Advertisement

Gadag; ಸಚಿವ ಎಚ್.ಕೆ. ಪಾಟೀಲರಿಂದ ಜಿಲ್ಲೆಯ ಮೊದಲ ಜನತಾ ದರ್ಶನಕ್ಕೆ ಚಾಲನೆ

12:20 PM Sep 30, 2023 | Team Udayavani |

ಗದಗ: ನಗರದ ಜಿಲ್ಲಾಡಳಿತ ಭವನದ ಎದುರು ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಜನತಾ ದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಶನಿವಾರ ಚಾಲನೆ ನೀಡಿದರು.

Advertisement

ಗದಗ-ಬೆಟಗೇರಿ ನಗರದ ಹೆಲ್ತಕ್ಯಾಂಪ್ ನಿವಾಸಿ ಕಮಲಾಬಾಯಿ ಹನುಮಂತಭಟ್ ಜೋಶಿ ಅವರು ಶತಾಯುಷಿಯಾಗಿದ್ದರೂ ಆಧಾರ್ ಕಾರ್ಡ್ ಹೊಂದಿರಲಿಲ್ಲ. ಮಾಸಿಕವಾಗಿ ಬರುತ್ತಿದ್ದ ಮಾಸಾಶನವೂ ಸ್ಥಗಿತವಾಗಿ ಸಂಕಷ್ಟ ಅನುಭವಿಸುತ್ತಿದ್ದರು. ಜನತಾ ದರ್ಶನದಲ್ಲಿ ಸಮಸ್ಯೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ವೃದ್ಧೆಯು ಸಲ್ಲಿಸಿದ ಅರ್ಜಿಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿದ ಸಚಿವರು ಆಧಾರ್ ಕಾರ್ಡ್ ಜೊತೆಗೆ ಮಾಸಾಶನ ಆದೇಶ ಪತ್ರ ವಿತರಿಸಿ, ಜನತಾ ದರ್ಶನದ ಮೊದಲ ಸಮಸ್ಯೆಯನ್ನು ಪರಿಹರಿಸಿದರು.

ಮಾಸಾಶನ, ಮನೆ ಮಂಜೂರಾತಿ, ವಿಧವಾ ವೇತನ, ಭೂ ದಾಖಲಾತಿ ಸೇರಿ ವಿವಿಧ ಸಮಸ್ಯೆಗಳನ್ನು ಹೊತ್ತು ಬಂದ ಕೆಲ ಸಾರ್ವಜನಿಕರಿಗೆ ಸ್ಥಳದಲ್ಲೇ ಪರಿಹಾರ ನೀಡಿದರೆ, ಕೆಲವರಿಗೆ ಸಮಯಾವಕಾಶ ನೀಡಿ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿ. ಶಿಖಾ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಸಂತಸ ವ್ಯಕ್ತಪಡಿಸಿದ ವೃದ್ಧೆ: ಸಮಸ್ಯೆ ಪರಿಹಾರವಾದ ಕಾರಣ ಸಂತಸ ವ್ಯಕ್ತಪಡಿಸಿದ ಕಮಲಾಬಾಯಿ, ಬೆರಳಚ್ಚು ಗುರುತು ಆಧಾರ್ ನೋಂದಣಿ ಕೇಂದ್ರದಲ್ಲಿ‌ಸ್ವೀಕೃತವಾಗದ ಕಾರಣ ಇದುವರೆಗೆ ಆಧಾರ್ ಕಾರ್ಡ್ ಬಂದಿರಲಿಲ್ಲ.  ಆಧಾರ್ ಕಾರ್ಡ್ ಇಲ್ಲದ ಕಾರಣ ಕಳೆದ ಒಂದು ವರ್ಷ 6 ತಿಂಗಳಿನಿಂದ ಮಾಸಾಶನ ಸ್ಥಗಿತವಾಗಿತ್ತು. ಜನತಾದರ್ಶನ ಮೂಲಕ ಸಮಸ್ಯೆ ಸರಿಪಡಿಸಲಾಯಿತು. ಸಚಿವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next