ಗದಗ: ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದಾಗಿ ನಗರದಲ್ಲಿ ವೃದ್ಧೆ ಮೃತಪಟ್ಟ ಹಿನ್ನೆಲೆಯಲ್ಲಿ ವೃದ್ಧೆ ವಾಸಿಸುತ್ತಿದ್ದ ರಂಗನವಾಡವನ್ನು ಕಂಟೇನ್ಮೆಂಟ್ ಎಂದು ಘೋಷಿಸಿ ಐದು ದಿನಗಳು ಕಳೆದಿವೆ.
ಸ್ಥಳೀಯರಿಗೆ ಕಿರಾಣಿ ಹಾಗೂ ತರಕಾರಿ ದೊರೆಯದೇ ಪರದಾಡುವಂತಾಗಿದೆ. ಕೊರೊನಾ ಪ್ರಕರಣ ಖಚಿತವಾಗುತ್ತಿದ್ದಂತೆ ಈ ಭಾಗದ ಬಡಾವಣೆಗಳಲ್ಲಿ ಜಿಲ್ಲಾಡಳಿತ ದಿಗ್ಬಂಧನ ವಿಧಿಸಿತು. ಎಲ್ಲ ಕಿರಾಣಿ ಹಾಗೂ ದಿನಸಿ ಅಂಗಡಿಗಳನ್ನು ಮುಚ್ಚಿಸಲಾಗಿದೆ. ಬಳಿಕ ರಾಜ್ಯ ಸರಕಾರ ಘೋಷಿಸಿರುವಂತೆ ಈ ಭಾಗದ ನ್ಯಾಯಬೆಲೆ ಅಂಗಡಿಗಳಿಂದ ಎರಡು ತಿಂಗಳಿಗೆ ಸಾಕಾಗುವಷ್ಟು ಅಕ್ಕಿ ಹಾಗೂ ಗೋಧಿ ಒದಗಿಸಲಾಗಿದೆ. ಐದು ದಿನಗಳಿಂದ ಮನೆಯಲ್ಲಿದ್ದ ಆಹಾರ ಸಾಮಗ್ರಿಗಳನ್ನು ಬಳಕೆ ಮಾಡಿದ್ದಾರೆ. ಸರಕಾರದ ಆದೇಶವಿದ್ದರೂ ಈ ಭಾಗದ ಕೆಲ ಓಣಿಗಳಿಗೆ ಹಾಲು ವಿತರಣೆಯಾಗಿಲ್ಲ. ಬಡಾವಣೆಯ ಕೆಲವರ ಮನೆಗಳಲ್ಲಿ ದಿನಸಿ ವಸ್ತುಗಳು ಖಾಲಿಯಾಗಿದ್ದರಿಂದ ಜನರು ನಿರ್ಬಂಧಿತ ಪ್ರದೇಶದ ಗಡಿ ದಾಟುವಂತಾಗಿದೆ.
ಪೊಲೀಸರಿಗೆ ಕಿರಿಕಿರಿ: ಮನೆಯಲ್ಲಿ ಸಕ್ಕರೆ, ಚಹಾಪುಡಿ ಹಾಗೂ ಮಕ್ಕಳಿಗೆ ಬಿಸ್ಕೀಟ್ ಖರೀದಿಗಾಗಿ ಮನೆಯಿಂದ ಹೊರಬರಲು ಯತ್ನಿಸುವವರ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾ ಕಂಟೇನ್ಮೆಂಟ್ ಪ್ರದೇಶದಲ್ಲಿರುವವರು ಹೊರ ಬರಲು ಅವಕಾಶವಿಲ್ಲ. ಹೀಗಾಗಿ ಕಂಟೇನ್ಮೆಂಟ್ ಪ್ರದೇಶದ ಸುತ್ತಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಆದರೂ ಕೆಲವೊಮ್ಮೆ ಕಣ್ತಪ್ಪಿಸಿ ಜನರು ಓಡಾಡುತ್ತಿರುವುದು ಪೊಲೀಸ್ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.
ಶನಿವಾರ ಮಹಿಳೆಯರು ಓಣಿಯಲ್ಲಿ ಒಟ್ಟುಗೂಡಿ ಖಾಲಿ ಚೆಂಬುಗಳನ್ನು ಹಿಡಿದು ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾಡಳಿತದ ವಿರುದ್ಧಧಿಕ್ಕಾರ ಕೂಗಿದರು. ಅಗತ್ಯ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದ ಜಿಲ್ಲಾಡಳಿತ ಈ ಬಗ್ಗೆ ಕಿಂಚಿತ್ತೂ ಗಮನ ಹರಿಸುತ್ತಿಲ್ಲ. ಅಕ್ಕಿ, ಗೋಧಿಯನ್ನು ಹೊರತು ಪಡಿಸಿ ಮತ್ತೇನು ನೀಡಿಲ್ಲ. ಒಳಚರಂಡಿ ವ್ಯವಸ್ಥೆ ಸರಿ ಇಲ್ಲದೇ, ಜನರು ಬಯಲಿಗೆ ಹೋಗುತ್ತಿದ್ದರು. ಈಗ ಅದಕ್ಕೂ ಅವಕಾಶವಿಲ್ಲದಂತಾಗಿದೆ ಎಂದು ಮಹಿಳೆಯರು ಪ್ರತಿಭಟಿಸಿದರು.