Advertisement

ಮಾಸ್ಕ್ ಇಲ್ಲದೇ ಹೊರಗೆ ಬಂದರೆ ದಂಡ

04:00 PM May 08, 2020 | Naveen |

ಗದಗ: ರಸ್ತೆ ಮೇಲೆ ಉಗುಳಿದರೆ, ಮಾಸ್ಕ್ ಹಾಕದೇ ಹೊರಗೆ ಬಂದರೆ ಹುಷಾರ್‌..! ಕೋವಿಡ್‌-19 ಹರಡುವಿಕೆ ತಡೆಯಲು ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವವರಿಗೆ ಗದಗ-ಬೆಟಗೇರಿ ನಗರಸಭೆಯಿಂದ 100 ರೂ. ದಂಡ ವಿಧಿಸಲಾಗುತ್ತಿದೆ.

Advertisement

ಮಾಸ್ಕ್ ಕಟ್ಟಿಕೊಳ್ಳದೇ ಬೈಕ್‌, ಕಾರ್‌ಗಳಲ್ಲಿ ಸಂಚರಿಸುವವರು ಹಾಗೂ ಸಾರ್ವಜನಿಕ ರಸ್ತೆಗಳಲ್ಲಿ ಓಡಾಡುವವರ ಮೇಲೆ ನಗರಸಭೆ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದೆ. ಅಲ್ಲಲ್ಲಿ ಜನರು ಮುಖಕ್ಕೆ ಮಾಸ್ಕ್ ಧರಿಸದೇ, ಓಡಾಡುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಎಚ್ಚೆತ್ತುಕೊಂಡ ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರ ಮಾರ್ಗದರ್ಶನ, ಪೌರಾಯುಕ್ತ ಮನ್ಸೂರ್‌ ಅಲಿ ಅವರ ನೇತೃತ್ವದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ಹಾಕುವ ಮೂಲಕ ಬಿಸಿ ಮುಟಿಸಲಾಗುತ್ತಿದೆ.

150ಕ್ಕಿಂತ ಹೆಚ್ಚು ಜನರಿಗೆ ದಂಡ: ಈ ಅಭಿಯಾನಕ್ಕೆ ನಗರಸಭೆ ಗುರುವಾರ ಚಾಲನೆ ನೀಡಿದ್ದು, ಗದಗ ಹಾಗೂ ಬೆಟಗೇರಿ ಭಾಗದಲ್ಲಿ ಎರಡು ತಂಡಗಳಲ್ಲಿ ತಲಾ ನಾಲ್ವರು ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ಮಾಸ್ಕ್ ಧರಿಸದವರ ಹೆಸರು, ವಿಳಾಸ ಹಾಗೂ ಮೊಬೈಲ್‌ ನಂಬರ್‌ ದಾಖಲಿಸಿಕೊಂಡು 100 ರೂ. ದಂಡ ವಿಧಿಸುತ್ತಿದ್ದಾರೆ. ಕಾರ್ಯಾ‌ಚರಣೆಯ ಮೊದಲ ದಿನವೇ 150ಕ್ಕಿಂತ ಹೆಚ್ಚು ಜನರಿಗೆ ದಂಡ ವಿಧಿಸಿದ್ದು, ಸುಮಾರು 1500 ರೂ. ದಂಡ ವಸೂಲಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ದಂಡ ವಿಧಿಸಿ, ರಶೀದಿಯೊಂದಿಗೆ ಉತ್ತಮ ಗುಣಮಟ್ಟದ ಮಾಸ್ಕ್ ವಿತರಿಸುತ್ತಿದ್ದಾರೆ. ಒಂದೊಮ್ಮೆ ಒಂದೇ ಕುಟುಂಬದ ಇಬ್ಬರು-ಮೂವರು ಒಟ್ಟಾಗಿ ಸಂಚರಿಸುತ್ತಿದ್ದಾಗ ಸಿಕ್ಕಿಬಿದ್ದರೂ, ಒಬ್ಬರಿಗೆ ದಂಡ ವಿಧಿಸಿ, ಎಲ್ಲರಿಗೂ ಮಾಸ್ಕ್ ವಿತರಿಸಲಾಗುತ್ತಿದೆ. ಈ ಮೂಲಕ ಮಹಾಮಾರಿ ಕೊರೊನಾ ತಡೆಗೆ ಮಾಸ್ಕ್ ಧರಿಸುವುದು ಕಡ್ಡಾಯ ಎಂಬ ಸಂದೇಶ ಸಾರುತ್ತಿದ್ದಾರೆ.

ಹಿರಿಯ ನಾಗರಿಕರಿಗೆ ಉಚಿತ ಮಾಸ್ಕ್: ನಗರಸಭೆ ಕಾರ್ಯಾಚರಣೆ ವೇಳೆ ಕಂಡು ಬಂದ ಸುಮಾರು 60-70 ಹಿರಿಯ ನಾಗರಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಲಾಗಿದೆ. ಅಲ್ಲದೇ ಕೊರೊನಾ ಸೋಂಕಿನಿಂದ 10 ವರ್ಷದೊಳಗಿನ ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಹೆಚ್ಚು ಅಪಾಯ ಎಂಬುದನ್ನು ಮನವರಿಕೆ ಮಾಡುತ್ತಿದ್ದೇವೆ ಎಂದು ನಗರಸಭೆ ಪೌರಕಾರ್ಮಿಕ ಚಂದ್ರು ಹಾದಿಮನಿ ಮಾಹಿತಿ ನೀಡಿದರು.

Advertisement

ಅವಳಿ ನಗರದಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿರುವವರಿಗೆ ಸದ್ಯ 100 ರೂ. ದಂಡ ವಿ ಧಿಸುತ್ತಿದ್ದೇವೆ. ಮುಂದಿನ 5 ದಿನಗಳ ನಂತರವೂ ಜನರು ಇದೇ ಪರಿಪಾಠ ಮುಂದುವರಿಸಿದರೆ ದಂಡದ ಮೊತ್ತ 250 ರೂ. ಆಗಲಿದೆ. ದಂಡ ಸಂಗ್ರಹಿಸುವುದರ ಜೊತೆಗೆ ಗುಣಮಟ್ಟದ ಮಾಸ್ಕ್ ನೀಡುತ್ತಿದ್ದೇವೆ. ಜನರಿಗೆ ದಂಡ ವಿಧಿಸುವುದು ನಮ್ಮ ಉದ್ದೇಶವಲ್ಲ. ಜನರು ಜಾಗೃತರಾಗಬೇಕು. ಮಾಸ್ಕ್ ಇಲ್ಲದೇ ಹೊರಗೆ ಬರಬಾರದು ಎಂಬುದಷ್ಟೇ ನಮ್ಮ ಉದ್ದೇಶ.
ಗಿರೀಶ ತಳವಾರ,
ನಗರಸಭೆ ಪರಿಸರ ಅಭಿಯಂತರ

Advertisement

Udayavani is now on Telegram. Click here to join our channel and stay updated with the latest news.

Next