Advertisement

ಗದಗ: ಒಣಮೆಣಸಿನಕಾಯಿಗೆ ಬರಗಾಲದ ಬರೆ; ಬೆಲೆ ಹೆಚ್ಚಾಗುವ ಸಾಧ್ಯತೆ

05:54 PM Jan 06, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ರಾಜ್ಯ ಸೇರಿ ಜಿಲ್ಲಾದ್ಯಂತ ಮುಂಗಾರು ಜೊತೆಗೆ ಹಿಂಗಾರು ಬರಗಾಲ ಆವರಿಸಿದ್ದರಿಂದ ಜಿಲ್ಲೆಯ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಬಂಗಾರದ ಬೆಲೆಗೆ ಮಾರಾಟವಾಗುತ್ತಿರುವ ಒಣಮೆಣಸಿನಕಾಯಿ ಇಳುವರಿ ಕುಂಠಿತದಿಂದ ರೈತರು ತಲೆ ಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ಎದುರಾಗಿದೆ.

Advertisement

ಹೆಸರು, ಕಡಲೆ, ಮೆಕ್ಕೆಜೋಳ ಬೆಳೆದಿದ್ದ ರೈತರು ಬೆಳೆ ಬರದೆ ಸಂಕಷ್ಟ ಅನುಭವಿಸಿದ್ದರು. ಸಧ್ಯ ಒಣಮೆಣಸಿನಕಾಯಿ ಬೆಲೆ ಕುಸಿತದ ಜೊತೆಗೆ, ಬರಗಾಲದಿಂದ ಇಳುವರಿ ಕುಂಠಿತಗೊಂಡಿದ್ದರಿಂದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ.

ತೋಟಗಾರಿಕೆ ಬೆಳೆಯಾಗಿರುವ ಮೆಣಸಿನಕಾಯಿ ಬೆಳೆಯನ್ನು ಜಿಲ್ಲಾದ್ಯಂತ ಬಿತ್ತನೆ ಮಾಡಲಾಗಿತ್ತು. ಗದಗ ಹಾಗೂ ರೋಣ ತಾಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 48 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದೆ. ಈಗಾಗಲೇ ಮೆಣಸಿನಕಾಯಿ ಮಾಗಿ ಕೊಯ್ಲು ಹಂತಕ್ಕೆ ತಲುಪಿದ್ದು, ಇಳುವರಿಯಲ್ಲಿ ಭಾರಿ ಕುಂಠಿತವಾಗಿದೆ.

ಸಾಮಾನ್ಯವಾಗಿ ಹೆಕ್ಟೇರ್‌ಗೆ ಪ್ರತಿವರ್ಷ 1.5 ಟನ್‌ ಮೆಣಸಿನಕಾಯಿ ಇಳುವರಿ ಪಡೆಯಲಾಗುತ್ತಿತ್ತು. ಆದರೆ ಪ್ರಸಕ್ತ ವರ್ಷ ಬರಗಾಲ ಆವರಿಸಿದ್ದರಿಂದ ಅಬ್ಬಬ್ಬಾ ಅಂದರೆ ಒಂದು ಟನ್‌ ಪಡೆಯುವುದು ಕೂಡ ಬಲು ಕಷ್ಟ ಎನ್ನುತ್ತಿದ್ದಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

20ರಿಂದ 25ಟನ್‌ ಇಳುವರಿ ಮಾತ್ರ:2022ರಲ್ಲಿ ಗದಗ ಎಪಿಎಂಸಿಗೆ 1,00,634 ಕ್ವಿಂಟಾಲ್‌ ಒಣಮೆಣಸಿನಕಾಯಿ ಆವಕವಾಗಿದ್ದು, ಗುಣಮಟ್ಟದ ಒಣಮೆಣಸಿನಕಾಯಿಗೆ ಕ್ವಿಂಟಾಲ್‌ಗೆ 70,639 ರೂ. ಗರಿಷ್ಠ ಬೆಲೆಗೆ ಮಾರಾಟವಾಗಿತ್ತು. ಕಳೆದ 2023ರಲ್ಲಿ 81 ಸಾವಿರ ಕ್ವಿಂಟಾಲ್‌ ಆವಕವಾಗಿದ್ದು, ಕ್ವಿಂಟಾಲ್‌ಗೆ 72,999 ರೂ. ದಾಖಲೆ ಬೆಲೆಗೆ ಮಾರಾಟ ಮಾಡುವ ಮೂಲಕ ದಾಖಲೆ ಸೃಷ್ಟಿಸಿತ್ತು. ಆದರೆ ಪ್ರಸಕ್ತ ವರ್ಷ ರೈತರ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆಯಿರದ ಕಾರಣ ಜಿಲ್ಲೆಯಿಂದ
ಕೇವಲ 20ರಿಂದ 25 ಟನ್‌ ಒಣಮೆಣಸಿನಕಾಯಿ ಇಳುವರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಆದ್ದರಿಂದ ಒಣಮೆಣಸಿನಕಾಯಿ ಬೆಲೆಯಲ್ಲೂ ಅಧಿಕವಾಗುವ ಮುನ್ಸೂಚನೆ ದಟ್ಟವಾಗಿದೆ.

