ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ಗಾನಯೋಗಿ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳ 13ನೇ ಪುಣ್ಯಸ್ಮರಣೋತ್ಸವ ಆಚರಿಸಲಾಯಿತು.
ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ವಿವಿಧ ಭಜನಾ ಮಂಡಳಿಗಳ ತಾಳ ಮೇಳದ ಸದ್ದಿನ ಜತೆಗೆ ಸಂಗೀತದ ಸ್ವರದ ನಡುವೆ ಸೋಮವಾರ ಅನ್ನಸಂತರ್ಪಣೆ ಜರುಗಿತು.
ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ 13ನೇ ಪುಣ್ಯಾರಾಧನೆ ನಿಮಿತ್ತ ವಿವಿಧ ಸಂಘ-ಸಂಸ್ಥೆಗಳು, ಅಟೋ ಚಾಲಕರ, ಮಾಲಿಕರ ಸಂಘ, ಗ್ರೇನ್ ಮಾರುಕಟ್ಟೆ ವ್ಯಾಪಾರಸ್ಥರು ಸೇರಿ ಬೆಟಗೇರಿ, ನರಸಾಪುರ, ಹುಯಿಲಗೋಳ, ನಾರಾಯಣಪುರ, ಕೋಟುಮಚಗಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಗ್ರಾಮಸ್ಥರು ವೇದಿಕೆ ನಿರ್ಮಿಸಿ ಪುಟ್ಟರಾಜ ಕವಿ ಗವಾಯಿಗಳ ಭಾವಚಿತ್ರಕ್ಕೆ ಪೂಜೆ, ನಮನ ಸಲ್ಲಿಸಿದರು.
ವಿಶೇಷ ಪೂಜೆ: ಪಂಡಿತ ಪುಟ್ಟರಾಜ ಕವಿಗವಾಯಿಗಳ ಪುಣ್ಯಸ್ಮರಣೆ ಹಿನ್ನೆಲೆ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಬೆಳಿಗ್ಗೆ ರುದ್ರಾಭಿಷೇಕ, ವಿವಿಧ ಧಾರ್ಮಿಕ ಹಾಗೂ ಸಂಗೀತ ಕಾರ್ಯಕ್ರಮ ನಡೆದವು. ಉಭಯ ಗವಾಯಿಗಳಾದ ಪಂಚಾಕ್ಷರಿ ಹಾಗೂ ಪುಟ್ಟರಾಜ ಗವಾಯಿಗಳ ಕರ್ತೃ ಗದ್ದುಗೆ ಹಾಗೂ ಹಾನಗಲ್ ಕುಮಾರ ಮಹಾಶಿವಯೋಗಿಗಳ ಗದ್ದುಗೆಯನ್ನು ಹೂವುಗಳಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.
ನಗರದ ಭೂಮರಡ್ಡಿ ವೃತ್ತದಲ್ಲಿರುವ ಪುಟ್ಟರಾಜ ಗವಾಯಿಗಳ ಮೂರ್ತಿಯನ್ನು ಸಿಂಗರಿಸಿ ಪುಷ್ಪ ನಮನ ಸಲ್ಲಿಸಲಾಯಿತು. ಸ್ಥಳೀಯರು ಮಾತ್ರವಲ್ಲದೆ ಬಾಗಲಕೋಟೆ, ಬೀದರ, ಕಲಬುರ್ಗಿ, ಬಳ್ಳಾರಿ, ದಾವಣಗೆರೆ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳಿಂದಲೂ ಸಾವಿರಾರು ಭಕ್ತರು ಪುಣ್ಯಾಶ್ರಮಕ್ಕೆ ಆಗಮಿಸಿ ಗವಾಯಿಗಳ ಕರ್ತೃ ಗದ್ದುಗೆ ದರ್ಶನ ಪಡೆದು ಪುನೀತರಾದರು.
ಮೆರವಣಿಗೆ: ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾನಯೋಗಿ ಪುಟ್ಟರಾಜ ಗವಾಯಿಗಳ ಭಾವಚಿತ್ರದ ಮೆರವಣಿಗೆಗೆ ಕಲ್ಲಯ್ಯಜ್ಜನವರು ಚಾಲನೆ ನೀಡಿದರು. ರೋಟರಿ ಸರ್ಕಲ್, ಹಳೆ ಬಸ್ ನಿಲ್ದಾಣ, ಕೆ.ಎಚ್. ಪಾಟೀಲ ವೃತ್ತ, ಭೂಮರಡ್ಡಿ ಸರ್ಕಲ್ ಮಾರ್ಗವಾಗಿ ಮೆರವಣಿಗೆ ಸಾಗಿತು. ವಿವಿಧ ಭಜನಾ ಮಂಡಳಿಗಳು, ಹೆಜ್ಜೆಮೇಳಗಳು, ಕುಂಭ ಹೊತ್ತ ಮಹಿಳೆಯರು ಮೆರವಣಿಗೆಯ ಮೆರುಗು ಹೆಚ್ಚಿಸಿದ್ದರು.
ಅನ್ನಸಂತರ್ಪಣೆ: ಗದಗ ರೈಲ್ವೆ ನಿಲ್ದಾಣ, ಹಳೆ ಬಸ್ ನಿಲ್ದಾಣ, ಸ್ಟೇಷನ್ ರಸ್ತೆ, ಕಾಟನ್ ಮಾರ್ಕೆಟ್ ರಸ್ತೆ, ಕೆ.ಎಚ್. ಪಾಟೀಲ ಸರ್ಕಲ್ ಹತ್ತಿರ, ಭೀಷ್ಮ ಕೆರೆ ಹತ್ತಿರ, ವೀರೇಶ್ವರ ಪುಣ್ಯಾಶ್ರಮ, ಮುಳಗುಂದ ನಾಕಾ ಹತ್ತಿರ, ಪಂಚಾಕ್ಷರಿ ನಗರ, ಹಾತಲಗೇರಿ ನಾಕಾ, ಶಹಪೂರ ಪೇಟೆ, ವೆಂಕಟೇಶ ಟಾಕೀಜ್ ಹತ್ತಿರ ಗ್ರಾಮೀಣ ಪ್ರದೇಶಗಳಾದ ನರಸಾಪೂರ, ನಾಗಸಮುದ್ರ, ನಾರಾಯಣಪೂರ, ಕೋಟುಮಚಗಿಯಲ್ಲಿ ಅನ್ನಸಂತರ್ಪಣೆ ಜರುಗಿತು.