Advertisement

ಗದಗ-ಬೆಟಗೇರಿ ಹಸಿರೀಕರಣಕ್ಕೆ ಯೋಜನೆ

09:58 AM Jun 17, 2019 | Team Udayavani |

ಗದಗ: ಈಗಾಗಲೇ ಬೃಹತ್‌ ಮರಗಳನ್ನು ಸ್ಥಳಾಂತರಿಸುವ ಮೂಲಕ ರಾಷ್ಟ್ರ ಮಟ್ಟದ ಸ್ಕೋಚ್ ಪ್ರಶಸ್ತಿಗೆ ಪಾತ್ರವಾಗಿರುವ ಜಿಲ್ಲಾಡಳಿತ ಇದೀಗ ಗದಗ-ಬೆಟಗೇರಿ ಅವಳಿ ನಗರವನ್ನು ಗ್ರೀನ್‌ ಸಿಟಿಯನ್ನಾಗಿಸುವ ಸಂಕಲ್ಪ ತೊಟ್ಟಿದೆ. ನಗರದಲ್ಲಿ ಹಸಿರೀಕರಣದ ಕನಸು ಸಾಕಾರಗೊಳಿಸುವ ಹೊಸ ಯೋಜನೆ ರೂಪಿಸುತ್ತಿದೆ.

Advertisement

ಬಹುತೇಕ ಬಯಲುಸೀಮೆಯಾಗಿರುವ ಜಿಲ್ಲೆಯಲ್ಲಿ ಕಪ್ಪತ್ತಗುಡ್ಡ ಹೊರತಾಗಿ ಹೇಳಿಕೊಳ್ಳುವಂತ ಹಸಿರು ಪ್ರದೇಶವಿಲ್ಲ. ಕಪ್ಪತ್ತಗುಡ್ಡ ಕುರುಚಲು ಅರಣ್ಯ ಪ್ರದೇಶವಾಗಿದ್ದು, ಬೃಹತ್‌ ಮರಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲ. ದಿನಕಳೆದಂತೆ ಗದಗ-ಬೆಟಗೇರಿ ಅವಳಿ ನಗರ ವಿಸ್ತಾರಗೊಳ್ಳುತ್ತಿದ್ದು, ನಾನಾ ಕಾರಣಗಳಿಂದಾಗಿ ಮರಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ.

ಎರಡು ವರ್ಷಗಳ ಹಿಂದೆ ಆರಂಭಗೊಂಡಿದ್ದ ಹುಬ್ಬಳ್ಳಿಯಿಂದ ಗದಗ ಮಾರ್ಗವಾಗಿ ಹೊಸಪೇಟೆ ವರೆಗೆ ರಾಷ್ಟ್ರೀಯ ಹೆದ್ದಾರಿ 63ರ ಕಾಮಗಾರಿಯಲ್ಲಿ ನೂರಾರು ಮರಗಳಿಗೆ ಕೊಡಲಿ ಪೆಟ್ಟು ಬೀಳುವುದನ್ನು ತಪ್ಪಿಸಲು ಜಿಲ್ಲಾಡಳಿತ ಯಶಸ್ವಿಯಾಗಿ ಬೃಹತ್‌ ಮರಗಳನ್ನು ಸ್ಥಳಾಂತರಿಸಿ ಮೆಚ್ಚುಗೆಗೆ ಪಾತ್ರವಾಗಿತ್ತು.

ಇದೀಗ ಅಂತಹದ್ದೇ ಮತ್ತೂಂದು ಕಾರ್ಯಕ್ಕೆ ಚಾಲನೆ ನೀಡಲು ಸಿದ್ಧಗೊಳ್ಳುತ್ತಿದೆ. ಅವಳಿ ನಗರದ ಕೆರೆಗಳು, ನಗರದ ಒಳಗಿನ ರಸ್ತೆಗಳು, ಜನವಸತಿ ಪ್ರದೇಶ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ಸಸಿ ನೆಡುವುದು, ಕೆರೆಗಳಲ್ಲಿ ನೀರು ನಿಲ್ಲುವಂತೆ ಮಾಡುವುದು ಸೇರಿದಂತೆ ಒಟ್ಟಾರೆ ಅವಳಿ ನಗರದ ಪರಿಸರ ಹಸಿರಿನಿಂದ ಕಂಗೊಳಿಸುವಂತೆ ಮಾಡುವ ಯೋಜನೆಗೆ ಸ್ಪಷ್ಟ ರೂಪರೇಷೆ ನೀಡಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಕೆಲವೇ ದಿನಗಳಲ್ಲಿ ಗದಗ-ಬೆಟಗೇರಿ ಅವಳಿ ಗ್ರೀನ್‌ ಸಿಟಿಯಾಗುವುದರಲ್ಲಿ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

