ಮುಧೋಳ: ಜಿಲ್ಲೆಯ ಏಕೈಕ ಮೀಸಲು ಮುಧೋಳ ಕ್ಷೇತ್ರದಲ್ಲಿ ಈ ಬಾರಿ ಎರಡೂ ಪಕ್ಷಗಳ ಪ್ರಮುಖರಲ್ಲಿ ಪಕ್ಷಕ್ಕಿಂತ ಜಾತಿ ಹೊಂದಾಣಿಕೆ ಮತ್ತು ಕೊಡು-ಕೊಳ್ಳುವಿಕೆಯ ಚುನಾವಣೆ ನಡೆದಿದೆ. ಹೀಗಾಗಿ ಕಳೆದ ಲೋಕಸಭೆ ಚುನಾವಣೆಗಿಂತ ಈ ಬಾರಿ ಬಿಜೆಪಿ ಅಷ್ಟೊಂದು ಲೀಡ್ ಪಡೆಯಲು ಸಾಧ್ಯವಿಲ್ಲ ಎಂಬುದು ಬಹುತೇಕರ ಲೆಕ್ಕಾಚಾರ.
ಏನಿದು ಒಳ ಒಪ್ಪಂದ-ನಂಟು: ಮುಧೋಳ ನಗರದಲ್ಲಿ ಕಾಂಗ್ರೆಸ್ ಒಂದಷ್ಟು ಪ್ರಭಾವ ಹೊಂದಿದ್ದರೆ, ಗ್ರಾಮೀಣ ಭಾಗದಲ್ಲಿ ಮೋದಿ ಅಲೆ, ಹಿಂದುತ್ವದ ಬಲ ಹೊಂದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮುಧೋಳದ ಗ್ರಾಮೀಣ ಭಾಗದಲ್ಲೇ 17,898 ಮತಗಳ ಲೀಡ್ ಬಿಜೆಪಿಗೆ ಬಂದಿತ್ತು. ಈ ಕ್ಷೇತ್ರದ ಹಾಲಿ ಸಚಿವ ಆರ್.ಬಿ. ತಿಮ್ಮಾಪುರ, ಕಳೆದ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶ ಬಂಡಿವಡ್ಡರ, ವಿಧಾನಪರಿಷತ್ ಸದಸ್ಯ ಎಸ್.ಆರ್. ಪಾಟೀಲ ಒಟ್ಟಿಗೆ ಕುಳಿತು, ಸಹಕಾರಿ ಕಾರ್ಖಾನೆ ಚುನಾವಣೆಗೆ ಕಾಂಗ್ರೆಸ್ಸಿಗರು ಸ್ಪರ್ಧೆ ಮಾಡಲ್ಲ. ನೀವು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ಕೊಡಿ ಎಂಬ ಒಪ್ಪಂದ ಮಾಡಿಕೊಂಡರೆ, ಮತ್ತೂಂದೆಡೆ ಗದಗ-ಹಾವೇರಿ ಕ್ಷೇತ್ರದ ಪಂಚಮಸಾಲಿ ಸಮಾಜದಿಂದ ಅಲ್ಲಿನ ಅಭ್ಯರ್ಥಿ ಡಿ.ಆರ್. ಪಾಟೀಲರಿಗೆ ಬೆಂಬಲಿಸುತ್ತೇವೆ, ನೀವು (ರಡ್ಡಿ) ಇಲ್ಲಿ ಕಾಂಗ್ರೆಸ್‌ಗೆ ಬೆಂಬಲಿಸಬೇಕು ಎಂಬ ಒಪ್ಪಂದವನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಮಧ್ಯಸ್ಥಿಕೆಯಲ್ಲಿ ನಡೆದಿತ್ತು ಎನ್ನಲಾಗಿದೆ. ಹೀಗಾಗಿ ಈ ಬಾರಿ, ಪಕ್ಷ ಬದಿಗಿಟ್ಟು, ಜಾತಿ ಪ್ರಮುಖರಲ್ಲಿ ಒಳ ಒಪ್ಪಂದ ನಡೆಸಲಾಗಿತ್ತು ಎಂಬುದು ರಾಜಕೀಯ ವಲಯದಲ್ಲಿ ಕೇಳಿ ಬಂದ ಸತ್ಯದ ಮಾತು. ಇದರಿಂದ ಈ ಬಾರಿ ಕಾಂಗ್ರೆಸ್ ಇಲ್ಲಿ ಹೆಚ್ಚಿನ ಮತ ಪಡೆಯಲಿದೆ ಎಂಬುದು ಪಕ್ಷದ ಹಿರಿಯರ ನಿರೀಕ್ಷೆ.
