Advertisement

ಚಿಗುರೊಡೆದ ಜಿಲ್ಲೆಯ ಅಭಿವೃದ್ಧಿಯ ಕನಸು

06:57 PM Mar 07, 2021 | Team Udayavani |

ಗದಗ: ಕೋವಿಡ್ ನಂತರ ಎಲ್ಲ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿವೆ. ಅದರೊಂದಿಗೆ ಮಾ.8 ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು 8ನೇ ಬಾರಿಗೆ 2021-22ನೇ ಸಾಲಿನ ಬಜೆಟ್‌ ಮಂಡಿಸಲಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಹೊಸ ಯೋಜನೆಗಳ ಕನಸು ಚಿಗುರೊಡೆದಿದೆ.

Advertisement

ಜಿಲ್ಲೆ ಎರಡು ಹೊಸ ತಾಲೂಕುಗಳು ಸೇರಿದಂತೆ ಒಟ್ಟು 7 ತಾಲೂಕುಗಳನ್ನು ಹೊಂದಿದ್ದು, ಕೃಷಿ ಪ್ರಧಾನ ಹಾಗೂ ಬಯಲು ಸೀಮೆ ಜಿಲ್ಲೆಯಾಗಿದೆ. “ಮಳೆ ಬಂದರೆ ಬೆಳೆ ಇಲ್ಲವೇ ಗುಳೆ’ ಎಂಬುದು ಜಿಲ್ಲೆಯ ನಗರ ಮತ್ತು ಗ್ರಾಮೀಣ ಜನರ ಪರಿಸ್ಥಿತಿ. ಜಿಲ್ಲೆಯಲ್ಲಿ ಫಲವತ್ತಾದ ಭೂಮಿ ಇದ್ದರೂ ನೀರಾವರಿ ಸೌಲಭ್ಯದಿಂದ ವಂಚಿತವಾಗಿದೆ.

ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ತರಬೇಕಿದೆ. ಈಗಾಗಲೇ ಮಹದಾಯಿ ನ್ಯಾಯಾ ಧಿಕರಣ ನದಿ ನೀರು ಹಂಚಿಕೆ ಮಾಡಿದ್ದು, 13.5 ಟಿಎಂಸಿ ನೀರು ಕರ್ನಾಟಕದ ಪಾಲಿಗೆ ಬಂದಿದೆ. 2020-21ನೇ ಸಾಲಿನ ಬಜೆಟ್‌ನಲ್ಲಿ ಮಹದಾಯಿ ಯೋಜನೆ ಕಾಮಗಾರಿಗೆ 500 ಕೋಟಿ ರೂ. ಅನುದಾನ ಘೋಷಿಸಿದರೂ ಅದು ಅನುಷ್ಠಾನಕ್ಕೆ ಬಂದಿಲ್ಲ. ಕಾಮಗಾರಿ ಆರಂಭಿಸುವುದರೊಂದಿಗೆ ಯೋಜನೆಯ ಕೊನೆಯ ಗ್ರಾಮಕ್ಕೆ ಮಲಪ್ರಭೆ ಹರಿಸಲು ಕಾಲುವೆ, ಉಪಕಾಲುವೆಗಳ ನಿರ್ಮಾಣ ಮತ್ತು ದುರಸ್ತಿಗೆ ಕ್ರಮ ವಹಿಸಬೇಕಿದೆ. ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗೆ ಕನಿಷ್ಠ 2 ಸಾವಿರ ಕೋಟಿ ರೂ. ಮೀಸಲಿಡಬೇಕು ಎಂಬುದು ಮಹದಾಯಿ ಹೋರಾಟಗಾರರ ಒತ್ತಾಯವಾಗಿದೆ.

ರೋಣ ಮತ್ತು ಗಜೇಂದ್ರಗಡ ಭಾಗಕ್ಕೆ ನೀರಾವರಿ ಒದಗಿಸುವ ಕೃಷ್ಣಾ “ಬಿ’ ಸ್ಕೀಂ ಯೋಜನೆ ಜಾರಿಗೊಳಿಸಬೇಕು. ಜೊತೆಗೆ ಜಿಲ್ಲೆಯ ವಿವಿಧ 9 ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕನಿಷ್ಠ 5 ಸಾವಿರ ಕೋಟಿ ಅನುದಾನ ಘೋಷಿಸಬೇಕಿದೆ. ಈ ಮೂಲಕ ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯಗಳನ್ನು ಹೆಚ್ಚಿಸಿ, ಕೃಷಿ ಚಟುವಟಿಕೆಗಳಿಗೆ ಒತ್ತು ನೀಡಬೇಕು ಎಂಬುದು ಜಿಲ್ಲೆಯ ರೈತಾಪಿ ಜನರ ಒಕ್ಕೊರಲ ಆಗ್ರಹವಾಗಿದೆ.

