Advertisement

ಲಕ್ಷ್ಮೇಶ್ವರ ತಾಲೂಕಿಗಿಲ್ಲಸ್ವಾಯತ್ತತೆ

01:44 PM Sep 28, 2019 | Naveen |

ವೀರೇಂದ್ರ ನಾಗಲದಿನ್ನಿ
ಗದಗ: ನಮ್ಮ ಕಚೇರಿಯ ದಾಖಲೆಗಳಿಗೆ ರ್ಯಾಪರ್ ಬೇಕು. ಒಂದು ಬಂಡಲ್‌ ಬಿಳಿ ಹಾಳೆ, ಒಂದು ಗುಂಡು ಪಿನ್‌ ಬಾಕ್ಸ್‌ ಹಾಗೂ ಕಚೇರಿ ನಿರ್ವಹಣೆಗೆ ಒಂದಷ್ಟು ಅನುದಾನ ಕೊಡಿ!

Advertisement

ಇದು ಯಾವುದೋ ಖಾಸಗಿ ಸಂಸ್ಥೆ, ಚಾರಿಟೇಬಲ್‌ ಟ್ರಸ್ಟ್‌ನ ಕಥೆಯಲ್ಲ. 2017ರಲ್ಲಿ ಘೋಷಣೆಯಾದ ರಾಜ್ಯದ 49 ಹೊಸ ತಾಲೂಕುಗಳಲ್ಲಿ ಒಂದಾದ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ತಹಶೀಲ್ದಾರ್‌ ಕಚೇರಿಯ ವ್ಯಥೆ. ನೂತನ ತಾಲೂಕಾಗಿ ಅಸ್ಥಿತ್ವಕ್ಕೆ ಬಂದು ಬರೋಬ್ಬರಿ ಎರಡು ವರ್ಷಗಳು ಕಳೆದಿವೆ. ಆದರೆ, ಇಂದಿಗೂ ಎಲ್ಲದಕ್ಕೂ ಶಿರಹಟ್ಟಿ ತಾಲೂಕು ಬಳಿ ಕೈಯೊಡ್ಡುವ ಪರಿಸ್ಥಿತಿ ಇಲ್ಲಿಯದ್ದು. ಲಕ್ಷ್ಮೇಶ್ವರ ಒಂದೇ ಹೋಬಳಿಯೊಂದಿಗೆ ಘೋಷಣೆಯಾಗಿರುವ ಲಕ್ಷ್ಮೇಶ್ವರ ತಾಲೂಕು ನಾಮಕಾವಸ್ತೆ ಎಂಬಂತಿದೆ. ನೂತನ ತಾಲೂಕಾಗಿ ವರ್ಷಗಳು ಕಳೆದರೂ ಪರಿಪೂರ್ಣವಾಗಿ ಹೊಸ ತಾಲೂಕಾಗಿ ರಚನೆಯಾಗಿಲ್ಲ. ಸದ್ಯ ಸಬ್‌ ರೆಜಿಸ್ಟ್ರಾರ್‌, ಉಪಖಜಾನೆ ಹಾಗೂ ಪೊಲೀಸ್‌ ಠಾಣೆ ಹಾಗೂ ಕೋರ್ಟ್‌ ಹಾಗೂ ತಹಶೀಲ್ದಾರ್‌ ಕಚೇರಿಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.

2002ನೇ ಇಸ್ವಿಯ ನಂತರದ ಎಂ.ಆರ್‌., ರೈತರ ಪಹಣಿ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿಸಿ ಹಳೆ ದಾಖಲೆಗಳಲ್ಲಿ ಭಾಗಶಃ ವರ್ಗಾವಣೆಯಾಗಿವೆ. ಇನ್ನುಳಿದಂತೆ ತಾಲೂಕು ಮಟ್ಟದ ಕೃಷಿ ಇಲಾಖೆ, ತೋಟಗಾರಿಕೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಲೋಕೋಪಯೋಗಿ ಇಲಾಖೆಯ ಕಚೇರಿಗಳು ಕಾರ್ಯಾರಂಭಿಸಿಲ್ಲ. ಹೀಗಾಗಿ ಪ್ರತಿಯೊಂದಕ್ಕೂ ಸಾರ್ವಜನಿಕರು ಮತ್ತು ಅಧಿಕಾರಿಗಳು ಶಿರಹಟ್ಟಿ ತಾಲೂಕು ಕಚೇರಿಗಳಿಗೆ ಅಲೆದಾಡುವುದು ತಪ್ಪಿಲ್ಲ.

