ಗದಗ: ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಇಬ್ಬಾಗವಾಗುತ್ತದೆ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸಂದರ್ಭ ಒದಗಿ ಬರಬಹುದು, ಮಧ್ಯಂತರ ಚುನಾವಣೆ ಎದುರಾಗಬಹುದು ಎಂದು ಸಿ.ಸಿ. ಪಾಟೀಲ್ ಭವಿಷ್ಯ ನುಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಕೆಳಗಿಳಿಯುವಾಗ ಸರಕಾರದ ಖಜಾನೆಯಲ್ಲಿ 25 ಸಾವಿರ ಕೋಟಿ ಹಣವಿತ್ತು. ಈಗ ಒಂದು ಲಕ್ಷ ಕೋಟಿ ರೂ. ಗೂ ಅಧಿಕ ಸಾಲವಿದೆ. ರಾಜ್ಯದ ಅರ್ಥಿಕ ಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಲಿ, ನಂತರ ಮುಂದೆ ಬಹಿರಂಗ ಚರ್ಚೆಗೆ ಬರಲಿ ಎಂದರು.
ಮತದಾರರಲ್ಲಿ ಉತ್ಸಾಹ
ಪ್ರತಿ ಗ್ರಾಮಗಳಲ್ಲಿ, ಗದಗ-ಬೆಟಗೇರಿ ಪ್ರತಿ ವಾರ್ಡ್ ಗಳಲ್ಲಿ ಬಸವರಾಜ ಬೊಮ್ಮಾಯಿ ಪರವಾಗಿ ಪ್ರಚಾರ ಮಾಡಿದ್ದೇವೆ. ಕಾರ್ಯಕರ್ತರು 44 ಡಿಗ್ರಿ ಉರಿ ಬಿಸಿಲಿನಲ್ಲಿ ಪ್ರಚಾರ ಮಾಡಿದ್ದಾರೆ. ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಕನಿಷ್ಠ 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಶಿರಹಟ್ಟಿ ಭಾಗದ ಹಳ್ಳಿಗಳಲ್ಲಿ ಮತದಾರರ ಉತ್ಸಾಹ ಹೆಚ್ಚಾಗಿದೆ, ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಹೆಚ್ಚಿದೆ. ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಕನಿಷ್ಠ 15ರಿಂದ 20 ಸಾವಿರ ಮತಗಳ ಲೀಡ್ ಕೊಡುತ್ತೇವೆ ಎಂದು ಸಿ.ಸಿ. ಪಾಟೀಲ್ ಹೇಳಿದರು.
ಬಿಜೆಪಿಗೆ ಹೇಗೆ ಅಡ್ಡಗಾಲಾಗಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದೆ. ಪಂಚ ನ್ಯಾಯ(ಗ್ಯಾರಂಟಿ) ಗಳು ಕಾಂಗ್ರೆಸ್ ಪ್ರಣಾಳಿಕೆ ಹೊರತು, ಇಂಡಿಯಾ ಮೈತ್ರಕೂಟದ ಪ್ರಣಾಳಿಕೆಯಲ್ಲ, ಅವರಿಗೆ ಸಮರ್ಥ ಅಭ್ಯರ್ಥಿಯಿಲ್ಲ. ಮಹಿಳೆಯರಿಗೆ 1 ಲಕ್ಷ ರೂ. ಕೊಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ, ಅದು ಅವರು ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಾಗ ಮಾತ್ರ. ಸುಳ್ಳಿನ ಫ್ಯಾಕ್ಟರಿಯಾಗಿರುವ ಕಾಂಗ್ರೆಸ್ ದೇಶದಲ್ಲಿ ಮಹಿಳೆಯರಿಗೆ ಗ್ಯಾರಂಟಿ ಒದಗಿಸಲು ಎಲ್ಲಿಂದ ಹಣ ತರುತ್ತಾರೆ. ಯಾವುದಾರೂ ರಾಜ್ಯ ಮಾರಾಟ ಮಾಡಿ ಹಣ ಹೊಂದಿಸುತ್ತಾರಾ ಎಂದು ಪಾಟೀಲ್ ಪ್ರಶ್ನಿಸಿದರು.
ರಾಹುಲ್ ಗಾಂಧಿ ಅವರು ವಿದೇಶದಲ್ಲಿ ಭಾರತದ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ಮಂಡಿಸಿಲ್ಲ, ಅವರು ದೇಶದ ಬಗ್ಗೆ ಕಾಳಜಿ ಇಲ್ಲದವರಿಂದ ದೇಶದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಶಿಕ್ಷೆಯಾಗಲಿ: ಕಾನೂನಿನ ಮುಂದೆ ಯಾರು ದೊಡ್ಡವರಲ್ಲ, ಎಸ್ಐಟಿ ತನಿಖೆ ನಡೆಸುತ್ತಿದೆ, ನಿಷ್ಪಕ್ಷಪಾತ ತನಿಖೆ ನಡೆಯಲಿದೆ, ತಪ್ಪಾಗಿದ್ದರೆ ಕಾನೂನು ರೀತಿ ಶಿಕ್ಷೆಯಾಗುತ್ತದೆ ಯಾರ್ಯಾರು ಯಾವ ಯಾವ ಹಂತದಲ್ಲಿ ತಪ್ಪು ಮಾಡಿದ್ದಾರೆ, ಪೆನ್ ಡ್ರೈವ್ ಬಿಡುಗಡೆ ಪ್ರಕರಣದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದನ್ನು ತನಿಖೆ ಮೂಲಕ ಆರೋಪಿಗಳಿಗೆ ಶಿಕ್ಷೆಯಾಗಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಇದ್ದರು