Advertisement

Gadag:ಬಿರುಬಿಸಿಲ ದಾಹ ನೀಗಿಸುವ ನೀರಿನ ಅರವಟ್ಟಿಗೆ;ನಿಟ್ಟುಸಿರು ಬಿಡುತ್ತಿರುವ ಸಾರ್ವಜನಿಕರು

06:11 PM May 19, 2023 | Team Udayavani |

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಿಸಿಲಿನ ತಾಪ ಹೆಚ್ಚಿದ್ದು, ಸಾರ್ವಜನಿಕರು, ಪ್ರಯಾಣಿಕರು ಪರಿತಪಿಸುವಂತಾಗಿದೆ.
ಬಿರುಬಿಸಿಲಿಗೆ ಬಸವಳಿದ ಜನತೆಯ ದಾಹ ನೀಗಿಸಲು ನಗರದ ವಿವಿಧೆಡೆ ಅರವಟ್ಟಿಗೆ ಸ್ಥಾಪಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿರುವುದರಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ.

Advertisement

ನಗರದಲ್ಲಿ ದಿನೇ ದಿನೆ ಬಿಸಿಲ ತಾಪ ಹೆಚ್ಚುತ್ತಿದೆ. ನಗರ ಪ್ರದೇಶದ ಜನರು ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗಗಳಿಂದ ನಾನಾ ಕೆಲಸಗಳಿಗೆ ನಗರಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅಲ್ಲಲ್ಲಿ ಅರವಟ್ಟಿಗೆ ಸ್ಥಾಪಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ನಗರದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿರುವ ಅರವಟ್ಟಿಗೆಗೆ ನಾನಾ ಸಂಘ ಸಂಸ್ಥೆಗಳು, ಕೆಲವರು ವೈಯಕ್ತಿಕವಾಗಿ ನೀರು ತುಂಬಿಸುವ ಕಾಯಕದಲ್ಲಿ ನಿತ್ಯವೂ ತೊಡಗಿದ್ದಾರೆ. ಕೆಲವೆಡೆ ಪ್ಲಾಸ್ಟಿಕ್‌ ಕ್ಯಾನ್‌ಗಳಲ್ಲಿ, ಕೆಲವು ಕಡೆ ಮಣ್ಣಿನ ಮಡಕೆಗೆ ಬಟ್ಟೆ ಸುತ್ತಿ ನೀರನ್ನು ತುಂಬಿಡಲಾಗಿದೆ. ಪರಿಣಾಮ ನಾನಾ ಕೆಲಸ-ಕಾರ್ಯಗಳಿಗಾಗಿ ಜಿಲ್ಲಾ ಕೇಂದ್ರಕ್ಕೆ ಆಗಮಿಸುವ ಗ್ರಾಮೀಣರು,
ಕಾರ್ಮಿಕರು ಅರವಟ್ಟಿಗೆ ನೀರು ಕುಡಿದು ದಾಹ ನೀಗಿಸಿಕೊಳ್ಳುತ್ತಿದ್ದಾರೆ.

ವಿವಿಧೆಡೆ ಅರವಟ್ಟಿಗೆ: ಗದಗ-ಬೆಟಗೇರಿ ನಗರಸಭೆ ಮುಂಭಾಗ, ಬಸವೇಶ್ವರ ವೃತ್ತ, ಕೆ.ಸಿ. ರಾಣಿ ರಸ್ತೆ, ಬ್ಯಾಂಕ್‌ ರಸ್ತೆ, ಸರಾಫ್‌ ಬಜಾರ್‌, ಜನತಾ ಬಜಾರ್‌, ಹಳೆಯ ಜಿಲ್ಲಾಧಿಕಾರಿ ಕಚೇರಿ, ಬನ್ನಿ ಮಹಾಂಕಾಳಿ ದೇವಸ್ಥಾನ, ಕನ್ನಿಕಾಪರಮೇಶ್ವರಿ ದೇವಸ್ಥಾನ ಸೇರಿದಂತೆ ವಿವಿಧೆಡೆ ಅರವಟ್ಟಿಗೆಗಳನ್ನು ಇಡಲಾಗಿದೆ.

ಅಲ್ಲದೇ, ನಗರದ ಪ್ರಮುಖ ಮಾರ್ಗ, ವೃತ್ತಗಳಲ್ಲಿ ನಾನಾ ಸಂಘಟನೆಗಳು ಬೇಸಿಗೆ ದಾಹ ನೀಗಿಸಲೆಂದು ಅರವಟ್ಟಿಗೆಗಳನ್ನು
ಸ್ಥಾಪಿಸಿವೆ. ಸಂಘಟನೆಗಳ ಪದಾಧಿಕಾರಿಗಳು ನಿತ್ಯ ಅರವಟ್ಟಿಗೆಗಳಿಗೆ ನೀರು ತುಂಬಿಸುತ್ತಾರೆ. ಕೆಲವೆಡೆ ಮಣ್ಣಿನ ಮಡಕೆ, ಇನ್ನೂ ಕೆಲವೆಡೆ ನೀರಿನ ಕ್ಯಾನ್‌ ಗಳನ್ನು ಇಡಲಾಗಿದೆ. ಕಾರ್ಯ ನಿಮಿತ್ತ ನಗರಕ್ಕೆ ಬರುವ ಜನತೆ, ಅಲ್ಲಲ್ಲಿ ಸ್ಥಾಪಿಸಿರುವ ಅರವಟ್ಟಿಗೆ ನೀರು ಕುಡಿದೇ ಮುಂದೆ ಹೋಗುತ್ತಾರೆ. ಅರವಟ್ಟಿಗೆ ಸ್ಥಾಪಿಸಿದವರ ಹೊಟ್ಟೆ ತಣ್ಣಗಿರಲಿ ಎಂದು ಹಾರೈಸುವ ದೃಶ್ಯ ಸಹಜವಾಗಿ ಕಾಣುತ್ತದೆ.

