ಗದಗ: ಹಣ ಗಳಿಕೆಯ ಅತಿಯಾದ ಆಸೆ, ಒತ್ತಡ ಬದುಕಿನಿಂದಾಗಿ ಜನರು ಹಣ ಗಳಿಸಿ ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ ಎಂದು ಬೆಂಗಳೂರಿನ ಹಿರಿಯ ವೈದ್ಯೆ ಡಾ| ನಂದಾ ರಜನೀಶ ಅಭಿಪ್ರಾಯಪಟ್ಟರು. ನಗರದ ಅನ್ನಪೂರ್ಣೇಶ್ವರಿ ಮಂದಿರದಲ್ಲಿ ಜಾತ್ರಾ ಹಾಗೂ ದಸರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಸ್ತನ ಕ್ಯಾನ್ಸರ್ ಆರಂಭಿಕ ಪತ್ತೆ ಮತ್ತು ತಪಾಸಣಾ ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಿ, ಆಧುನಿಕತೆಯ ಭರಾಟೆಯಲ್ಲಿ ನಾವಿಂದು ಆರೋಗ್ಯದೆಡೆಗೆ ಗಮನಿಸುತ್ತಿಲ್ಲ. ಪಾಶ್ಚಿಮಾತ್ಯ ಜೀವನ ಶೈಲಿಗೆ ಒಗ್ಗಿಕೊಂಡು ಹಣ ಗಳಿಸಿ, ಆರೋಗ್ಯ ಕಳೆದುಕೊಳ್ಳುತ್ತಿದ್ದೇವೆ. ಹೆಚ್ಚು ಇಳುವರಿ ತೆಗೆಯುವ ಹಂಬಲದಲ್ಲಿ ನಾವಿಂದು ನಮ್ಮ ಫಲವತ್ತಾದ ಭೂಮಿಯನ್ನು ಹದಗೆಡಿಸುತ್ತಿದ್ದೇವೆ. ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳನ್ನು ಅತಿಯಾಗಿ ಬಳಸಿ ಭೂಮಿಯನ್ನು ಬರಡಾಗಿಸುತ್ತಿದ್ದೇವೆ. ಇದರ ಪರಿಣಾಮ ನಮ್ಮ ಆರೋಗ್ಯದ ಮೇಲೆ ಬೀರುತ್ತಿದೆ.
ಸಮತೋಲನ ಆಹಾರ ಸೇವನೆ, ಹಸಿರು ತೊಪ್ಪಲು ಪಲ್ಯೆ, ತರಕಾರಿ, ಹಣ್ಣು ಹಂಪಲು, ಪರಿಶುದ್ಧವಾದ ಹಾಲು ಸೇವನೆ, ಯೋಗ, ಧ್ಯಾನ, ವಾಯು ವಿಹಾರ, ಲಘು ವಾಯಾಮ ಕ್ರಮಗಳನ್ನು ಅಳವಡಿಸಿಕೊಳ್ಳುವ ಜೀವನ ಶೈಲಿಯಲ್ಲಿ ಬದಲವಣೆ ಕಂಡುಕೊಳ್ಳಬೇಕು. ವರ್ಷಕ್ಕೊಮ್ಮೆಯಾದರೂ ನುರಿತ ವೈದ್ಯರಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಹಾರ್ಮೋನುಗಳ ವ್ಯತ್ಯಾಸದಿಂದ ಸ್ತನ ಕ್ಯಾನ್ಸರ ಬರುವ ಸಾಧ್ಯತೆಗಳಿವೆ. ಈ ಕುರಿತು ಕಾಲಕಾಲಕ್ಕೆ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಿ.ಬಿ. ಪಾಟೀಲ ಮಾತನಾಡಿ, ದಸರಾ-ಜಾತ್ರಾ ಮಹೋತ್ಸವದ ನಿಮಿತ್ತ ಜನರ ಆರೋಗ್ಯವನ್ನು ಕಾಯ್ದುಕೊಳ್ಳುವ ಸದುದ್ದೇಶದಿಂದ ಆರೋಗ್ಯ ಶಿಬಿರ ಆಯೋಜಿಸಿರುವುದು ಮಠದ ಸಾಮಾಜಿಕ ಕಳಕಳಿ ಎತ್ತಿ ತೋರುತ್ತದೆ ಎಂದರು.
ಅಧ್ಯಕ್ಷತೆಯನ್ನು ಜಾತ್ರಾ ಸಮಿತಿ ಅಧ್ಯಕ್ಷೆ ಶಾಂತಾ ಸಂಕನೂರ ವಹಿಸಿದ್ದರು. ಬಿ.ಎನ್. ದಾಯಮ್ಮನವರ ವಕೀಲರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಡವೀಂದ್ರ ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ ಸಮ್ಮುಖ ವಹಿಸಿದ್ದರು. ಡಾ| ದೀಪ್ತಿ, ಡಾ| ರಾಜೇಶ್ವರಿ ಹಿರೇಮಠ, ಡಾ| ಸುನೀತಾ ಸಜ್ಜನ, ಶಿವಲೀಲಾ ಕುರಡಗಿ, ಶಾರದಾ ಬೊಮ್ಮಸಾಗರ, ಕೆ.ವಿ. ಕುಲಕರ್ಣಿ, ನಿಂಗಪ್ಪ ಬಳಿಗಾರ, ಜಿ.ಎಸ್. ಹಿರೇಮಠ ಉಪಸ್ಥಿತರಿದ್ದರು.
ಶಿಬಿರದಲ್ಲಿ 50ಕ್ಕೂ ಹೆಚ್ಚು ಮಹಿಳೆಯರ ಸ್ತನ ಕ್ಯಾನ್ಸರ್ ಕುರಿತು ತಪಾಸಣೆ ನಡೆಸಲಾಯಿತು. ವೀರೇಶಸ್ವಾಮಿ ಹೊಸಳ್ಳಿಮಠ ಅವರಿಂದ ವೇದಘೋಷ ಮೊಳಗಿಸಿದರು. ಬಿ.ಬಿ.ಪಾಟೀಲ ನಿರೂಪಿಸಿದರು. ಮಂಗಲಾ ಯಾನಮಶೆಟ್ಟಿ ವಂದಿಸಿದರು.