Advertisement

ಮನಿತನಾ ಹೊತ್ತವನೇ ಹೋಗಬಿಟ್ಟಾ…

02:39 PM Oct 31, 2019 | |

„ವೀರೇಂದ್ರ ನಾಗಲದಿನ್ನಿ

Advertisement

ಗದಗ: ನಮ್‌ ಬಲಗೈ ಹೋಗೈತೋ ಯಪ್ಪ.. ನಮ್‌ ಮನಿತನಾನಾ ಹೊತ್ತಿದ್ದವನೇ ಹೋಗ್ಯಾನೋ ಯಪ್ಪ.. ನಮ್‌ ಮಗನ್‌ ಎಲ್ಲಿದ್‌ ತರೋನು ಯಪ್ಪಾ… ನಮಗ್‌ ಇನ್ಯಾರ್‌ ದಿಕ್ಕೋ ದೇವ್ರೇ .. ಇದು ಇತ್ತೀಚೆಗೆ ಬೆಣ್ಣೆಹಳ್ಳದಲ್ಲಿ ಕೊಚ್ಚಿ ಹೋಗಿರುವ ಕಳಸಪ್ಪ ಅವರ ತಾಯಿ ಮಲ್ಲಮ್ಮ ವಿಠಲಪ್ಪನವರ ರೋದನ.

ದೀಪಾವಳಿ ಅಮಾವಾಸ್ಯೆ ದಿನದಂದು ಬೆಣ್ಣೆಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಹದ್ಲಿ ಗ್ರಾಮದ ಕಳಸಪ್ಪ ವಿಠಲಪ್ಪನವರ, ಈರಣ್ಣ ವಿಠಲಪ್ಪನವರ ಅವರು ಶವವಾಗಿ ಪತ್ತೆಯಾಗಿರುವುದು ಕುಟುಂಬಸ್ಥರಿಗೆ ಬರ ಸಿಡಿಲು ಬಡಿದಂತಾಗಿದೆ. ಮನೆ ಒಡೆಯನಿಲ್ಲದೇ ಸಂಸಾರದ ನೌಕೆ ಮುನ್ನಡೆಸುವುದು ಹೇಗೆ ಎಂಬ ಚಿಂತೆ ಒಂದಡೆಯಾದರೆ, ಮತ್ತೂಂದೆಡೆ ಮಹಿಳೆಯೊಬ್ಬರು ತನ್ನ ಗರ್ಭದಲ್ಲಿರುವ ಮಗುವಿಗೆ ಜನ್ಮ ನೀಡುವ ಮುನ್ನವೇ ದುರ್ವಿಧಿ ಆಕೆಯ ಕುಂಕುಮ ಭಾಗ್ಯವನ್ನೇ ಕಿತ್ತುಕೊಂಡಿದೆ.

ಕುಟುಂಬಕ್ಕೆ ಯಾರು ದಿಕ್ಕು?: ಮೃತ ಕಳಸಪ್ಪ ಹಾಗೂ ಈರಣ್ಣ ಅವರೇ ತಮ್ಮ ಕುಟುಂಬಗಳಿಗೆ ಆಧಾರವಾಗಿದ್ದರು. ಸಂಬಂಧದಲ್ಲಿ ಚಿಕ್ಕಪ್ಪ-ದೊಡ್ಡಪ್ಪ ಮಕ್ಕಳಾಗಿದ್ದರೂ ಒಡಹುಟ್ಟಿದವರಿಗಿಂತ ಹೆಚ್ಚಾಗಿದ್ದರು. ಬಡತನದಲ್ಲಿ ನೊಂದು ಬೆಂದು ಬೆಳೆದ ಕಳಸಪ್ಪ ಅವರು ಪರಿಶ್ರಮ, ಸರಳ ವ್ಯಕ್ತಿತ್ವದಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದರು. ಈರಣ್ಣನೂ ಹಿರಿಯಣ್ಣ ಹಾದಿಯಲ್ಲೇ ಸಾಗುತ್ತಿದ್ದ. ತಂದೆಗೆ ಆಗಾಗ್ಗೆ ಅನಾರೋಗ್ಯ ಕಾಡುತ್ತಿದ್ದರಿಂದ ಕಿರಿ ವಯಸ್ಸಲ್ಲೇ ಮನೆಯ ಜವಾಬ್ದಾರಿಗಳು ಈರಣ್ಣನ ಹೆಗಲೇರಿದ್ದವು. ಹೀಗಾಗಿ ಶಾಲೆ ಮುಗಿಯುತ್ತಿದ್ದಂತೆ ಜಾನುವಾರುಗಳನ್ನು ಮೇಯಿಸುವುದು, ಕೃಷಿ ಹಾಗೂ ಮನೆಗೆಲಸಕ್ಕೆ ಆಸರೆಯಾಗುತ್ತಿದ್ದ. ರಜಾ ದಿನಗಳಲ್ಲಿ ಅಣ್ಣನೊಂದಿಗೆ ಕೃಷಿ ಕಾರ್ಮಿಕನಾಗಿ ದುಡಿಯಲು ಹೋಗುತ್ತಿದ್ದ. ಅದು ಮನೆ ನಿರ್ವಹಣೆಗೆ ಆಸರೆಯಾಗಿತ್ತು. ಮೂವರು ಗಂಡು, ಇಬ್ಬರು ಹೆಣ್ಣು ಮಕ್ಕಳ ಪೈಕಿ ಹಿರಿಯನಾಗಿದ್ದ ಈರಣ್ಣ, ಓದಿನಲ್ಲೂ ಚುರುಕಾಗಿದ್ದ. ಭವಿಷ್ಯದಲ್ಲಿ ಉನ್ನತ ಸ್ಥಾನಮಾನ ಹೊಂದುವ ಕನಸುಗಳೊಂದಿಗೆ ಹೆತ್ತವರಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದ.

