣಸಿಗುತ್ತೆ. ವರ್ಷಧಾರೆ ಆರ್ಭಟದಿಂದ ಕೆರೆ ಮೈದುಂಬಿದೆ.

Advertisement

ಪಕ್ಷಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ಪಕ್ಷಿ ಪ್ರಿಯರನ್ನು ಕೈಬೀಸಿ ಕರೆಯುತ್ತಿವೆ. ವಿವಿಧ ಜಾತಿಯ ಪಕ್ಷಿಗಳು ಕೆರೆ ಅಂಗಳದಲ್ಲಿ ಸ್ವತ್ಛಂದವಾಗಿ ವಿಹರಿಸುವ ಪರಿ ಮನಸ್ಸಿಗೆ ಆಹ್ಲಾದವುಂಟು ಮಾಡುತ್ತದೆ. 130ಕ್ಕೂ ಹೆಚ್ಚು ವಿವಿಧ ಜಾತಿಯ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ. 5ರಿಂದ 6 ವಿದೇಶಿ ಜಾತಿಯ ಪಕ್ಷಿಗಳನ್ನು ಹೊರತುಪಡಿಸಿದರೆ ದೇಶಿ ಪಕ್ಷಿಗಳದ್ದೇ ಇಲ್ಲಿ ರಾಜ್ಯಭಾರ. ದೇಶದ ವಿವಿಧ ಮೂಲೆ ಮೂಲೆಗಳಿಂದ ಬರುವ ಪಕ್ಷಿಗಳು ತನ್ನ ಮೈಮಾಟ, ವೈಯಾರದಿಂದಲೇ ಜನರನ್ನು ಆಕರ್ಷಿಸುತ್ತವೆ.

ಗುಂಪು ಗುಂಪಾಗಿ ಬಂದು ನೀರಿಗಿಳಿಯುವ ಘಳಿಗೆ ಎಂತವರನ್ನೂ ಕ್ಷಣಕಾಲ ಮಂತ್ರಮುಗ್ಧರನ್ನಾಗಿ ಮಾಡುತ್ತವೆ. ಮಾಗಡಿ ಕೆರೆ ಸುಮಾರು 134 ಎಕರೆ 15 ಗುಂಟೆ ವಿಸ್ತಾರದಲ್ಲಿದೆ. ಎರಡು ಗ್ರಾಮಗಳಿಗೆ ಈ ಕೆರೆ ಸೇರಲ್ಪಟ್ಟಿದ್ದು, 98 ಎಕರೆ 3 ಗುಂಟೆ ಮಾಗಡಿಗೆ ಹಾಗೂ 69 ಎಕರೆ 36 ಗುಂಟೆ ಹೊಳಲಾಪುರ ಗ್ರಾಮದ ವ್ಯಾಪ್ತಿಗೆ ಒಳಪಡುತ್ತದೆ. ಹೂಳು ತೆಗೆದಿರುವುದರಿಂದ ಕೆರೆ ಮಧ್ಯಭಾಗದಲ್ಲಿ ಅಂದಾಜು 18 ಅಡಿ ಆಳದಲ್ಲಿ ನೀರು ಶೇಖರಣೆಗೊಂಡಿದೆ. ಹೀಗಾಗಿ ಪಕ್ಷಿಗಳಿಗೆ ಈ ಬಾರಿ ನೀರಿನ ಕೊರತೆ ಉದ್ಭವಿಸುವುದಿಲ್ಲ. ಮೂರು ವರ್ಷಗಳ ಹಿಂದೆ ಕೆರೆ ಸಂಪೂರ್ಣ ಬತ್ತಿ ಪಕ್ಷಿ ವಲಸೆಗೆ ಅವಕಾಶ ಸಿಕ್ಕಿರಲಿಲ್ಲ.