Advertisement

ದುಬಾರಿ ನೀರು
ನಗರದಲ್ಲಿ ಒಂದು 20ಲೀ. ನೀರಿನ ಕ್ಯಾನ್‌ಗೆ 30 ರಿಂದ 50 ರೂ., 2 ಲೀಟರ್‌ ನೀರಿನ ಬಾಟಲ್‌ಗೆ 30 ರೂ., ಲೀಟರ್‌ ನೀರಿನ ಬಾಟಲ್‌ಗೆ 20 ರೂ. ಇದೆ. ಸಣ್ಣ ಪುಟ್ಟ ಹೋಟೆಲ್‌ಗ‌ಳಲ್ಲಿ ಬರೀ ನೀರು ಕೇಳಿದರೆ ಕೊಡುವ ಮನಸ್ಥಿತಿಯಲ್ಲಿ ಕೆಲವರು ಇಲ್ಲ. ಊಟ, ತಿಂಡಿ, ಕಾಫಿಗೆ ಬರುವವರಿಗೆ ಮಾತ್ರ ನೀರು ಕೊಡುತ್ತಾರೆ. ಹೋಟೆಲ್‌ನವರು ಸಹ ಹಣ ಪಾವತಿಸಿ ಟ್ಯಾಂಕರ್‌ಗಳಲ್ಲಿ ನೀರನ್ನು ಹಾಕಿಸಿಕೊಳ್ಳುತ್ತಿರುವುದರಿಂದ ಪುಕ್ಕಟೆ ನೀರು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಅರವಟ್ಟಿಗೆಗಳಲ್ಲಿ ಇರುವ ನೀರೇ ಬಹುಪಾಲು ಮಂದಿಗೆ ಆಸರೆಯಾಗಿದೆ.

ಬಿಡಾಡಿ ದನಗಳಿಗೂ ನೀರಿನ ವ್ಯವಸ್ಥೆ ಬಿಸಿಲಿನ ಧಗೆಗೆ ಜನಸಾಮಾನ್ಯರಂತೆ ಜಾನುವಾರುಗಳು ಕೂಡ ದಾಹದಿಂದ
ಬಳಲುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು, ನಗರದ ವೀರನಾರಾಯಣ ದೇವಸ್ಥಾನದ ಬಳಿ ತೋಂಟದಾರ್ಯ ಮಠದ
ಜಾತ್ರಾ ಮಹೋತ್ಸವ ಸಮಿತಿ ಕಳೆದ 2017ರಲ್ಲಿ ಬಿಡಾಡಿ ದನಗಳಿಗೆ ದನದ ನಿರ್ಮಾಣ ಮಾಡಿರುವ ಅರವಟ್ಟಿಗೆಗೆ ಪ್ರತಿದಿನ ನೀರು
ಹಾಕಲಾಗುತ್ತಿದೆ. ಬಿಸಿಲಿನ ಸಮಯದಲ್ಲಿ ಬಿಡಾಡಿ ದನಗಳು ಇಲ್ಲಿನ ನೀರನ್ನು ಕುಡಿದು ದಾಹ ನೀಗಿಸಿಕೊಳ್ಳುತ್ತಿವೆ.

ಗರಿಷ್ಠ ಉಷ್ಣಾಂಶ ದಾಖಲೆ
ಗದಗ-ಬೆಟಗೇರಿ ಅವಳಿ ನಗರದಲ್ಲಿ ಕಳೆದೊಂದು ವಾರದಿಂದ ಗರಿಷ್ಠ 39ರಿಂದ 40 ಹಾಗೂ ಕನಿಷ್ಠ 22ರಿಂದ 24 ಡಿಗ್ರಿ
ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗುತ್ತಿದ್ದು, ಸಾರ್ವಜನಿಕರು ಬಿರುಬಿಸಿಲಿನ ಹೊಡೆತಕ್ಕೆ ಕಂಗಾಲಾಗುತ್ತಿದ್ದಾರೆ. ಆದಷ್ಟು ಬೇಗ ಮಳೆಗಾಲ ಆವರಿಸಿ ಭೂಮಿ ತಂಪಾಗಲೆಂದು ದೇವರಲ್ಲಿ ದುಬಾರಿ ಪ್ರಾರ್ಥಿಸುತ್ತಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೇಸಿಗೆ ಚುರುಕಾಗಿದೆ. ಬಿರುಬಿಸಿಲಿಗೆ ದಾಹ, ಆಯಾಸ ಉಂಟಾಗುತ್ತಿದ್ದು, ಕೆಲವು ಸಂಘ-ಸಂಸ್ಥೆಗಳು ಹಾಗೂ ಸ್ಥಳೀಯ ಸಾರ್ವಜನಿಕರು ದಾಹ ನೀಗಿಸಲು ಅರವಟ್ಟಿಗೆ ನಿರ್ಮಿಸಿರುವುದು ಖುಷಿ
ಕೊಟ್ಟಿದೆ.
ಮಂಜುನಾಥ ದ್ಯಾಮಣ್ಣವರ
ಹರ್ತಿ ಗ್ರಾಮದ ನಿವಾಸಿ

*ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next