ಗದಗ: ಕೋವಿಡ್-19 ಸೋಂಕಿನಿಂದ ಗುಣಮುಖರಾದ 59 ವರ್ಷದ (ಪಿ- 304) ಮಹಿಳೆಯನ್ನು ಶುಕ್ರವಾರ ಆಯುಷ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಇಲ್ಲಿನ ರಂಗನವಾಡದ ನಿವಾಸಿಯಾಗಿರುವ (ಪಿ.304) ಮಹಿಳೆಗೆ ಏ.16 ರಂದು ಸೋಂಕು ದೃಢ ಪಟ್ಟಿತ್ತು. ಈಕೆಗೆ ಜಿಲ್ಲೆಯ ಮೊದಲ ಪ್ರಕರಣವಾಗಿದ್ದ ವೃದ್ಧೆಯೊಂದಿಗೆ (ಪಿ.166) ದ್ವಿತೀಯ ಸಂಪರ್ಕದಿಂದ ಸೋಂಕು ಹರಡಿತ್ತು.
ಸತತ 15 ದಿನಗಳ ಕಾಲ ಕೋವಿಡ್-19 ರೋಗದ ಚಿಕಿತ್ಸೆಗೆ ನಿಗದಿಪಡಿಸಲಾದ ಆಯುಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮಹಿಳೆಯನ್ನು ಗುಣಪಡಿಸಲು ಆಸ್ಪತ್ರೆಯ ತಜ್ಞ ವೈದ್ಯರು ಹಾಗೂ ಶುಶ್ರೂಷಕಿಯರು ಹಗಲಿರುಳು ಶ್ರಮಿಸಿದ್ದಾರೆ. ಪರಿಣಾಮ 15 ದಿನಗಳ ಬಳಿಕ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿರುವ ಮಹಿಳೆಯನ್ನು ಶುಕ್ರವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಡಿಸ್ಚಾರ್ಜ್ ಮಾಡಲಾಯಿತು.
ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಹೊರಬಂದ ಮಹಿಳೆಗೆ ಜಿಮ್ಸ್ ನಿರ್ದೇಶಕ ಡಾ|ಪಿ.ಎಸ್.ಭೂಸರೆಡ್ಡಿ ಫಲ- ಪುಷ್ಪ ನೀಡಿ, ಶುಭ ಕೋರಿದರು. ಜೊತೆಗೆ ರೇಷ್ಮೆ ಸೀರೆ, ಮಾಸ್ಕ್, ಸ್ಯಾನಿಟೈಸರ್, ಆಹಾರ ಸಾಮಗ್ರಿ ಸಹಿತ ದಿನನಿತ್ಯದ ಅವಶ್ಯಕ ವಸ್ತುಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿ.ಪಂ. ಸಿಇಓ ಡಾ| ಆನಂದ ಕೆ, ಜಿಲ್ಲಾ ಪೋಲಿಸ ವರಿಷ್ಠಾದಿಕಾರಿ ಯತೀಶ ಎನ್., ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರಿಗಡದ, ಜಿಮ್ಸ ನಿರ್ದೇಶಕ ಡಾ.ಪಿ.ಎಸ್.ಭೂಸರೆಡ್ಡಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಬಿ.ಸಿ.ಕರಿಗೌಡರ, ವೈದ್ಯ ಸಿಬ್ಬಂದಿಗಳು ಮಹಿಳೆಯನ್ನು ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಡಲಾಯಿತು.
ಜಿಲ್ಲೆಯಲ್ಲಿ ಒಟ್ಟು ಐದು ಪ್ರಕರಣಗಳು ದೃಢ ಪಟ್ಟಿದ್ದು, ಈಗಾಗಲೇ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಇದೀಗ ಕೋವಿಡ್-19 ಸೋಂಕಿತರೊಬ್ಬರು ಗುಣಮುಖರಾಗಿ ಹೊರ ಬಂದಿದ್ದು, ಇನ್ನುಳಿದ ಮೂವರಿಗೆ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.