Advertisement

ಕೊರೆತ ತಡೆಗೆ ಗೇಬಿಯನ್‌ ಗೋಡೆ ಪ್ರಸ್ತಾವ

02:26 AM Jul 19, 2019 | Team Udayavani |

ಪಡುಬಿದ್ರಿ: ಪ್ರವಾಸೀ ಆದ್ಯತೆಯ ಬ್ಲೂ ಫ್ಲ್ಯಾಗ್ ಬೀಚ್ಗಾಗಿ ಶೇ. 64ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಸಮುದ್ರ ಕೊರೆತದಿಂದ ರಕ್ಷಿಸಿಕೊಳ್ಳಲು ಇದುವರೆಗೆ ಪ್ರಸ್ತಾವಿಸಿರದ ಗೇಬಿಯನ್‌ ಗೋಡೆಯ ರಚನೆ ಇನ್ನಷ್ಟೇ ಆಗಬೇಕಿದೆ.

Advertisement

ಪ್ರವಾಸೋದ್ಯಮ ಇಲಾಖೆಯ ಸುಪರ್ದಿಯಲ್ಲಿ ಕೇಂದ್ರ ಸರಕಾರದ ಸುಮಾರು 8 ಕೋಟಿ ರೂ. ವೆಚ್ಚದ ಬ್ಲೂ ಫ್ಲ್ಯಾಗ್ ಬೀಚ್ ಯೋಜನೆಗೆ ರಾಜ್ಯ ಸರಕಾರವು ಹಸಿರು ನಿಶಾನೆಯನ್ನು ಈಗಾಗಲೇ ತೋರಿದೆ. ಗುತ್ತಿಗೆದಾರ ಕಂಪೆನಿಯು ಈ ಬಾರಿಯ ಮಳೆಗಾಲದಲ್ಲಿ ಸತತವಾಗಿ ಸಂಭವಿಸುತ್ತಿರುವ ಸಮುದ್ರ ಕೊರೆತ, ರಸ್ತೆಗೆ ಆಗುತ್ತಿರುವ ಹಾನಿಯನ್ನು ಗಮನಿಸಿ ಗೇಬಿಯನ್‌ ಗೋಡೆಗೆ ಪ್ರಾಶಸ್ತ್ಯ ನೀಡಿದೆ. ಈ ಕುರಿತ ಪ್ರಸ್ತಾವನೆಗೆ ಸರಕಾರದ ಅನುಮೋದನೆ ಇನ್ನಷ್ಟೇ ಲಭ್ಯವಾಗಬೇಕಿದೆ.

ಕೇಂದ್ರ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಇಲಾಖೆಯ ಅನುಮೋದನೆಯೊಂದಿಗೆ ಸೀಕಾಮ್‌(ಸೊಸೈಟಿ ಫಾರ್‌ ಇಂಟಗ್ರೇಟೆಡ್‌ ಕೋಸ್ಟಲ್ ಮ್ಯಾನೇಜ್‌ಮೆಂಟ್) ಮೂಲಕ ಈ ಯೋಜನೆಯನ್ನು ಪಡುಬಿದ್ರಿ ಬೀಚ್‌ನ ಎಂಡ್‌ ಪಾಯಿಂಟ್‌ನಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಗುರ್ಗಾಂವ್‌ನ ಎ ಟುಝಡ್‌ ಕಂಪೆನಿಯು ಬ್ಲೂ ಫ್ಲ್ಯಾಗ್ಬೀಚ್‌ನ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಉಸ್ತುವಾರಿ ವಹಿಸಿಕೊಂಡಿದೆ.

ಮಳೆಗಾಲವಾಗಿರುವುದರಿಂದ ಕಾಮಗಾರಿಗಳು ನಿಧಾನ ವಾಗಿವೆ. ಮಣ್ಣು ತುಂಬಿಸುವಿಕೆ, ಬಿದಿರಿನ ಕಾಯಕಗಳು, ವಾಕಿಂಗ್‌ ಬೇ, ಮಕ್ಕಳ ಆಟದ ಅಂಗಣ ಕಾಮಗಾರಿಗಳು ಇನ್ನಷ್ಟೇ ಆಗಬೇಕಿವೆ.

ವಾಕಿಂಗ್‌ ಬೇ ಸಮುದ್ರಪಾಲು
ಸಮುದ್ರ ತೀರದಲ್ಲಿದ್ದ ಕಾಂಡ್ಲಾ ಸಸ್ಯಗಳನ್ನು ಕೀಳಲಾಗಿದ್ದು ಯೋಜನಾ ಪ್ರದೇಶಕ್ಕೆ ಸಮುದ್ರ ತೀರದ ಪೂರ್ಣ ನೋಟ ಲಭ್ಯವಾಗುವಂತೆ ಮಾಡಲಾಗಿತ್ತು. ‘ವಾಕಿಂಗ್‌ ಬೇ’ಗಾಗಿ ಪ್ರಾಥಮಿಕ ಹಂತದ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಇದು ಸಮುದ್ರ ಕೊರೆತಕ್ಕೆ ನಾಶವಾಗಿದೆ.

Advertisement

ಏನಿದು ಗೇಬಿಯನ್‌ ಗೋಡೆ?
ಗೇಬಿಯನ್‌ ಗೋಡೆ ಅಗತ್ಯ ಎಂಬುದನ್ನು ಜಿಲ್ಲಾಡಳಿತವೂ ಮನಗಂಡಿದೆ. ಹೆದ್ದಾರಿ ಇಕ್ಕೆಲಗಳ ಗುಡ್ಡಗಳು ಜರಿಯದಂತೆ ಕಬ್ಬಿಣದ ಜಾಲರಿ ಅಳವಡಿಸುವ ಮಾದರಿಯಲ್ಲೇ ಸಮುದ್ರದಲೆಗಳಿಂದ ಬೀಚನ್ನು ರಕ್ಷಿಸುವ ನಿಟ್ಟಿನಲ್ಲಿ ಕಬ್ಬಿಣದ ಜಾಲರಿಯೊಳಕ್ಕೆ ಕಲ್ಲುಬಂಡೆಗಳನ್ನು ಅಳವಡಿಸಿ ರಚಿಸಲಾಗುವ ಗೋಡೆಯನ್ನು ಗೇಬಿಯನ್‌ ಗೋಡೆ ಎನ್ನಲಾಗುತ್ತದೆ.

ಗೇಬಿಯನ್‌ ಗೋಡೆಗೆ 10 ಲಕ್ಷ ರೂ. ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿಕೊಡಲಾಗಿದೆ. ಅನುಮತಿ ಇನ್ನಷ್ಟೇ ಸಿಗಬೇಕಿದೆ. ಕೆಆರ್‌ಐಡಿಎಲ್ ಪ್ರವಾಸೋದ್ಯಮ ಇಲಾಖೆಯ 80 ಲಕ್ಷ ರೂ.ಗಳ ವಿವಿಧ ಕಾಮಗಾರಿಗಳನ್ನು ಈಗಾಗಲೇ ಬ್ಲೂ ಫ್ಲ್ಯಾಗ್ ಬೀಚ್ ಪ್ರದೇಶದಲ್ಲಿ ಕೈಗೆತ್ತಿಕೊಂಡಿದೆ.
– ಕೃಷ್ಣ ಹೆಬ್ಸೂರ್‌,ಕೆಆರ್‌ಐಡಿಎಲ್ ಕಾರ್ಯಕಾರಿ ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next