ಮೈಸೂರು: ನಗರ ವೇಗವಾಗಿ ಬೆಳೆಯುತ್ತಿರುವುದರಿಂದ ಸಂಚಾರ ದಟ್ಟಣೆ ಬಗೆಹರಿಸಲು ಮೆಟ್ರೋ ರೈಲಿನ ಅಗತ್ಯವಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸಂಜೆ ಇಲ್ಲಿಗೆ ಆಗಮಿಸಿದಾಗ ದೇವೇಗೌಡ ಅವರು ಈ ಕುರಿತು ಮನವಿ ಸಲ್ಲಿಸಿದರು.
ಮೈಸೂರು ನಗರಕ್ಕೆ ವಿಶೇಷ ಅನುದಾನವನ್ನು ಮಂಜೂರು ಮಾಡಬೇಕು. ಮೈಸೂರಿನ ಮೂಲಸೌಕರ್ಯ ಹೆಚ್ಚಿಸಿ ಸೌಲಭ್ಯ ಒದಗಿಸಬೇಕು. ಇದು ಮೈಸೂರಿನ ಅಭಿವೃದ್ಧಿಗೆ ಕಾರಣ ವಾಗುತ್ತದೆ. ಇದರಿಂದ ಬೆಂಗಳೂರು ನಗರದ ಮೇಲೆ ಒತ್ತಡ ಕಡಿಮೆಯಾಗುತ್ತದೆ ಎಂದು ದೇವೇಗೌಡ ಪ್ರಧಾನಿಗೆ ವಿವರಿಸಿದರು.
ಕೇರಳ ಮತ್ತು ತಮಿಳುನಾಡು ರಾಜ್ಯಗಳನ್ನು ಮೈಸೂರು ನಗರದೊಂದಿಗೆ ಸಂಪರ್ಕಿಸಬೇಕು. ಇದಕ್ಕಾಗಿ ರೈಲು ಕಾರಿಡಾರ್ ಅಭಿವೃದ್ಧಿಪಡಿಸಬೇಕು. ಕರ್ನಾಟಕ, ಕೇರಳ, ತಮಿಳುನಾಡಿನ ಸರಕು ಮತ್ತು ಉತ್ಪನ್ನಗಳ ತ್ವರಿತ ರವಾನೆಗೆ ಇದು ಸಹಾಯ ಮಾಡುತ್ತದೆ. ದೇಶದ ಆಹಾರ ಸಮಸ್ಯೆಯನ್ನು ನೀಗಿಸುವ ಶಕ್ತಿ ಕರ್ನಾಟಕ ರಾಜ್ಯಕ್ಕಿದೆ. ರಾಜ್ಯದ ಕೃಷಿ ಅಭಿವೃದ್ಧಿ ಕಾರ್ಯಗಳನ್ನು ಪ್ರೋತ್ಸಾಹಿಸಬೇಕು. ಕರ್ನಾಟಕದ ಎಲ್ಲಾ ನೀರಾವರಿ ಯೋಜನೆಗಳಿಗೆ ವಿಶೇಷ ಅನುದಾನ ನೀಡಬೇಕು ಎಂದು ದೇವೇಗೌಡ ಮನವಿ ಮಾಡಿದರು.
ನಿಮ್ಮ ಸಮರ್ಥ ಮತ್ತು ಪರೋಪಕಾರಿ ನಾಯಕತ್ವದಲ್ಲಿ ದೇಶವು ಮುನ್ನಡೆಯುತ್ತಿದೆ. ನಿಮ್ಮ ನಾಯಕತ್ವ ಚಿರಾಯುವಾಗಲಿ ಎಂದು ನರೇಂದ್ರ ಮೋದಿ ಅವರಿಗೆ ಜಿ.ಟಿ.ದೇವೇಗೌಡ ಈ ಮನವಿ ಪತ್ರದಲ್ಲಿ ಹೇಳಿದ್ದಾರೆ.