ಲಕ್ಷ್ಮೇಶ್ವರ: ತಾಲೂಕಿನ ರೈತರ ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆ ಹೆಸರಿಗೀಗ ಕೊಂಬಿನ ಹುಳು ಕೀಟಬಾಧೆ ಆವರಿಸಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಹೆಣಗಾಡುತ್ತಿದ್ದಾರೆ. ಮುಂಗಾರಿನಲ್ಲಿ ಮೊದಲು ರೈತರ ಕೈ ಸೇರುವ ಹೆಸರು ರೈತರ ಆಶಾದಾಯಕ ಬೆಳೆಯಾಗಿದೆ. ಆದರೆ ಪ್ರಸಕ್ತ ಮುಂಗಾರಿನ ಮೊದಲ ಮಳೆಗಳು ಕೈಕೊಟ್ಟಿದ್ದರಿಂದ ಹೆಸರು ಬಿತ್ತನೆ ತಿಂಗಳು ವಿಳಂಬವಾಯಿತು. ಸರ್ಕಾರ ಪ್ರತಿ ಕ್ವಿಂಟಲ್ ಹೆಸರಿಗೆ 8,558 ಬೆಂಬಲ ಘೋಷಣೆ ಮಾಡಿದ್ದರಿಂದ ಕಡಿಮೆ ಇಳುವರಿ ಬಂದರೂ ಪರವಾಗಿಲ್ಲ, ಕಡಿಮೆ ಅವಧಿ ಮತ್ತು ಖರ್ಚಿನಿಂದ ಉತ್ತಮ ಬೆಲೆ ಸಿಗುತ್ತದೆಂಬ ಕಾರಣದಿಂದ ತಾಲೂಕಿನಲ್ಲಿ ಹೆಸರು ಬಿತ್ತನೆ ಮಾಡಿದ್ದಾರೆ.
ಆದರೆ ಒಂದು ತಿಂಗಳ ಕಾಲಾವಧಿಯ ಹೆಸರು ಬೆಳೆಗೆ ಸಂಪ್ರದಾಯವೇ ಎನ್ನುವಂತೆ ಹಳದಿ ರೋಗದ ಜತೆಗೆ ಕೀಟಬಾಧೆ ಆವರಿಸಿರುವುದು ರೈತರ ನಿದ್ದೆಗೆಡಿಸಿದೆ. ಕಳೆದ ಒಂದು ವಾರದಿಂದ ಮಳೆ ಬಿಡುವು ಕೊಟ್ಟಿದ್ದರಿಂದ ಕೃಷಿ ಕೆಲಸಗಳು ಏಕಕಾಲಕ್ಕೆ ಪ್ರಾರಂಭವಾಗಿ ಎಡೆ ಹೊಡೆಯಲು, ಕಳೆ ತೆಗೆಯಲು, ಕ್ರಿಮಿನಾಶ ಸಿಂಪಡಣೆ ಮಾಡಲು ಎತ್ತು, ಕೃಷಿ ಕಾರ್ಮಿಕರ ಕೊರತೆ ಕಾಡುತ್ತಿದೆ. ಈ ನಡುವೆಯೂ ಕೀಟಬಾಧೆಗೆ ತುತ್ತಾಗಿರುವ ಬೆಳೆಗಳ ಸಂರಕ್ಷಣೆಗೆ ಯಂತ್ರೋಪಕರಣಗಳಿಗೆ ಮೊರೆ ಹೋಗಿದ್ದಾರೆ. ಇದರಿಂದ ಈ ವರ್ಷವೂ ಖರ್ಚಿಲ್ಲದ ಬೆಳೆಗೆ ಮತ್ತೇ ಹೆಚ್ಚು ಖರ್ಚಿನ ಜತೆಗೆ ಇಳುವರಿ ಕುಂಠಿತವಾಗುವ ಆತಂಕ
ಎದುರಾಗಿದೆ.
ಲಕ್ಷ್ಮೇಶ್ವರ ಸೇರಿ ತಾಲೂಕಿನ ಶಿಗ್ಲಿ, ದೊಡೂxರ, ಸೂರಣಗಿ, ಬಾಲೆಹೊಸೂರ, ಅಕ್ಕಿಗುಂದ, ಬಡ್ನಿ, ಬಟ್ಟೂರ, ಹರದಗಟ್ಟಿ, ಅಡರಕಟ್ಟಿ, ಗೊಜನೂರ ಬಹುತೇಕ ಕಪ್ಪು ಮಣ್ಣಿನ 8,025 ಎಕರೆ ಪ್ರದೇಶದ ಜಮೀನಿನಲ್ಲಿ ಹೆಸರು ಬಿತ್ತನೆಯಾಗಿದೆ. ರೈತ ಸಂಪರ್ಕ ಕೇಂದ್ರ(45 ಕ್ವಿಂಟಲ್) ಮತ್ತು ಖಾಸಗಿ ಬೀಜ ಮಾರಾಟ ಕೇಂದ್ರದಲ್ಲಿ ನೂರಾರು ಕ್ವಿಂಟಲ್ ಹೆಸರು ಬೀಜ ಮಾರಾಟವಾಗಿದೆ. ಮುಖ್ಯವಾಗಿ ಯಂತ್ರ ಕಟಾವಿಗೆ ಬರುವ ಎತ್ತರ ತಳಿಯ ದುಬಾರಿ ಬೀಜ ಬಿತ್ತನೆ ಮಾಡಿದ್ದಾರೆ. ಆದರೆ ಅದು ರೈತರ ಕೈ ಹಿಡಿದಿಲ್ಲ.