ಮೋದಿ ಅಲೆ: ಎರಡು ಪಕ್ಷಗಳ ರಾಜಕೀಯ ಮುಖಂಡರು ಏನೇ ಒಳ ಒಪ್ಪಂದ ಮಾಡಿಕೊಂಡರೂ, ಈ ಕ್ಷೇತ್ರದ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಬಿಜೆಪಿಗೆ ಭದ್ರ ನೆಲೆಯ ಜತೆಗೆ ಮೋದಿಯ ಅಲೆಯೂ ಇದೆ. ಅಲ್ಲದೇ ಕಳೆದ ಮೂರು ಅವಧಿಗೆ ರಡ್ಡಿ ಸಮಾಜಕ್ಕೆ ಲೋಕಸಭೆ ಟಿಕೆಟ್ ಕೊಟ್ಟು, ಈ ಬಾರಿ ಸಮಾಜಕ್ಕೆ ಟಿಕೆಟ್ ಕೊಟ್ಟಿಲ್ಲ ಎಂಬ ಅಸಮಾಧಾನ, ಕಾಂಗ್ರೆಸ್‌ಗೆ ಮೈನಸ್ ಆಗಿತ್ತು. ಹೀಗಾಗಿ ರಡ್ಡಿ ಸಮಾಜ, ಕಾಂಗ್ರೆಸ್ ಬೆಂಬಲಿಸಲು ಸಾಧ್ಯವಿಲ್ಲ. ಎಲ್ಲ ಸಮಾಜದೊಂದಿಗೂ ಉತ್ತಮವಾಗಿರುವ ಬಿಜೆಪಿ ಅಭ್ಯರ್ಥಿಗೆ ಇಲ್ಲಿನ ಮತದಾರರು, ತಮ್ಮ ಹಕ್ಕಿನ ಮುದ್ರೆಯೊತ್ತಿದ್ದಾರೆ ಎಂಬ ವಿಶ್ವಾಸ ಬಿಜೆಪಿಗರಲ್ಲಿದೆ.
ಈ ಕ್ಷೇತ್ರದಲ್ಲಿ ದಲಿತ, ಮುಸ್ಲಿಂ, ರಡ್ಡಿ, ವಾಲ್ಮೀಕಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಬಹುತೇಕ ಹಳ್ಳಿಗಳು, ರಡ್ಡಿ ಸಮಾಜದ ಪ್ರಮುಖರು ಹೇಳಿದಂತೆ ಕೇಳುವ ಬಹುಪಾಲು ಜನರಿದ್ದಾರೆ. ಅವರು ಹೇಳುವ ಪಕ್ಷಕ್ಕೆ, ಅಭ್ಯರ್ಥಿಗೆ ಬೆಂಬಲ ಕೊಡುವ ಪರಂಪರೆ ಹಲವು ಚುನಾವಣೆಗಳಿಂದ ನಡೆದುಕೊಂಡು ಬಂದಿದ್ದು, ಅದು ಈ ಬಾರಿಯೂ ಮುಂದುವರೆದಿದೆ ಎಂಬ ಲೆಕ್ಕಾಚಾರ ಕ್ಷೇತ್ರದಲ್ಲಿದೆ.
Advertisement
ಹೌದು, ಕಾಂಗ್ರೆಸ್ ಪಕ್ಷ, ಗದಗ-ಹಾವೇರಿ ಲೋಕಸಭೆ ಕ್ಷೇತ್ರದ ನಂಟನ್ನು ಇಲ್ಲಿ ಬಳಿಸಿಕೊಂಡಿದೆ. ನೀವು ಇಲ್ಲಿ ನಮಗೆ ಮತ ಕೊಡಿಸಿ, ನಾವು ನಿಮಗೆ ಅಲ್ಲಿ ಮತ ಕೊಡಿಸುತ್ತೇವೆ ಎಂಬುದು ರಡ್ಡಿ ಮತ್ತು ಪಂಚಮಸಾಲಿ ಪ್ರಮುಖರು (ಎರಡೂ ಪಕ್ಷಗಳು ಒಳಗೊಂಡಂತೆ) ಒಳ ಒಪ್ಪಂದ ಮಾಡಿಕೊಂಡೇ ಈ ಬಾರಿಯ ಲೋಕಸಭೆ ಚುನಾವಣೆಯನ್ನು ಕ್ಷೇತ್ರದಲ್ಲಿ ಎದುರಿಸಿದ್ದಾರೆ. ಇದರ ಜತೆಗೆ ಪ್ರಮುಖವಾಗಿ ತಾಲೂಕಿನ ಪ್ರಮುಖ ಸಹಕಾರಿ ವಲಯದ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಗೂ, ಲೋಕಾ ಚುನಾವಣೆಗೂ ಲಿಂಕ್ ಮಾಡಲಾಗಿತ್ತು. ಅದಕ್ಕಾಗಿಯೇ ಕಳೆದ ಬಾರಿ ತುರುಸಿನಿಂದ ನಡೆದಿದ್ದ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆ, ಈ ಬಾರಿ ಬಹುತೇಕ ಅವಿರೋಧ ಆಯ್ಕೆಗೂ ಕಾರಣವಾಗಿತ್ತು ಎಂಬುದು ತಾಲೂಕಿನಲ್ಲಿರುವ ಬಹಿರಂಗ ಗುಟ್ಟು ಎನ್ನಲಾಗಿದೆ.
Related Articles
Advertisement
•ಮಹಾಂತೇಶ ಕರೆಹೊನ್ನ