Advertisement

ಗದಗ: ಮನುಷ್ಯತ್ವ ಬೆಳಗಲು ಬಸವ ತತ್ವ ಹಣತೆ ಪ್ರಜ್ವಲಿಸಲಿ

05:55 PM May 20, 2023 | Team Udayavani |

ಗದಗ: ದಿನೇ ದಿನೆ ಸ್ವಾರ್ಥ ಕೇಂದ್ರಿತವಾಗುತ್ತಿರುವ ಸಮಾಜವನ್ನು ಹಾಗೂ ಯಾಂತ್ರಿಕವಾಗುತ್ತಿರುವ ಬದುಕನ್ನು ಸರಿದಾರಿಗೆ ತಂದು ಮನುಷ್ಯತ್ವ ಬೆಳಗಿಸಲು ಬಸವ ತತ್ವವೆಂಬ ಹಣತೆ ಪ್ರಜ್ವಲಿಸಬೇಕು ಎಂದು ಸಾಹಿತಿ ಚಂದ್ರಶೇಖರ ವಸ್ತ್ರದ ಹೇಳಿದರು.

Advertisement

ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಅಜ್ಜಂಪುರಶೆಟ್ರ ಸೇವಾ ಟ್ರಸ್ಟ್‌, ದಾವಣಗೆರೆ ಬಸವ ಬಳಗ, ತೋಂಟದಾರ್ಯ ಮಠ ಹಾಗೂ ವಿವಿಧ ಬಸವಪರ ಸಂಘಟನೆಗಳ ಆಶ್ರಯದಲ್ಲಿ ಜರುಗಿದ 16ನೇ ಶರಣ ತತ್ವ ಕಮ್ಮಟ ಕಾರ್ಯಕ್ರಮದಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕಾವ್ಯಕ್ಕೆ ಭಾವಾರ್ಥ ಬರೆದಂತೆ ವಚನಗಳಿಗೆ ವ್ಯಾಖ್ಯಾನ ನೀಡಲು ಸಾಧ್ಯವಿಲ್ಲ. ಯಾಕೆಂದರೆ ವಚನಗಳು ಕೇವಲ ಕಾವ್ಯವಾಗಿರದೇ ಬದುಕಿನ ದಾರಿಗಳಾಗಿವೆ. ಬಸವಧರ್ಮವನ್ನು ಪ್ರಾಪಂಚಿಕ ಮೌಲ್ಯಗಳು ಹಾಗೂ ಪಾರಮಾರ್ಥಿಕ ಎಂಬ ಎರಡು ನೆಲೆಗಟ್ಟಿನಲ್ಲಿ ಅಧ್ಯಯನ ಮಾಡಬಹುದಾಗಿದ್ದು, ಬಸವ ತತ್ವದ ಪ್ರಾಪಂಚಿಕ ಮೌಲ್ಯಗಳ ಮೇಲೆ ಹೆಚ್ಚು ಬೆಳಕು ಚೆಲ್ಲಿ ಪಾರಮಾರ್ಥಿಕ ದೃಷ್ಟಿಕೋನವನ್ನು ನೇಪಥ್ಯಕ್ಕೆ ಸರಿಸುತ್ತಾ ಬಂದಿರುವುದು ಖೇದಕರ ಸಂಗತಿ ಎಂದರು.

ಅಜ್ಜಂಪುರಶೆಟ್ರ ಸೇವಾ ಟ್ರಸ್ಟ್‌ ಬಸವ ಧರ್ಮದ ಪಾರಮಾರ್ಥಿಕ ವಿಷಯಗಳಾದ ಲಿಂಗಾಂಗ ಯೋಗ, ಅಷ್ಟಾವರಣ, ಪಂಚಾಚಾರಗಳಂಥ ವಿಷಯಗಳ ಕುರಿತು ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ. ಈ ಕಮ್ಮಟಕ್ಕೆ ಬಸವಾಭಿಮಾನಿಗಳು ತಮ್ಮ ಮಕ್ಕಳನ್ನು ಸಹ ಕರೆತರಬೇಕೆಂದು ಹೇಳಿದರು.

ದಾವಣಗೆರೆ ಬಸವ ಬಳಗದ ಅಧ್ಯಕ್ಷ ಹುಚ್ಚಪ್ಪ ಮಾಸ್ತರ್‌ ಮಾತನಾಡಿ, ಗದಗು ಶರಣರ ಬೀಡಾಗಿದ್ದು, ಲಿಂ| ಡಾ| ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಬಸವತತ್ವ ಪ್ರಚಾರಕ್ಕೆ ನೀಡಿದ ಕೊಡುಗೆ ಅಮೋಘವಾಗಿದೆ. ಬಸವ ಧರ್ಮ ಕಂದಾಚಾರ ಹಾಗೂ ಮೂಢನಂಬಿಕೆಗಳಿಲ್ಲದ ವೈಜ್ಞಾನಿಕ ಧರ್ಮವಾಗಿದ್ದು, 21ರ ವರೆಗೆ ಜರುಗುವ ಶರಣ ಕಮ್ಮಟದ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

Advertisement

ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಬಸವ ಕಲಾ ಬಳಗದ ತಂಡದವರು ವಚನ ಪ್ರಾರ್ಥನೆ ನೆರವೇರಿಸಿದರು. ಶರಣ ಅಶೋಕ ಬರಗುಂಡಿ ಮಾತನಾಡಿ, ಶಿಬಿರಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರಶೆಟ್ರ, ಬಸವ ದಳದ ಅಧ್ಯಕ್ಷ ವಿ.ಕೆ. ಕರೇಗೌಡ್ರ, ಬಸವ ಕೇಂದ್ರದ ಕಾರ್ಯದರ್ಶಿ ಶೇಖರ ಕವಳಿಕಾಯಿ, ಶರಣ ಸಾಹಿತ್ಯ ಪರಿಷತ್‌  ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ ಅಸುಂಡಿ, ಸಂಸ್ಕೃತಿ ಚಿಂತಕ ಡಾ| ಜಿ.ಬಿ. ಪಾಟೀಲ ಇದ್ದರು. ಡಾ| ರಾಜಶೇಖರ ದಾನರಡ್ಡಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next