ತಹಶೀಲ್ದಾರ್‌ ಕಚೇರಿಗೆ ಆರ್ಥಿಕ ಸಂಕಷ್ಟ: ಜಿಲ್ಲೆಯ ಹೊಸ ತಾಲೂಕು ಎಂಬ ಗರಿಮೆ ಹೊಂದಿರುವ ಹೊಸ ತಾಲೂಕಿನ ತಹಶೀಲ್ದಾರ್‌ ಕಚೇರಿಗೆ ಆರ್ಥಿಕ ಸಂಕಷ್ಟ ಆವರಿಸಿದೆ. ಹಲವು ತಿಂಗಳಿಂದ ಬಿಎಸ್‌ ಎನ್‌ಎಲ್‌ ಸೇವಾ ಶುಲ್ಕ ಬಾಕಿ ಉಳಿಸಿಕೊಳ್ಳಲಾಗಿದೆ.

ಹೀಗಾಗಿ ಕಳೆದ ಎರಡ್ಮೂರು ತಿಂಗಳಿಂದ ಬಿಎಸ್‌ಎನ್‌ ಎಲ್‌ ದೂರವಾಣಿ ಮತ್ತು ಇಂಟರ್‌ ನೆಟ್‌ ಸೇವೆ ಕಡಿತಗೊಳಿಸಲಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಮುಖ್ಯಕಚೇರಿಯಿಂದ ಎಲ್ಲವೂ ಇ-ಮೇಲ್‌ ಮೂಲಕವೇ ಆದೇಶಗಳು ಬರುತ್ತವೆ. ಹಲವು ಕೆಲಸಕಾರ್ಯಗಳು, ಅರ್ಜಿಗಳ ವಿಲೇವಾರಿಗೆ ಇಂಟರ್‌ ನೆಟ್‌ ಬೇಕೇಬೇಕು. ಹೀಗಾಗಿ ಇಲ್ಲಿನ ತಮ್ಮ ವೈಯಕ್ತಿಕ ಮೊಬೈಲ್‌ಗ‌ಳಿಂದ ಹಾಟ್‌ಸ್ಪಾಟ್‌ ಮೂಲಕ ಇಂಟರ್‌ ನೆಟ್‌ ಬಳಸಿಕೊಳ್ಳುತ್ತಿದ್ದೇವೆ. ಸದ್ಯ ಹಳೇ ಎಪಿಎಂಸಿ ಕಟ್ಟಡದಲ್ಲಿ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ಮಳೆ ಬಂದರೆ ಛಾವಣಿ ಸೋರುತ್ತಿದೆ. ಇದರ ಮಧ್ಯೆಯೇ ಕೆಲಸ ಮಾಡುವಂತಾಗಿದೆ ಎಂದು ಸ್ಥಳೀಯ ಸಿಬ್ಬಂದಿ ಅಸಹಾಯಕತೆ ತೋಡಿಕೊಂಡರು.

Advertisement

ನೂತನ ತಾಲೂಕು ಆಗಿ ಅಸ್ಥಿತ್ವಕ್ಕೆ ಬಂದ ಬಳಿಕ ಈ ವರೆಗೆ 15 ಲಕ್ಷ ಮಾತ್ರ ಬಿಡುಗಡೆಯಾಗಿದೆ. ತಾಲೂಕು ಘೋಷಣೆಯಾಗುತ್ತಿದ್ದಂತೆ ಸರಕಾರದಿಂದ 10 ಲಕ್ಷ ರೂ. ಮಂಜೂರಾಗಿತ್ತು. ಕಳೆದ ಏಪ್ರಿಲ್‌ನಲ್ಲಿ ಜಿಲ್ಲಾಡಳಿತದಿಂದ 5 ಲಕ್ಷ ರೂ. ಮಾತ್ರ ಬಿಡುಗಡೆಯಾಗಿದೆ. ಇದೇ ಅನುದಾನದಲ್ಲಿ ತಲಾ ಎರಡು ಕಂಪ್ಯೂಟರ್‌ ಹಾಗೂ ಪ್ರಿಂಟರ್‌ಗಳನ್ನು ಖರೀದಿಸಿದ್ದು, ಕಚೇರಿ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತಿದೆ. ಅದನ್ನೂ ಶಿರಹಟ್ಟಿ ತಹಶೀಲ್ದಾರರ ಖಾತೆಗೆ ಮೂಲಕ ವರ್ಗಾಯಿಸಿಕೊಳ್ಳಲಾಗಿದೆ. ನೇರವಾಗಿ ಅನುದಾನ ಪಡೆಯುವ ಸ್ವತಂತ್ರವೂ ಹೊಸ ತಾಲೂಕುಗಳಿಗಿಲ್ಲ. ಲಕ್ಷ್ಮೇಶ್ವರ ಕಚೇರಿಗೆ ಏನೇ ಬೇಕಿದ್ದರೂ ಶಿರಹಟ್ಟಿ ತಹಶೀಲ್ದಾರರಲ್ಲಿ ಅರಿಕೆ ಮಾಡಿಕೊಳ್ಳುವುದು ಇಲ್ಲಿನ ಅನಿವಾರ್ಯತೆ ಹಿಡಿದ ಕನ್ನಡಿ.

Advertisement

Udayavani is now on Telegram. Click here to join our channel and stay updated with the latest news.

Next