ಮಲ್ಪೆ: ಕೋವಿಡ್ ಆರಂಭದ ದಿನದಿಂದಲೂ ಉಡುಪಿ ಜಿಲ್ಲೆಯ ಜನತೆಗೆ ಡಾ| ಜಿ. ಶಂಕರ್ ಅವರು ಸಾಕಷ್ಟು ಕೊಡುಗೆಗಳನ್ನು ನೀಡುತ್ತಾ ಬಂದಿದ್ದು ಪ್ರಸ್ತುತ ಕೊರೊನಾ ರೋಗಿಗಳ ಚಿಕಿತ್ಸೆಗೆ ಅತೀ ಆವಶ್ಯಕವಾಗಿದ್ದ ವೆಂಟಿಲೇಟರ್‌ಗಳನ್ನು ಪೂರೈಸಿದ್ದಾರೆ. ಇದು ಕೋವಿಡ್ ಬಾಧಿತರ ಜೀವ ಉಳಿಸುವಲ್ಲಿ ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ಸೋಮವಾರ ಉಡುಪಿ ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಿಗೆ ಜಿ. ಶಂಕರ್ ಅವರು ಕೊಡುಗೆಯಾಗಿ ನೀಡುತ್ತಿರುವ ಉತ್ತಮ ದರ್ಜೆಯ ಹೆಮಿಲ್ಟನ್ ಕಂಪೆನಿಯ ವೆಂಟಿಲೇಟರ್‌ನ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೊರೊನಾ ನಿರ್ವಹಣೆಗಾಗಿ ಉಡುಪಿ, ದ.ಕ. ಮತ್ತು ಶಿವಮೊಗ್ಗ ಜಿಲ್ಲೆಗಳ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆಗೆ ಈಗಾಗಲೇ 3 ಕೋ.ರೂ.ಗೂ ಅಧಿಕ ವೆಚ್ಚದ ಕೊರೊನಾ ರಕ್ಷಣ ಪರಿಕರಗಳನ್ನು ಜಿ. ಶಂಕರ್ ನೀಡಿದ್ದರು ಎಂದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.
ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಕೊರೊನಾ ಸೋಂಕು ಹೆಚ್ಚುತ್ತಿದ್ದು ಚಿಕಿತ್ಸೆಗಾಗಿ ವೆಂಟಿಲೇಟರ್‌ಗಳ ಕೊರತೆಯನ್ನು ಮನಗಂಡು ಉಡುಪಿ ಮತ್ತು ಮಂಗಳೂರು ಕೋವಿಡ್ ಆಸ್ಪತ್ರೆಗಳಿಗೆ 56 ಲಕ್ಷ ರೂ. ವೆಚ್ಚದಲ್ಲಿ ವೆಂಟಿಲೇಟರ್‌ಗಳನ್ನು ನೀಡುವುದೆಂದು ನಿರ್ಧರಿಸಿದ್ದು, ಅದರಂತೆ ಇಂದು ಉಡುಪಿ ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ 4 ವೆಂಟಿಲೇಟರ್‌ಗಳನ್ನು ನೀಡಿದ್ದೇನೆ.
ಡಾ| ಜಿ. ಶಂಕರ್, ಪ್ರವರ್ತಕರು, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್