Advertisement

ಮಾರುಕಟ್ಟೆಗೆ 11 ಕ್ವಿಂಟಲ್‌ ಒಣ ಮೆಣಸಿನಕಾಯಿ ಆವಕ: ಕಳೆದ ಒಂದು ತಿಂಗಳಿನಿಂದ ಅಂದರೆ 2023ರ ಡಿ. 1ರಿಂದ 2024ರ ಜ. 5ರ ವರೆಗೆ ಗದಗ ಎಪಿಎಂಸಿ ಮಾರುಕಟ್ಟೆಗೆ ಕೇವಲ 11,843 ಕ್ವಿಂಟಾಲ್‌ ಒಣಮೆಣಸಿನಕಾಯಿ ಆವಕ ಆಗಿದೆ. ಅದರಲ್ಲಿ ಕಿcಂಟಾಲ್‌ ಒಣಮೆಣಸಿನಕಾಯಿಗೆ ಕನಿಷ್ಟ 14,300 ರೂ. ಹಾಗೂ ಗರಿಷ್ಠ 65,899 ರೂ. ಮಾರಾಟವಾಗಿದೆ.ಆದರೆ ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಒಣಮೆಣಸಿನಕಾಯಿ ಕನಿಷ್ಟ ಬೆಲೆಗೆ ಮಾರಾಟವಾಗಿದೆ. ಬರಗಾಲದ ಎಫೆಕ್ಟ್ ಒಣಮೆಣಸಿನಕಾಯಿ ದರಕ್ಕೂ ತಟ್ಟಿದೆ.

ಮೆಣಸಿನಕಾಯಿ ಬೆಳೆ ಸಂರಕ್ಷಿಸಲು ಹರಸಾಹಸ:
ಬರಗಾಲದಲ್ಲಿ ಅಷ್ಟಿಷ್ಟು ಬೆಳೆದ ಒಣಮೆಣಸಿನಕಾಯಿಗೆ ಕಳ್ಳರ ಕಾಟ ಶುರುವಾಗಿದೆ. ಒಣಗಿಸಲು ಇಟ್ಟಿರುವ ಹಾಗೂ ಕಟಾವಿಗೆ ಬಂದಿರುವ ಒಣಮೆಣಸಿನಕಾಯಿಯನ್ನು ಕಳ್ಳತನವಾಗಿರುವ ಘಟನೆಗಳು ನಡೆದಿವೆ. ಬರ ಹಿನ್ನೆಲೆಯಲ್ಲಿ ಇಳುವರಿ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರು ಈಗ ಒಣಮೆಣಸಿನಕಾಯಿಯನ್ನು ಸಂರಕ್ಷಿಸಲು ಪರದಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಗದಗ ಜಿಲ್ಲೆಯಲ್ಲಿ ಒಣಬೇಸಾಯ ಕೃಷಿಯಿದ್ದು, ಅಪಾರ ಪ್ರಮಾಣದಲ್ಲಿ ಸ್ಥಳೀಯ ಹಾಗೂ ಡಬ್ಬಿ ತಳಿಯ ಒಣಮೆಣಸಿಕಾಯಿ ಬೆಳೆಯುತ್ತಾರೆ. ಪ್ರಸಕ್ತ ವರ್ಷ ಬರಗಾಲ ಆವರಿಸಿದ್ದರಿಂದ ಬಿತ್ತನೆ ಕ್ಷೇತ್ರವೂ ಕುಂಠಿತಗೊಂಡಿದೆ. ಬಿತ್ತಿದ ಬೆಳೆಯ
ಇಳುವರಿಯೂ ನೆಲ ಕಚ್ಚಿದೆ. ಆದ್ದರಿಂದ ಪ್ರಸಕ್ತ ವರ್ಷ ಒಣಮೆಣಸಿನಕಾಯಿ ಗ್ರಾಹಕರಿಗೆ ಖಾರವಾಗುವ ಸಾಧ್ಯತೆ ಹೆಚ್ಚಿದೆ.
*ರಾಘವೇಂದ್ರ ಪಾಟೀಲ, ರೋಣ ರೈತ

ಪ್ರಸಕ್ತ ವರ್ಷ ಬರಗಾಲ ಆವರಿಸಿದ್ದರ ಪರಿಣಾಮ ಜಿಲ್ಲೆಯಲ್ಲಿ ಒಣಮೆಣಸಿನಕಾಯಿ ಬಿತ್ತನೆಯಲ್ಲಿ ಕುಂಠಿತವಾಗಿದೆ. ಜೊತೆಗೆ ಹೆಕ್ಟೇರ್‌ಗೆ 0.5 ಟನ್‌ನಷ್ಟು ಇಳುವರಿ ಕುಸಿತ ಕಂಡಿದೆ. ಗುಣಮಟ್ಟದಲ್ಲೂ ಕೊರತೆ ಕಂಡುಬಂದಿದ್ದರಿಂದ ಬೆಲೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ.
*ಶಶಿಕಾಂತ ಕೋಟಿಮನಿ,
ತೋಟಗಾರಿಕೆ ಇಲಾಖೆ ಉಪನಿರ್ದೇಶಕ

ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next