Advertisement

Gadag: ಕೆ.ಈ.ಕಾಂತೇಶ್ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ‘ಶಕ್ತಿ ಪೂಜೆ’

09:57 PM Dec 20, 2023 | Team Udayavani |

ಗದಗ: ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂನ ಗದಗ ಜಿಲ್ಲಾ ಘಟಕ ಹಾಗೂ ಅಖಿಲ ಭಾರತೀಯ ಅನ್ನದಾನ ಸಮಿತಿಯ ಸದಸ್ಯ ಕೆ.ಈ. ಕಾಂತೇಶ್ ಅವರ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ‘ಶಕ್ತಿ ಪೂಜೆ’ ಹಾಗೂ ಮಹಾಪ್ರಸಾದ ಕಾರ್ಯಕ್ರಮ ಬುಧವಾರ ಜರುಗಿತು.

Advertisement

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಪ್ರತಿದಿನ ಬೆಳಗ್ಗೆ 4 ಗಂಟೆಯಿಂದ ಆರಂಭವಾಗುವ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಪೂಜಾ ಕ್ರಮವು ಕಠಿಣವಾಗಿದ್ದು, ಮಕರ ಸಂಕ್ರಮಣದವರೆಗೂ ಮುಂದುವರಿಯುತ್ತದೆ. ಚಳಿ, ಬೆಳಗ್ಗೆ ತಣ್ಣೀರಿನ ಸ್ನಾನ, ಕಾಲಲ್ಲಿ ಚಪ್ಪಲಿ ಧರಿಸದೇ ಕಠಿಣ ಶ್ರಮದಿಂದ ಪೂಜೆ ನೆರವೇರಿಸಿಕೊಂಡು ಹೋಗುತ್ತಿರುವ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಈ ಭಕ್ತಿಯನ್ನು ಯಾವುದೇ ಕಾರಣಕ್ಕೂ ಕೈಬಿಡಬೇಡಿ. ಇದರಿಂದ ನಿಮಗೂ ಒಳ್ಳಯೆದಾಗುತ್ತದೆ, ದೇಶಕ್ಕೂ ಒಳ್ಳೆಯದಾಗುತ್ತದೆ. ನಿಮ್ಮ ನಿಜವಾದ ಭಕ್ತಿಯಿಂದ ದೇಶಕ್ಕೆ ಒಳ್ಳೆಯದಾಗಲಿ, ಧರ್ಮಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಅಯ್ಯಪ್ಪನ ಸನ್ನಿಧಾನಕ್ಕೆ ರಾಜ್ಯದಿಂದ ಲಕ್ಷಲಕ್ಷ ಭಕ್ತರು ಪ್ರತಿ ವರ್ಷ ತೆರಳುತ್ತಾರೆ. ಅಯ್ಯಪ್ಪನ ಭಕ್ತರು ಶಾಂತಿಪ್ರೀಯರು. ಕರ್ನಾಟಕ ರಾಜ್ಯದ ಅಯ್ಯಪ್ಪಸ್ವಾಮಿ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ, ಸೌಲಭ್ಯಗಳನ್ನು ಒದಗಿಸುವಂತೆ ಕೇರಳ ಸರಕಾರಕ್ಕೆ ಒತ್ತಾಯ ಮಾಡುತ್ತೇನೆ. ಅದರಂತೆ ನನ್ನ ಮಗ ಕಾಂತೇಶ ಕೂಡ ಅಯ್ಯಪ್ಪನ ಭಕ್ತನಾಗಿದ್ದು, ಮಾಲಾಧಾರಿಯಾಗಿ ಅಯ್ಯಪ್ಪನ ಸನ್ನಿಧಿಗೆ ತೆರಳುತ್ತ ಭಕ್ತಿ ಸಮರ್ಪಿಸಿದ್ದಾನೆ. ನಿಮ್ಮೆಲ್ಲರ ಆಶೀರ್ವಾದ ಅವರಿಗೂ ಇರಲಿ ಎಂದು ಹೇಳಿದರು.

ಶಕ್ತಿ ಪೂಜೆಯಲ್ಲಿ ಕೇರಳದ ಅಯ್ಯಪ್ಪಸ್ವಾಮಿ ದೇವಾಲಯದ ತಂತ್ರಿಗಳಾದ ಶಿವಶಂಕರನ್ ನಂಬೂದಿರಿಪ್ಪಾಡ್ ಅವರಿಂದ ವಿಶೇಷ ಮಹಾಪೂಜೆ ನಡೆಯಿತು. ಆನಂದ ಗುರುಸ್ವಾಮಿ ಹೊಸಮನಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಶ್ರೀ ಅಯ್ಯಪ್ಪ ಸ್ವಾಮಿಯ ಶಕ್ತಿ ಪೂಜೆಯಲ್ಲಿ ಕಳೆದ 25 ವರ್ಷಗಳಿಂದ ಮಾಲಾಧಾರಿಗಳಾಗಿ ಶಬರಿಗೆ ತೆರಳಿದ ಮಾಲಾಧಾರಿಗಳನ್ನು ಸತ್ಕರಿಸಲಾಯಿತು. ಅಂದಾಜು 1,000ಕ್ಕೂ ಹೆಚ್ಚು ಜನ ಮಾಲಾಧಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ನಂತರ ಮಹಾಪ್ರಸಾದ ನೆರವೇರಿತು.

Advertisement

ಮಾಲಾಧಾರಿಗಳಾದ ವೆಂಕಟೇಶ ಪೂಜಾರ, ಮಂಜುನಾಥ ಹಳ್ಳದಮಠ, ಸದಾನಂದ ಕಂಬಾರ, ನಾಗರಾಜ ಬಾಗಲಕೋಟ, ಪ್ರಸಾದ ಕೋಡೆಕಲ್ಲ, ಜಗದೀಶ ಸಂಕನಗೌಡ್ರ, ರಂಗಪ್ಪ ಬಂಡಿವಡ್ಡರ, ಮುತ್ತಣ್ಣ ಬೂದಿಹಾಳ, ಸಿದ್ದಲಿಂಗಪ್ಪ ಉಮಚಗಿ, ಗುರುನಾಥ ಅಸುಂಡಿ, ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ (ಸಾಸ್)ನ ಗದಗ ಜಿಲ್ಲಾ ಅಧ್ಯಕ್ಷ ವೆಂಕಟೇಶ ದಾಸನಕೇರಿ, ಗೌರವ ಅಧ್ಯಕ್ಷ ಮಂಜುನಾಥ ಕಲಾಲ ಸೇರಿ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next