ಅಲ್ಲದೇ, ಹತ್ತಾರು ವರ್ಷಗಳ ಕಾಲ ಬಾಳಿ ಬದುಕಬೇಕಿದ್ದ ಈರಣ್ಣ, ಕಿರಿ ವಯಸ್ಸಿನಲ್ಲೇ ಇಹ ಲೋಕ ತ್ಯಜಿಸಿರುವುದು ಪಾಲಕರನ್ನು ಚಿಂತೆಗೀಡು ಮಾಡಿದೆ.

Advertisement

ಕಣ್ಣೀರಲ್ಲೇ ಕೈತೊಳೆಯುವ ಪರಿಸ್ಥಿತಿ: ಇದೇ ಕುಟುಂಬದ ಕಳಸಪ್ಪ ಬೈಲಪ್ಪ ವಿಠ್ಠಪ್ಪನವರ ಸಾವು ಇಡೀ ಕುಟುಂಬವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ. ವೃದ್ಧ ತಂದೆ, ತಾಯಿ, ಇಬ್ಬರು ತಮ್ಮಂದಿರು, ಪತ್ನಿ ಹಾಗೂ ಒಂದು ಹೆಣ್ಣು ಮಗುವನ್ನು ಸಾಕಿ ಸಲಹುವ ಜವಾಬ್ದಾರಿ ಕಳಸಪ್ಪ ಅವರದ್ದಾಗಿತ್ತು. ಸ್ವಂತ ಐದು ಎಕರೆ ಜಮೀನು ಹೊಂದಿದ್ದರೂ ಬಯಲು ಸೀಮೆಯಾಗಿದ್ದರಿಂದ ಅದು ಇದ್ದೂ ಇಲ್ಲದಂತಾಗಿತ್ತು. ಹೀಗಾಗಿ ಉಪ ಜೀವನಕ್ಕಾಗಿ ಯಾ.ಸ.ಹಡಗಲಿ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳ ಪರಿಚಿತರ ಜಮೀನುಗಳಲ್ಲೂ ಕಾರ್ಮಿಕರಾಗಿ ದುಡಿಯುತ್ತಿದ್ದರು.

ಆ ಮೂಲಕ ಸಂಸಾರದ ನೊಗ ಹೊತ್ತಿದ್ದ ಕಳಸಪ್ಪ ಅವರ ಸಾವಿನಿಂದ ಇಡೀ ಕುಟುಂಬಕ್ಕೆ ಭವಿಷ್ಯದ ಕತ್ತಲು ಆವರಿಸಿದೆ. ಈಗಾಗಲೇ 2 ವರ್ಷದ ಹೆಣ್ಣು ಮಗು ಹೊಂದಿರುವ ಕಳಸಪ್ಪ ಅವರ ಪತ್ನಿ ಭೀಮವ್ವ ಇದೀಗ 8 ತಿಂಗಳ ಗರ್ಭಿಣಿಯಾಗಿದ್ದು, ಅವರ ಸಂಕಟ ಹೇಳತೀರದ್ದಾಗಿದೆ.

ಹುಟ್ಟುವ ಮಗುವಿಗೆ ತಂದೆ ಯಾರೆಂದು ತೋರಿಸಲಿ, ಅವರಿಗೆ ಏನಂತ ಸಾಂತ್ವನ ಹೇಳಲಿ. ಮುಪ್ಪಿನಲ್ಲಿ ನನಗ್ಯಾಕೆ ಈ ಶಿಕ್ಷೆ ದೇವ್ರೇ ಎಂದು ಕಣ್ಣೀರಿಡುತ್ತಾರೆ ಕಳಸಪ್ಪ ಅವರ ತಂದೆ ಬೈಲಪ್ಪ.

Advertisement

Udayavani is now on Telegram. Click here to join our channel and stay updated with the latest news.

Next