ಗದಗ: ಮಳೆ ನೀರಿನಿಂದ ತುಂಬಿಕೊಂಡಿದ್ದ ರೈಲ್ವೇ ಅಂಡರ್ ಪಾಸ್‌ನಲ್ಲಿ ಸಿಲುಕಿದ್ದ 36 ಜನ ಪ್ರಯಾಣಿಕರನ್ನು ರಕ್ಷಿಸುವಲ್ಲಿ ಲಕ್ಷ್ಮೇಶ್ವರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ರವಿವಾರ ದಿನವಿಡೀ ಸುರಿದ ಭಾರೀ ಮಳೆಯಿಂದಾಗಿ ಹಾವೇರಿ ಜಿಲ್ಲೆಯ ಯಲವಿಗಿ ರೈಲ್ವೇ ಅಂಡರ್ ಪಾಸ್‌ನಲ್ಲಿ ಸುಮಾರು 6 ಅಡಿಗಳಷ್ಟು ನೀರು ತುಂಬಿಕೊಂಡಿತ್ತು. ಅಂದು ತಡ ರಾತ್ರಿ ಸವಣೂರು ಮಾರ್ಗವಾಗಿ ಗದಗಿಗೆ ಆಗಮಿಸುತ್ತಿದ್ದ ಖಾಸಗಿ ಬಸ್ ಚಾಲಕ ನೀರಿನ ಮಟ್ಟವನ್ನು ಲೆಕ್ಕಿಸದೇ, ಬಸ್ ಓಡಿಸಿದ್ದಾನೆ. ಈ ವೇಳೆ ಅರ್ಧ ದಾರಿಯಲ್ಲೇ ಬಸ್ ಬಂದ್ ಆಗಿದ್ದರಿಂದ ಪ್ರಯಾಣಿಕರು ಅಪಾಯದಲ್ಲಿ ಸಿಲುಕಿದ್ದರು. ಸುಮಾರು 36 ಪ್ರಯಾಣಿಕರಿಂದ ಕೂಡಿದ್ದ ಬಸ್‌ನಲ್ಲಿ ಮಹಿಳೆಯರ ಗೋಳಾಟ, ಚೀರಾಟ ಶುರುವಾಗಿತ್ತು.
ಈ ವೇಳೆಯಲ್ಲಿ ಅದೇ ಬಸ್‌ನಲ್ಲಿದ್ದ ಸಹ ಪ್ರಯಾಣಿಕರೊಬ್ಬರು ಲಕ್ಷ್ಮೇಶ್ವರ ಠಾಣೆ ಪಿಎಸ್‌ಐ ಶಿವಯೋಗಿ ಲೋಹಾರ ಅವರಿಗೆ ಕರೆ ಮಾಡಿ, ಮಾಹಿತಿ ನೀಡಿದ್ದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪಿಎಸ್‌ಐ ತಮ್ಮ ಸಿಬ್ಬಂದಿಯೊಂದಿಗೆ ಹಗ್ಗ, ಮತ್ತಿತರೆ ಸಲಕರಣೆಗಳೊಂದಿಗೆ ತಕ್ಷಣ ಸ್ಥಳಕ್ಕೆ ದಾವಿಸಿ, ಎಲ್ಲ ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಈ ಕ್ರಮಕ್ಕೆ ಇಲಾಖೆಯ ಉನ್ನತಾಧಿಕಾರಿಗಳೂ ಮೆಚ್ಚುಗೆ ಸೂಚಿಸಿದ್ದಾರೆ.
ಸದ್ಯ ಲಕ್ಷ್ಮೇಶ್ವರ- ಯಲವಿಗಿ ಮಧ್ಯೆ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಲಕ್ಷ್ಮೇಶ್ವರದಿಂದ ಶಿಗ್ಲಿ, ಹೂವಿನ ಶಿಗ್ಲಿ ಮಾರ್ಗವಾಗಿ ಹಾವೇರಿ, ದಾವಣಗೆರೆ, ಬೆಂಗಳೂರು ಬಸ್‌ಗಳು ಸಂಚಾರ ನಡೆಸುತ್ತಿವೆ.