ಗದಗ: ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಹಣ ಪಡೆದಿದ್ದಾರೆ. ಟಿಕೆಟ್ ಮಾರಾಟ ಮಾಡಿದ್ದಾರೆ ಎಂಬ ಮಾಜಿ ಶಾಸಕ ರಾಮಣ್ಣ ಲಮಾಣಿ ಅವರ ಹೇಳಿಕೆ ಸುಳ್ಳು. ಈ ಆರೋಪ ಸತ್ಯಕ್ಕೆ ದೂರವಾಗಿದ್ದು ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಾವ ಅಭ್ಯರ್ಥಿ ಗೆಲುವನ್ನು ಸಾಧಿಸುತ್ತಾನೆ ಎಂಬುದನ್ನು ಸರ್ವೇ ನಡೆಸಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ. ಅದರಲ್ಲೂ ವಿಧಾನಸಭಾ ಚುನಾವಣೆ ಸಮಯದಲ್ಲಿ ಮೊದಲ ಪಟ್ಡಿಯಲ್ಲೇ ಶಿರಹಟ್ಟಿ ಮತಕ್ಷೇತ್ರದಲ್ಲಿ ನನ್ನ ಹೆಸರೇ ಘೋಷಣೆಯಾಗಿತ್ತು ಎಂದು ಹೇಳಿದರು.
ಎಸ್‌ಸಿ ಮೀಸಲಾಗಿರುವ ಕ್ಷೇತ್ರ ಶಿರಹಟ್ಡಿ ಮತಕ್ಷೇತ್ರ ಹಿಂದುಳಿಯಲು ಮಾಜಿ ಶಾಸಕ ರಾಮಣ್ಣ ಲಮಾಣಿ ಅವರೇ ಕಾರಣರಾಗಿದ್ದಾರೆ. ರಾಮಣ್ಣ ಲಮಾಣಿ ಅವರು ಹತಾಶೆಯಿಂದ ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಲೋಕಸಭೆ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಗೆ ಶಿರಹಟ್ಟಿ ಮತಕ್ಷೇತ್ರದಲ್ಲಿ ಅತ್ಯಧಿಕ ಮತಗಳ ಲೀಡ್ ಕೊಡುವ ಮೂಲಕ ಅವರ ಗೆಲುವುಗೆ ಶ್ರಮಿಸಲಾಗುವುದು. ಅವರ ಗೆಲುವು ನಿಶ್ಚಿತ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ರಾಮಣ್ಣ ಲಮಾಣಿ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಬಿಜೆಪಿ ರಾಮಣ್ಣ ಲಮಾಣಿ ಅವರಿಗೆ ಮೂರು ಬಾರಿ ವಿಧಾನಸಭಾ ಟಿಕೆಟ್ ನೀಡಿತ್ತು. ಒಂದು ಬಾರಿ ಜಿಪಂ ಟಿಕೆಟ್ ನೀಡಿತ್ತು. ಬಿಜೆಪಿಯಲ್ಲಿ ದುಡ್ಡು ಪಡೆದು ಟಿಕೆಟ್ ನೀಡುವ ಅವಕಾಶವೇ ಇಲ್ಲ. ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಹತಾಶೆಗೊಂಡು ಇಲ್ಲ ಸಲ್ಲದ ಹೇಳಿಕೆ ನೀಡಿ, ಸುಳ್ಳು ಆರೋಪ ಮಾಡಿರುವುದು ಖಂಡನೀಯ ಎಂದು ಹೇಳಿದರು.
ರಾಮಣ್ಣ ಲಮಾಣಿ ಅವರು ಬಹಳ ಮುಗ್ಧರಾಗಿದ್ದು, ಸ್ವಂತ ಆಲೋಚನೆ ಮಾಡುವ ಶಕ್ತಿಯಿಲ್ಲ. ಬೇರೆ ಯಾರೋ ಹೇಳಿದ್ದನ್ನು ಸುಲಭವಾಗಿ ನಂಬಿಬಿಡುತ್ತಾರೆ. ಈ ಹಿಂದೆ ಬಿಜೆಪಿ ಟಿಕೆಟ್ ಪಡೆದು ಶಾಸಕರಾಗಿದ್ದು, ಅವರರು ಹಿಂದೆ ಹೇಗೆ ಟಿಕೆಟ್ ಪಡೆದಿದ್ದರು ಎಂಬುದರ ಅರಿವು ಅವರಿಗಿದೆ. ಆದ್ದರಿಂದ ಬೇರೆಯವರ ಮಾತು ಕೇಳಿ ಆರೋಪ ಮಾಡುವುದನ್ನು ಕೈಬಿಡಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಮುಖಂಡರಾದ ಎಂ.ಎಂ. ಹಿರೇಮಠ, ಅಶೋಕ ಸಂಕಣ್ಣವರ, ದತ್ತಣ್ಣ ಜೋಶಿ, ವಿನಾಯಕ ಹಬೀಬ ಸೇರಿ ಅನೇಕರು ಇದ್ದರು.