ಕಡಿಮೆ ಖರ್ಚು, ಅಲ್ಪಾವಧಿ, ಉತ್ತಮ ಬೆಲೆಯಿಂದ ಸಾಲಶೂಲ, ಬದುಕಿನ ಜತೆಗೆ ಹಿಂಗಾರಿನ ಕೃಷಿ ಚಟುವಟಿಕೆಗಳಿಗೆ ಹೆಸರು ಬೆಳೆ ಆಸರೆಯಾಗುತ್ತದೆ. ಅಲ್ಲದೇ ಈ ವರ್ಷ ಸರ್ಕಾರ 8,858 ರೂ ಬೆಂಬಲ ಬೆಲೆ ಘೋಷಣೆ ಮತ್ತು ಮುಕ್ತ ಮಾರುಕಟ್ಟೆಯಲ್ಲೂ ಉತ್ತಮ ಬೆಲೆ ಇರುವುದರಿಂದ ತಡವಾದರೂ ಹೆಸರು ಬೆಳೆದಿದ್ದೇವೆ. ಅದಕ್ಕಾಗಿ ಈಗಾಗಲೇ ಎಕರೆಗೆ 10 ಸಾವಿರಕ್ಕಿಂತ ಹೆಚ್ಚು ಖರ್ಚು ಮಾಡಿದ್ದೇವು. ಬೆಳೆಗೆ ರೋಗ ತಪ್ಪಿದ್ದಲ್ಲ ಎಂದು ಗೊತ್ತಿದ್ದರೂ ಈ ವರ್ಷ ಹೇಗಾದರೂ ಸರಿ ಕೃಷಿ ಇಲಾಖೆಯ ಸಲಹೆ-ಸೂಚನೆ ಪಾಲಿಸಿ ಬೆಳೆಯನ್ನು ರೋಗದಿಂದ ಕಾಪಾಡಬೇಕು ಎಂದುಕೊಂಡಿದ್ದೇವೆ.
ಆದರೆ ಹಳದಿ ರೋಗಬಾಧೆ ಕಡಿಮೆ ಇದ್ದರೂ ಕೊಂಬಿನ ಹುಳದ ಬಾಧೆ ಆವರಿಸಿರುವುದು ರೈತರ ಕಷ್ಟಕ್ಕೆ ಕೊನೆಯೇ ಇಲ್ಲದಂತಾಗಿದೆ. ಸರ್ಕಾರ ಮುಂಗಾರಿನ ಬೆಳೆಗೆ ಬೆಳೆವಿಮೆ, ಬೆಳೆಹಾನಿ ಪರಿಹಾರ ಕಲ್ಪಿಸಬೇಕು.
*ಚನ್ನಪ್ಪ ಷಣ್ಮುಕಿ, ರೈತ ಮುಖಂಡ
ಹೆಸರು ಬೆಳೆಗೆ ಅಲ್ಲಲ್ಲಿ ಕೊಂಬಿನಹುಳು ಬಾಧೆ ಆವರಿಸುತ್ತಿದೆ. ಈ ಹಿನ್ನೆಲೆ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿ ಸಲಹೆ-ಸೂಚನೆ ನೀಡುತ್ತಿದ್ದೇವೆ. ಹಸಿರು ಬಣ್ಣದ ಮತ್ತು ದೇಹದ ಹಿಂಭಾಗಲ್ಲಿ ಚೂಪಾದ ಕೊಂಬನ್ನು ಹೊಂದಿರುತ್ತದೆ. ಎಲೆಗಳ ಕೆಳಗಿರುವ ಕೀಟವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಪ್ರಾರಂಭದ ಹಂತದಲ್ಲಿಯೇ ಗುರುತಿಸಬೇಕು. ಹೆಸರು, ಉದ್ದು ಬೆಳೆಯಲ್ಲಿ ಹೆಚ್ಚು ಕಂಡುಬರುವ ಈ ಕೀಟ ಎಲೆಯನ್ನೇ ತಿನ್ನುತ್ತದೆ ತೀವ್ರತೆ ಹೆಚ್ಚಾದಂತೆ ನಿಯಂತ್ರಿಸಬೇಕು. ಪ್ರತಿ ಲೀ ನೀರಿಗೆ 4 ಗ್ರಾಂ ಕಾರ್ಬರಿಲ್ 50 ಡಬ್ಲೂ.ಪಿ ಅಥವಾ 2 ಮಿ.ಲೀ ಕ್ಲೋರೊಪೈರಿಫಾಸ್ 20 ಇ.ಸಿ ಬೆರೆಸಿ ಸಿಂಪಡಿಸಬೇಕು. ನೀರಿನ ಅಭಾವವಿದ್ದಲ್ಲಿ ಪ್ರತಿ ಎಕರೆಗೆ 8.ಕಿಲೋದಂತೆ ಕ್ವಿನಾಲ್‌ಫಾಸ್ ಅಥವಾ ಫೆನವಲರೇಟ್ ಧೂಳೀಕರಣ ಮಾಡಬೇಕು. ಮುಖ್ಯವಾಗಿ ಮುಂಗಾರಿನ ಬೆಳೆಗಳನ್ನು ಬೆಳೆದರ್ಶಕ ಆ್ಯಪ್‌ನಲ್ಲಿ ದಾಖಲೀಕರಣ ಮಾಡಬೇಕು. ಇದರಿಂದ ಬೆಂಬಲ ಬೆಲೆಯಡಿ ಮಾರಾಟ ಮಾಡಲು, ಬೆಳೆವಿಮೆ ಪಾವತಿಸಲು, ಬೆಳೆವಿಮೆ ಮತ್ತು ಬೆಳೆಹಾನಿ ಪರಿಹಾರ ಪಡೆಯಲು ಅನಕೂಲವಾಗುತ್ತದೆ.
*ಚಂದ್ರಶೇಖರ ನರಸಮ್ಮನವರ, ಕೃಷಿ ಅಧಿಕಾರಿ