ಕೈಗಾರಿಕೆ ಸ್ಥಾಪನೆಗೆ ಬೇಕಿದೆ ಉತ್ತೇಜನ: ಜಿಲ್ಲೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ, ಹೆಸರು, ಕಡಲೆ ಹಾಗೂ ಈರುಳ್ಳಿ ಪ್ರಧಾನ ಬೆಳೆಗಳಾಗಿದ್ದು, ಪ್ರತಿ ವರ್ಷ ಗರಿಷ್ಠ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಸ್ಥಳೀಯ ಕೃಷಿ ಉತ್ಪನ್ನಗಳನ್ನು ಆಧರಿಸಿ ಕೃಷಿ ಆಧಾರಿತ ಆಹಾರ ಸಂಸ್ಕರಣ ಘಟಕಗಳನ್ನು ಒಳಗೊಂಡಂತೆ ಫುಡ್‌ ಪಾರ್ಕ್‌ ಸ್ಥಾಪಿಸಬೇಕು.

Advertisement

ಇಲ್ಲಿನ ಬೆಟಗೇರಿ, ಶಿಗ್ಲಿ ಮತ್ತು ಗಜೇಂದ್ರಗಡ ನೇಕಾರಿಕೆಗೆ ಹೆಸರುವಾಸಿಯಾಗಿವೆ. ಈ ಭಾಗದ ಸಾವಿರಾರು ಕುಟುಂಬಗಳು ನೇಕಾರಿಕೆಯನ್ನೇ ಅಲವಂಭಿಸಿದ್ದು, ಇಲ್ಲಿ ಸಿದ್ಧವಾಗುವ ಸೀರೆ ಮತ್ತಿತರೆ ಜವಳಿ ಉತ್ಪನ್ನಗಳು ರಾಜ್ಯ ಹಾಗೂ ದೇಶ, ವಿದೇಶಗಳಿಗೆ ರಫ್ತಾಗುತ್ತವೆ. ನೇಕಾರಿಕೆಯನ್ನು ಮತ್ತಷ್ಟು ಉತ್ತೇಜಿಸಲು ಬೆಟಗೇರಿ ಸಮೀಪದ ನರಸಾಪುರದಲ್ಲಿ ಟೆಕ್‌ Õಟೈಲ್‌ ಪಾರ್ಕ್‌ ಸ್ಥಾಪಿಸಬೇಕು ಎಂಬುದು ದಶಕಗಳ ಬೇಡಿಕೆಯಾಗಿದೆ.

ಪ್ರವಾಸೋದ್ಯಮಕ್ಕೆ ಬೇಕಿದೆ ಆದ್ಯತೆ: ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಎಂದು ಘೋಷಣೆಯಾಗಿದೆ ಹೊರತು ಪ್ರಾಧಿಕಾರ ಕೆಲಸ ಕಾರ್ಯಗಳು ನಡೆದಿಲ್ಲ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ವಿಪುಲ ಅವಕಾಶಗಳಿದ್ದು, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚು ಅನುದಾನ ಮೀಸಲಿಡುವುದು. ಲಕ್ಷ್ಮೇಶ್ವರ, ಗಜೇಂದ್ರಗಡ ನೂತನ ತಾಲೂಕುಗಳ ಮೂಲ ಸೌಕರ್ಯ ಒದಗಿಸಲು ವಿಶೇಷ ಅನುದಾನ ನೀಡುವುದು. ತಾಲೂಕು ಕೇಂದ್ರಕ್ಕೆ ಅಗತ್ಯವಿರುವ ಕಚೇರಿಗಳ ಸ್ವಂತ ಕಟ್ಟಡ ಸೇರಿ ಇತರೆ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡುವುದು. ಜಿಲ್ಲೆಯಲ್ಲಿ ಸ್ನಾತಕೋತ್ತರ ಕೇಂದ್ರ ಕಟ್ಟಡಕ್ಕೆ ಅನುದಾನ ಘೋಷಣೆ ಮಾಡಬೇಕು. ಜಿಲ್ಲೆಯ ವಿವಿಧೆಡೆ ಜಿಂಕೆ ಹಾವಳಿ ಹೆಚ್ಚಾಗಿದ್ದು, ಈ ವರ್ಷವಾದರೂ ಜಿಂಕೆ ವನ ನಿರ್ಮಿಸುವ ಕುರಿತು ಕ್ರಮ ಕೈಗೊಳ್ಳಬೇಕು. 140 ಕೋಟಿ ರೂ. ವೆಚ್ಚದ ಸಾಸಲವಾಡ ಏತ ನೀರಾವರಿ ಯೋಜನೆಗೆ ಹಣ ಬಿಡುಗಡೆ ಮಾಡಬೇಕು ಎಂದು ಜಿಲ್ಲೆಯ ಜನರು ಒತ್ತಾಯಿಸುತ್ತಿದ್ದಾರೆ.

ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next