Advertisement

ಲೋಕ ಅದಾಲತ್‌ನಿಂದ ವ್ಯಾಜ್ಯ ಇತ್ಯರ್ಥ

11:32 AM Feb 20, 2019 | |

ಗದಗ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲೆಯ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ 2019ನೇ ಸಾಲಿನಲ್ಲಿ ವರ್ಷದಲ್ಲಿ ವಿವಿಧ ನಾಲ್ಕು ದಿನಗಳಂದು ರಾಷ್ಟ್ರೀಯ ಲೋಕ ಅದಾಲತ್‌ ನಿಗದಿ ಪಡಿಸಿದ್ದು, ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣ ಲೋಕ್‌ ಅದಾಲತ್‌ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಜಿ.ಎಸ್‌. ಸಂಗ್ರೇಶಿ ತಿಳಿಸಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.9, ಜು.13, ಸೆ.14 ಹಾಗೂ ಡಿ.14ರಂದು ಜಿಲ್ಲೆಯ ಗದಗ, ರೋಣ, ಲಕ್ಷ್ಮೇಶ್ವರ, ಮುಂಡರಗಿ, ನರಗುಂದ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ ಆಯೋಜಿಸಲಾಗಿದೆ. ಈ ವೇಳೆ ಚಾಲ್ತಿ ಇರುವ ಚೆಕ್‌ ಅಮಾನ್ಯದ ಪ್ರಕರಣ, ಬ್ಯಾಂಕ್‌ ಪ್ರಕರಣ, ಎಂವಿಸಿ ಪ್ರಕರಣ, ವೈವಾಹಿಕ ಪ್ರಕರಣ, ಭೂ ಸ್ವಾಧೀನ ಪ್ರಕರಣ, ಕಾರ್ಮಿಕ ಪ್ರಕರಣಗಳು, ವಿದ್ಯುತ್‌ ಹಾಗೂ ನೀರಿನ ಶುಲ್ಕಗಳು ಹಾಗೂ ಇತರೆ ರಾಜಿ ಆಗಬಲ್ಲ ಅಪರಾಧಿಕ ಮತ್ತು ದಿವಾಣಿ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥ ಪಡಿಸಲಾಗುವುದು ಎಂದರು.

ಅದೇ ರೀತಿ ನ್ಯಾಯಾಲಯದಲ್ಲಿ ದಾಖಲಿಸದೇ ಇರುವ ಚೆಕ್‌ ಅಮಾನ್ಯದ ಪ್ರಕರಣಗಳು, ಬ್ಯಾಂಕ್‌ ವಸೂಲಾತಿ ಪ್ರಕರಣ, ಕಾರ್ಮಿಕ ಪ್ರಕರಣ, ವಿದ್ಯುತ್‌ ಹಾಗೂ ನೀರಿನ ಶುಲ್ಕಗಳು, ಕಂದಾಯ ತೆರಿಗೆ ಪ್ರಕರಣಗಳು ಹಾಗೂ ಇತರೆ ರಾಜಿ ಆಗಬಲ್ಲ ಅಪರಾ ಧಿಕ ಮತ್ತು ದಿವಾಣಿ ಪ್ರಕರಣಗಳನ್ನು ವ್ಯಾಜ್ಯ ಪೂರ್ವ ಪ್ರಕರಣಗಳು ಎಂದು ದಾಖಲಿಸಿಕೊಂಡು, ಇತ್ಯರ್ಥಪಡಿಸಲಾಗುವುದು ಎಂದು ಹೇಳಿದರು.

ಜನತಾ ನ್ಯಾಯಾಲಯದಲ್ಲಿ ಪಕ್ಷಗಾರರು ನೇರವಾಗಿ ಅಥವಾ ವಕೀಲರ ಮೂಲಕ ಭಾಗವಹಿಸಬಹುದು. ಉಭಯ ಪಕ್ಷಕಾರರು ರಾಜಿ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಲಾಗುವುದು. ಇಬ್ಬರಿಗೂ ಒಪ್ಪಿಗೆ ಆಗುವಂತೆ ಪ್ರಕರಣ ತೀರ್ಮಾನವಾಗುವುದರಿಂದ ಬಾಂಧವ್ಯ ಉಳಿದು ವಿವಾದ ತೀರ್ಮಾನವಾಗುತ್ತದೆ. ರಾಜಿ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯದ ಶುಲ್ಕ ಮರು ಪಾವತಿಸಲಾಗುವುದು. ಕಾರಣ ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಲೋಕ ಅದಾಲತ್‌ ಪಕ್ಷಗಾರರಿಗೆ ವರದಾನವಾಗಿದೆ. ವ್ಯಾಜ್ಯ ಪೂರ್ವ ಪ್ರಕರಣ ದಾಖಲಿಸಲು ಯಾವುದೇ ನ್ಯಾಯಾಲಯದ ಶುಲ್ಕ ಕೊಡಬೇಕಾಗಿಲ್ಲ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ಕುಲಕರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಕಳೆದ ಐದು ವರ್ಷಗಳಲ್ಲಿ 14 ಸಾವಿರಕ್ಕೂ ಅಧಿಕ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಲೋಕ ಅದಾಲತ್‌ನಲ್ಲಿ 250ಕ್ಕೂ ಹೆಚ್ಚು ಪ್ರಕರಣ ರಾಜಿ ಮೂಲಕ ಇತ್ಯರ್ಥಪಡಿಸಲಾಗಿದೆ. ಇದರಿಂದ ಉಭಯ ಪಕ್ಷಗಾರರಲ್ಲಿ ಪ್ರೀತಿ, ವಿಶ್ವಾಸ ಹೆಚ್ಚಲಿದ್ದು, ಸ್ವಾಸ್ಥ್ಯ ಸಮಾಜ ರೂಪಗೊಳ್ಳಲಿದೆ. 
 ಜಿ.ಎಸ್‌. ಸಂಗ್ರೇಶಿ. ಜಿಲ್ಲಾ ಕಾನೂನು
ಸೇವೆಗಳ ಪ್ರಾಧಿಕಾರ ಅಧ್ಯಕ್ಷ್ಯ 

Advertisement
Advertisement

Udayavani is now on Telegram. Click here to join our channel and stay updated with the latest news.

Next