Advertisement

ವಿದ್ಯಾರ್ಥಿಗಳ ಪಾಠಕ್ಕೂ ನೆರೆ ಅಡ್ಡಿ

01:27 PM Aug 29, 2019 | Team Udayavani |

ವೀರೇಂದ್ರ ನಾಗಲದಿನ್ನಿ
ಗದಗ:
ಮಲಪ್ರಭೆ ಹಾಗೂ ಬೆಣ್ಣಿಹಳ್ಳ ಸೃಷ್ಟಿಸಿದ್ದ ಪ್ರವಾಹ ನರಗುಂದ ಮತ್ತು ರೋಣ ತಾಲೂಕಿನ ವಿವಿಧ ಗ್ರಾಮಗಳ ಜನರ ಜೀವನದ ಮೇಲಷ್ಟೇ ಪರಿಣಾಮ ಬೀರಿಲ್ಲ. ಜೊತೆಗೆ ಈ ಭಾಗದ ಶಾಲಾ ಮಕ್ಕಳ ಶೈಕ್ಷಣಿಕ ಹಕ್ಕನ್ನೇ ಕಸಿದುಕೊಂಡಿದೆ. ವಿವಿಧೆಡೆ ಪ್ರವಾಹದಲ್ಲಿ ಮುಳುಗಡೆಯಾಗಿದ್ದ ಶಾಲೆಗಳು ಇಂದೋ-ನಾಳೆಯೋ ಬೀಳುವ ಹಂತಕ್ಕೆ ತಲುಪಿದ್ದು, ಸಾವಿರಾರು ವಿದ್ಯಾರ್ಥಿಗಳನ್ನು ಬೀದಿಗೆ ತಂದು ನಿಲ್ಲಿಸಿದೆ.

Advertisement

ಜಿಲ್ಲೆಯ ನರಗುಂದ ತಾಲೂಕಿನ 8 ಮತ್ತು ರೋಣ ತಾಲೂಕಿನ 16 ಗ್ರಾಮಗಳಲ್ಲಿ ಮಲಪ್ರಭಾ ನದಿ ಹಾಗೂ ಬೆಣ್ಣಿಹಳ್ಳದಿಂದ ಉಂಟಾಗಿದ್ದ ನೆರೆಯಿಂದ ಆದ ಹಾನಿ ಅಷ್ಟಿಷ್ಟಲ್ಲ. ಜಿಲ್ಲೆಯ 23 ಗ್ರಾಮಗಳ ನೂರಾರು ಮನೆಗಳೊಂದಿಗೆ ಆಯಾ ಗ್ರಾಮ ಶಾಲಾ ಕೊಠಡಿಗಳು ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಪ್ರವಾಹ ಪರಿಸ್ಥಿತಿಯಿಂದಾಗಿ ಜನರನ್ನು ನವ ಗ್ರಾಮಗಳಿಗೆ ಸ್ಥಳಾಂತರಿಸಲಾಗಿದೆ. ಗ್ರಾಮಸ್ಥರೊಂದಿಗೆ ಶಾಲೆಗಳೂ ಸ್ಥಳಾಂತರವಾಗಿದ್ದರೂ ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಟ್ಟಡಗಳಿಲ್ಲ. ಹೀಗಾಗಿ ಒಂದೇ ತರಗತಿ ಕೊಠಡಿಯಲ್ಲಿ ಎರೆಡು-ಮೂರು ತರಗತಿಗಳು ನಡೆದರೆ, ಇನ್ನಿತರೆ ಶಾಲೆಗಳಲ್ಲಿ ಮಕ್ಕಳು ಕಾರಿಡಾರ್‌ನಲ್ಲೇ ಕುಳಿತು ಪಾಠ ಕೇಳುವ ಅನಿವಾರ್ಯತೆ ಸೃಷ್ಟಿಸಿದೆ.

ವಿದ್ಯಾರ್ಥಿಗಳಿಗೆ ಕೊಠಡಿಗಳ ಕೊರತೆ: ಆ ಪೈಕಿ ರೋಣ ತಾಲೂಕಿನ ಕುರುವಿನಕೊಪ್ಪ ನವ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿ ವರೆಗೆ ಒಟ್ಟು 27 ವಿದ್ಯಾರ್ಥಿಗಳಿಗೆ ಒಂದೇ ಕೊಠಡಿ. ಅದರಂತೆ ನಿ.ಎಸ್‌. ಬೇಲೇರಿ ಪ್ರೌಢಶಾಲೆಯ 8ರಿಂದ 10ನೇ ತರಗತಿ ವರೆಗೆ 56 ವಿದ್ಯಾರ್ಥಿಗಳಿದ್ದು, ಪ್ರಾಥಮಿಕ ಶಾಲೆಯ 104, ಹೊಳೆಹಡಗಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 89 ವಿದ್ಯಾರ್ಥಿಗಳು ತಲಾ ಎರಡು ಕೊಠಡಿಗಳಲ್ಲಿ ಕಲಿಯುವಂತಾಗಿದೆ.