30 ಸಾವಿರ ಸಸಿ ನೆಡಲು ನೀಲನಕ್ಷೆ:

Advertisement

ನಗರಸಭೆ ಅಧಿಧೀನದಲ್ಲಿರುವ 119 ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ 312 ಉದ್ಯಾನಗಳ ಪೈಕಿ 32 ಉದ್ಯಾನವನಗಳು ಅಭಿವೃದ್ಧಿಪಡಿಸಲಾಗಿದೆ. ಇನ್ನುಳಿದ ಉದ್ಯಾನಗಳನ್ನು ಅಭಿವೃದ್ಧಿ ಪಡಿಸುವುದರೊಂದಿಗೆ 11,600 ಸಸಿಗಳನ್ನು ಬೆಳೆಸಲು ಉದ್ದೇಶಿಸಲಾಗಿದೆ. ಅದರಂತೆ ಗದಗ- ಬೆಟಗೇರಿ ಅವಳಿ ನಗರದ 25 ರಸ್ತೆಗಳ ಒಟ್ಟು 34.615 ಕಿ.ಮೀ. ಉದ್ದದಷ್ಟು ರಸ್ತೆಯ ಅಕ್ಕಪಕ್ಕದಲ್ಲಿ 17500 ಗಿಡ ನೆಡುವುದು, ಅವಳಿ ನಗರದಲ್ಲಿ ಪ್ರಮುಖ 10 ಕೆರೆಗಳಿದ್ದು, ಅವುಗಳನ್ನು ಪುನಶ್ಚೇತನಗೊಳಿಸಲು ನೀಲನಕ್ಷೆ ತಯಾರಿಸಿದೆ. ನಗರದ ಭೀಷ್ಮ ಕೆರೆ, ಹಸಿರು ಕೆರೆ, ಸಿಂಹದ ಕೆರೆ, ನರಸಾಪುರ ಆಶ್ರಯ ಕಾಲೋನಿ ಸಮೀಪದ ಕೆರೆ ಬಣ್ಣದ ನಗರದ ಮುಕ್ತಿಧಾಮದ ಕೆರೆ ಸೇರಿದಂತೆ ಪ್ರಮುಖ 10 ಕೆರೆಗಳಲ್ಲಿ ನೀರು ನಿಲ್ಲಿಸುವುದರೊಂದಿಗೆ ಸುತ್ತಲಿನ ಪರಿಸರವನ್ನು ಹಸಿರೀಕರಣದಿಂದ ಕಂಗೊಳಿಸುವಂತೆ ಮಾಡಲು ನೀಲನಕ್ಷೆ ಸಿದ್ಧಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

22 ಜನರ ತಜ್ಞರ ಸಮಿತಿ ರಚನೆ:

ಅವಳಿ ನಗರವನ್ನು ಹಸಿರೀಕರಣ ಹಾಗೂ ಲ್ಯಾಂಡ್‌ ಸ್ಕೇಪಿಂಗ್‌ ಮಾಡಲು 22 ಜನ ತಜ್ಞರ ಸಮಿತಿ ರಚಿಸಲಾಗಿದೆ. ನಿವೃತ್ತ ಐಎಸ್‌ಎಸ್‌ ಅಧಿಕಾರಿ ಡಾ| ಎ.ಎನ್‌.ಯಲ್ಲಪ್ಪರಡ್ಡಿ ಅಧ್ಯಕ್ಷತೆಯಲ್ಲಿ ಗ್ರಾಮೀಣಾಭಿವೃದ್ಧಿ ವಿವಿ ಕುಲಪತಿ ಪ್ರೊ| ತಿಮ್ಮೇಗೌಡ, ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ ಕೃಷ್ಣಾ ಉದುಪುಡಿ, ಬೆಂಗಳೂರು ಜಿಕೆವಿಕೆ ಡೀನ್‌ ಡಾ| ಮಲ್ಲಿಕ್‌, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿವೃತ್ತ ಅಧಿಕಾರಿಗಳು, ಅಭಿಯಂತರರು, ಅಪರ ಜಿಲ್ಲಾಧಿಕಾರಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಖಾಸಗಿ ಇಂಜಿನಿಯರ್, ಸ್ಥಳೀಯ ಇಂಜಿನಿಯರಿಂಗ್‌ ಕಾಲೇಜುಗಳ ಪ್ರತಿನಿಧಿಗಳು ಸೇರಿದಂತೆ ಒಟ್ಟು 22 ಜನರ ತಜ್ಞರ ತಂಡ ರಚಿಸಲಾಗಿದೆ. ಜೂ. 17ರಿಂದ ಮೂರು ದಿನಗಳ ಕಾಲ ನಗರದಲ್ಲಿ ಅಧ್ಯಯನ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಿದೆ.

•ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next