Advertisement

Gadaga: ಮಾನವನ ಬಾಳಿಗೆ ಬೆಳಕು ನೀಡುತ್ತೆ ಶಿಕ್ಷಣ

06:14 PM Sep 25, 2023 | Team Udayavani |

ಗದಗ: ಶಿಕ್ಷಣ ಬಾಳಿಗೆ ಬೆಳಕು ನೀಡಬಲ್ಲದು. ಉನ್ನತ ಶಿಕ್ಷಣದಿಂದ ಅತ್ಯುನ್ನತ ಸ್ಥಾನ ತಲುಪಲು ಸಾಧ್ಯ ಎಂದು ಅಡವೀಂದ್ರಸ್ವಾಮಿ ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ ಅಭಿಪ್ರಾಯಪಟ್ಟರು.

Advertisement

ನಗರದ ಕೃಷಿ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ (ಮೇವಾ)ದ ಜಿಲ್ಲಾ ಘಟಕದ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ
ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ವೀರಶೈವ ಮಠ-ಮಂದಿರಗಳು ಶಿಕ್ಷಣಕ್ಕೆ ಬಹು ದೊಡ್ಡ ಕೊಡುಗೆ ನೀಡಿವೆ. ಸಾಕ್ಷರತೆ ಮೂಡಿಸುವ, ಸಾಕ್ಷರತೆಯನ್ನು ಆಂದೋಲನದ ರೀತಿಯಲ್ಲಿ ಕ್ರಾಂತಿಕಾರಕವಾಗಿ ವೈಚಾರಿಕ ಪ್ರಜ್ಞೆ ಮೂಡಿಸಿದ ಹೆಗ್ಗಳಿಕೆ ಲಿಂಗಾಯತ, ವೀರಶೈವ ಮಠಗಳಿಗೆ ಸಲ್ಲುತ್ತದೆ. ಮುಂದುವರೆದ ಭಾಗವಾಗಿ ಇಂದಿಗೂ ಮಠ-ಮಂದಿರಗಳು ಉನ್ನತ ಶಿಕ್ಷಣ ಸಂಸ್ಥೆ ಹುಟ್ಟುಹಾಕಿ ತಮ್ಮ ಕೈಂಕರ್ಯ ಮುಂದುವರೆಸಿವೆ ಎಂದರು. ಇಸ್ಲಾಂ ಧರ್ಮವೂ ಇದಕ್ಕೆ ಹೊರತಾಗಿಲ್ಲ. ಮಸೀದಿ, ಪ್ರಾರ್ಥನಾ ಮಂದಿರಗಳು ಭಕ್ತಿ, ಜ್ಞಾನದೊಂದಿಗೆ ಶಿಕ್ಷಣ ನೀಡುವ ಕಾರ್ಯ ಮಾಡಿವೆ. ಮದರಸಾಗಳು ಈ ಕಾರ್ಯವನ್ನು ಮುಂದುವರೆಸಿವೆ. ಶಿಕ್ಷಣ, ಸಂಗೀತ, ಸಾಹಿತ್ಯಕ್ಕೆ ಮುಸ್ಲಿಂ ಸಮುದಾಯದ ಕೊಡುಗೆಯೂ ಅನುಪಮವಾದದ್ದು ಎಂದು ಹೇಳಿದರು.

ಗದುಗಿನ ಕ್ವೆಸ್ಟ್‌ ಫೌಂಡೇಶನ್‌ ಕಾರ್ಯನಿರ್ವಾಹಕ ನಿರ್ದೇಶಕ ಮುಹಮ್ಮದ್‌ ಮನ್ಸೂರ ಅಲ್‌ ಖಾದ್ರಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯದವರು ಸಣ್ಣಪುಟ್ಟ ಉದ್ಯೋಗ ಮಾಡಿಕೊಂಡು ಉಪಜೀವನ ನಡೆಸುತ್ತ ಬಂದವರು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕು. ಶಿಕ್ಷಣದಿಂದ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದರು.

ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವಿಂದು ವೃತ್ತಿಪರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಆಧುನಿಕ ಮತ್ತು ಸ್ಪರ್ಧಾತ್ಮಕ ಇಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ
ಕಲಿಕೆ ಕವಲೊಡೆಯುತ್ತಿವೆ. ಪದವಿ ಶಿಕ್ಷಣದ ಬಳಿಕ ಉನ್ನತ ಶಿಕ್ಷಣಕ್ಕೆ ಮಾರ್ಗಗಳು ವೈದ್ಯಕೀಯ, ತಾಂತ್ರಿಕ, ಕಂಪ್ಯೂಟರ್‌ ವಿಜ್ಞಾನ ಅಲ್ಲದೇ, ಹಲವಾರು ವೈವಿಧ್ಯಮ ಕೋರ್ಸ್‌ಗಳು ಬಂದಿದ್ದು, ಬದಲಾದ ಸನ್ನಿವೇಶಕ್ಕೆ ನಮ್ಮ ಜೀವನ ಶೈಲಿಯನ್ನು ಬದಲಾಯಿಸುವುದು ಅನಿವಾರ್ಯ ಎಂದರು.

Advertisement

ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಮೇವಾ ಸಂಘಟನೆಯ ಅಬ್ದುಲ್‌ರಹೀಮ ಖಾಜಿ, ಸಲೀಂ ಅಹ್ಮದ ಹಂಚಿನಮನಿ, ಡಾ| ಪ್ಯಾರಅಲಿ ನೂರಾನಿ, ಅಬ್ದುಲ್‌ ರಜಾಕ ಡಂಕೇದ, ಮೋದಿನಸಾಬ ಬುಕ್ಕಿಟಗಾರ ಅವರು ಶಿಕ್ಷಣ, ಸಂಘಟನೆ, ಪ್ರತಿಭಾ ಪುರಸ್ಕಾರದ ಬಗ್ಗೆ ಮಾತನಾಡಿದರು.

ಸಮಾರಂಭದಲ್ಲಿ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮೇವಾ ಗದಗ ಜಿಲ್ಲಾ ಅಧ್ಯಕ್ಷ ಡಾ| ಸಿ.ಎಂ. ರಫೀ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಮೇವಾದ ರಾಜ್ಯ ಸಂಘಟನಾ ಕಾರ್ಯದರ್ಶಿ ನಿಯಾಜ್‌ಅಹ್ಮದ್‌ ಹಂಚಿನಮನಿ, ನುಮೇರ್‌ ನೂರಾನಿ, ರಿಜ್ವಾನ ಕೌಲಗೇರಿ, ಎಂ.ಜೆ.  ನದಾಫ, ಶಬ್ಬೀರ ಮುಲ್ಲಾ, ಎಸ್‌.ಎಸ್‌. ಚೌಥಾಯಿ, ಮೆಹಬೂಬ ತಾಳಿಕೋಟಿ, ಸಿ.ಎಸ್‌. ನದಾಫ, ಆರ್‌.ಬಿ. ಖಾದಿರನವರ, ಎಂ.ಎಚ್‌. ಶಿರಹಟ್ಟಿ, ಹಮೀದುಲ್ಲಾ ಹುಯಿಲಗೋಳ ಸೇರಿದಂತೆ ಪಾಲಕರು-ಪೋಷಕರು ಇದ್ದರು.

ಡಬ್ಲ್ಯೂ .ಎಸ್‌. ಶಿರಹಟ್ಟಿ ಪ್ರಾರ್ಥಿಸಿದರು. ರಫೀಕ್‌ ಸವದತ್ತಿ ಸ್ವಾಗತಿಸಿದರು. ಸಿ.ಎಸ್‌. ನದಾಫ ಪ್ರಾಸ್ತಾವಿಕವಾಗಿ ಮಾತನಾಡಿದರು. ರಶೀದ್‌, ಫಜಲಅಹ್ಮದ್‌ ನಮಾಜಿ ನಿರೂಪಿಸಿ, ಎಂ.ಎ. ಬುಕ್ಕಿಟಗಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next