ಅದರಲ್ಲೂ ಕೆಲ ಶಾಲೆಗಳ ಒಂದು ಕೊಠಡಿಯಲ್ಲೇ ಬಿಸಿಯೂಟದ ಸಾಮಗ್ರಿ, ಸಿಲಿಂಡರ್‌ಗಳನ್ನು ದಾಸ್ತಾನು ಮಾಡಲಾಗಿದೆ. ಮಕ್ಕಳಿಗೆ ನೈಸರ್ಗಿಕ ಕೆರೆಗೆ ಬಯಲೇ ಗತಿ. ಇನ್ನು, ಹೊಳೆಮಣ್ಣೂರು, ಹೊಳೆಆಲೂರು, ಬಸರಕೊಡ ನವ ಗ್ರಾಮಗಳ ಸರಕಾರಿ ಶಾಲೆಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

6 ಸಾವಿರ ಮಕ್ಕಳಿಗಿಲ್ಲ ಪಠ್ಯ ಪುಸ್ತಕ: ಜಿಲ್ಲೆಯ ನರಗುಂದ ಮತ್ತು ರೋಣ ತಾಲೂಕಿನಲ್ಲಿ ಉಂಟಾಗಿದ್ದ ಪ್ರವಾಹ ಆ ಭಾಗದ ಹೊಲ-ಮನೆ ಸೇರಿದಂತೆ ಸಾವಿರಾರು ಮುದ್ದು ಕಂದಮ್ಮಗಳ ಪಠ್ಯ ಪುಸ್ತಕಗಳೂ ಕೊಚ್ಚಿ ಹೋಗಿವೆ. ಮನೆ ಅಂಗಳದಲ್ಲೇ ನಿಂತಿದ್ದ ಯಮಸ್ವರೂಪಿ ನೆರೆ ನೀರಿನಿಂದ ರಕ್ಷಿಸಿಕೊಂಡರೆ ಸಾಕು ಎಂದು ಮನೆ ಮಂದಿಯೆಲ್ಲ ಇದ್ದ ಸ್ಥಿತಿಯಲ್ಲೇ ಸುರಕ್ಷಿತ ಸ್ಥಾನಕ್ಕೆ ಬಂದಿದ್ದರು. ಹೀಗಾಗಿ ಮನೆಯಲ್ಲಿದ್ದ ದಿನಬಳಕೆ ವಸ್ತುಗಳೊಂದು ಮಕ್ಕಳ ಶಾಲಾ ಪುಸ್ತಕಗಳೂ ಹರಿದು ಹೋಗಿವೆ.

Advertisement

ಆ ಪೈಕಿ ನರಗುಂದ ತಾಲೂಕಿನ 8 ಗ್ರಾಮಗಳ 21 ಸರಕಾರಿ ಪ್ರಾಥಮಿಕ, 3 ಅನುದಾನಿ ಹಾಗೂ 3 ಅನುದಾನ ರಹಿತ ಮತ್ತು ಪ್ರೌಢ ಶಾಲೆಗಳಲ್ಲಿ 3 ಸರಕಾರಿ, 4 ಅನುದಾನಿತ ಶಾಲೆಗಳು ಸೇರಿದಂತೆ 3,997 ಮಕ್ಕಳ ಪುಸ್ತಕಗಳು ಹಾನಿಯಾಗಿವೆ. ರೋಣ ತಾಲೂಕಿನ 16 ಗ್ರಾಮಗಳ 23 ಸರಕಾರಿ ಶಾಲೆಗಳ ಸುಮಾರು 2 ಸಾವಿರ ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳು ನೆರೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಕೆಲವರು ಪ್ರವಾಹ ಇಳಿದ ಬಳಿಕ ಮನೆಯಲ್ಲಿ ಅಳಿದುಳಿದ ಪುಸ್ತಕಗಳನ್ನು ತಂದು, ಬಿಸಿಲಿಗಿ ಒಣಗಿಸಿಕೊಂಡಿದ್ದಾರೆ. ಹೀಗಾಗಿ ಶಾಲೆಯ ಬೆರಳೆಣಿಕೆಯಷ್ಟು ಮಕ್ಕಳಲ್ಲಿ ಒಂದೆರಡು ಪಠ್ಯ ಪುಸ್ತಕಗಳಿದ್ದರೆ ಅದೇ ಹೆಚ್ಚು. ಪಠ್ಯ ಪುಸ್ತಕಗಳಿಲ್ಲದ ಮಕ್ಕಳು ಸಹಪಾಠಿಗಳಿಂದ ಪುಸ್ತಕಗಳನ್ನು ಪಡೆದು ಅಧ್ಯಯನ ನಡೆಸುವಂತಾಗಿದೆ. ಪುಸ್ತಕಗಳ ಕೊರತೆಯಿಂದ ತಾವು ಮಾಡುವ ಬೋಧನೆಯೂ ಪರಿಣಾಮಕಾರಿಯಾಗುತ್ತಿಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಶಿಕ್ಷಕರು.

Advertisement

Udayavani is now on Telegram. Click here to join our channel and stay updated with the latest news.

Next