ಸಾಮಾನ್ಯವಾಗಿ ಮಾಗಡಿ ಕೆರೆಗೆ ಅಕ್ಟೋಬರ್‌ ಮಾಹೆ ಕೊನೆಯಲ್ಲಿ ಹಕ್ಕಿಗಳು ವಲಸೆ ಬರಲು ಪ್ರಾರಂಭಿಸುತ್ತವೆ. ಈ ಪ್ರದೇಶದಲ್ಲಿ ಸುಮಾರು ನಾಲ್ಕೈದು ತಿಂಗಳ ಕಾಲ ಉಳಿದು ತದನಂತರ ಮರಳಿ ಗೂಡಿನತ್ತ ಪ್ರಯಾಣಿಸುತ್ತವೆ. ಮಾಗಡಿ ಕೆರೆಯಲ್ಲಿ ಸಾಮಾನ್ಯವಾಗಿ 16 ಪ್ರಭೇದದ ಹಕ್ಕಿಗಳು ಹೆಚ್ಚು ಕಂಡು ಬರುತ್ತವೆ. ಬ್ರಾಹ್ಮಿನಿ ಡಕ್‌ ಎಂಬ ಹಕ್ಕಿ ಶ್ರೀಲಂಕಾ, ಕಾಶ್ಮೀರದಿಂದ ಆಗಮಿಸಿದರೆ, ನಾರ್ದನ್‌ ಶೆಲ್ವರ್‌, ಗ್ರಿವನ್‌ ಟೇಲ್‌, ಹೋಮ್‌ ಡಕ್‌ ಪಕ್ಷಿಗಳು ಆಸ್ಟ್ರೇಲಿಯಾ, ಇಂಡೋನೆಷ್ಯಾ, ಫಿಲಿಫೈನ್ಸ್‌ ದೇಶಗಳಿಂದ ಸುಮಾರು 30 ಸಾವಿರ ಕಿಮೀ ದೂರದಿಂದ ಇಲ್ಲಿಗೆ ಬರುತ್ತವೆ. ಮಾಗಡಿ ಕೆರೆಯ ವಿಶೇಷ ಪಕ್ಷಿ ಬಾರ್‌ ಹೆಡೆಡ್‌ ಗೊಸ್‌. ಇದರ ಮೂಲ ಮಂಗೋಲಿಯಾ, ಕಜಗಿಸ್ತಾನ್‌ ಎಂದು ಗುರುತಿಸಲಾಗಿದೆ.

ವಿಶ್ವದ ಅತಿ ಎತ್ತರದಲ್ಲಿ ಹಾರುವ ಪಕ್ಷಿಗಳಲ್ಲಿ ಇದೂ ಒಂದು. ಸುಮಾರು 23 ಸಾವಿರ ಅಡಿ ಎತ್ತರದಲ್ಲಿ ಬಾರ್‌ ಹೆಡೆಡ್‌ ತನ್ನ ಹಾರಾಟ ನಡೆಸುತ್ತದೆ. ಟಬೆಟ್‌ ಮಾರ್ಗವಾಗಿ ಭಾರತ ಪ್ರವೇಶಿಸುವ ಮೊದಲು ಮೌಂಟ್‌ ಎವರೆಸ್ಟ್‌ ಪರ್ವತ ದಾಟಿ ಬರುತ್ತದೆ. ಹಿಮಾಲಯ ಗಿರಿಶಿಖರ ದಾಟಲು ಕೇವಲ ಏಳು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ರಾಜಸ್ಥಾನ, ಗುಜರಾತ ರಾಜ್ಯಗಳಲ್ಲಿ ಬಾರ್‌ ಹೆಡೆಡ್‌ಗೆ ವಿಶೇಷ ಗೌರವ ಮನ್ನಣೆಯಿದೆ. ಮಾಗಡಿ ಕೆರೆಗೆ ದೇಶ-ವಿದೇಶ ಪಕ್ಷಿ ಪ್ರಿಯರು ಆಗಮಿಸುವುದು ಹೆಮ್ಮೆಯ ವಿಷಯ.

Advertisement

ಸ್ಥಳೀಯ ಯುವಕರು ಇಲ್ಲಿನ ಪಕ್ಷಿಗಳ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಬಹುದು. ಇದು ಪ್ರವಾಸಿ ತಾಣದ ಅಭಿವೃದ್ಧಿಗೆ ಸಹಕಾರಿ ಆಗುವ ಜತೆಗೆ ಉದ್ಯೋಗ ಸೃಷ್ಟಿ ಮಾಡುತ್ತದೆ ಎನ್ನುತ್ತಾರೆ ಧಾರವಾಡದ ಪಕ್ಷಿ ತಜ್ಞರಾದ ಹೇಮಂತ ಬ್ಯಾಟರಾಯ.

Advertisement

Udayavani is now on Telegram. Click here to join our channel and stay updated with the latest news.

Next