Advertisement

ಆಮೂರರ ಅಸೀಮ ವ್ಯಕ್ತಿತ್ವ

08:21 PM Apr 13, 2019 | mahesh |

ಕವಿಗಳ ಕಲ್ಪಕತೆ ಬಲು ವಿಲಕ್ಷಣವಾದದ್ದು ಮತ್ತು ಬೆರಗು ಹುಟ್ಟಿಸುವಂಥಾದ್ದು. ಘನವಾದ ವ್ಯಕ್ತಿತ್ವಗಳನ್ನು ಉನ್ನತವಾದ ಪರ್ವತ ಶೃಂಗಕ್ಕೋ, ಗಂಭೀರವಾದ ಸಮುದ್ರಕ್ಕೋ, ಅಂಚಿಲ್ಲದ ಆಕಾಶಕ್ಕೋ, ವಿಸ್ತಾರವಾದ ಹಸಿರುಬಯಲಿಗೋ ಕವಿಗಳು ಹೋಲಿಸುವುದನ್ನು ನಾವು ಅರ್ಥಮಾಡಿಕೊಳ್ಳ ಬಹುದು. ಒಬ್ಬ ವ್ಯಕ್ತಿಯನ್ನು ತೆರೆದಿಟ್ಟ ಮಹಾಗ್ರಂಥಕ್ಕೆ ಹೋಲಿಸಬಹುದೆ? ಹೋಲಿಸಬಹುದು! ಅತ್ಯಂತ ನವೀನವಾದ ಈ ಪ್ರತೀಕವನ್ನು ಕಲ್ಪಿಸಿದವನು ಕನ್ನಡದ ಆದಿಕವಿ ಪಂಪ. ಕುರುಕ್ಷೇತ್ರದಲ್ಲಿ ಭೀಷ್ಮ ಶರಮಂಚಕ್ಕೆ ಉರುಳಿದ ಪ್ರಸಂಗ. ಆಗ ಆ ವೃದ್ಧ ಹೇಗೆ ಕಾಣಿಸಿದ ಎಂಬುದನ್ನು ಪಂಪನಿಗೆ ವರ್ಣಿಸಬೇಕಾಗಿದೆ. ಮೈತುಂಬ ನೆಟ್ಟ ಶರಗಳಿಂದ ಆತನ ಒಡಲು ನೆಲಕ್ಕೆ ತಾಗದೆ ಇರಲು, ಬಾಣಗಳಿಂದ ಬಿರಿದ ವ್ರಣಗಳೇ ಅಕ್ಷರಗಳಂತೆ ಕಾಣಲು, ಈ ಪುಸ್ತಕವನ್ನು ಶ್ರದ್ಧೆಯಿಂದ ಓದಿ, ಕಲಿಯಿರಿ ಎನ್ನುವಂತಿರುವ, ಅಟ್ಟವಣೆಯ ಮೇಲೆ ಇಟ್ಟ ವೀರ ಸೈದ್ಧಾಂತಿಕ ಶಾಸನ ಬರೆದ ತೆರೆದಿಟ್ಟ ಪುಸ್ತಕದಂತಿದ್ದನಂತೆ ಭೀಷ್ಮ.

Advertisement

ಗುರುರಾಜ ಶ್ಯಾಮಾಚಾರ್ಯ ಆಮೂರರನ್ನು ನೋಡಿದಾಗ ಪಂಪನ ಈ ಮಹೋಪಮೆ (!) ನನಗೆ ನೆನಪಾಗುತ್ತದೆ. ಇವರೂ ಹಾಗೆಯೇ. ಸಾಹಿತ್ಯ, ತಣ್ತೀಚಿಂತನೆ, ಜೀವನ ದರ್ಶನಗಳಿಂದ ನನಗೆ ತೆರೆದಿಟ್ಟ ಮಹಾಸಂಪುಟದಂತೆಯೇ ಕಾಣಿಸುವರು. ಕನ್ನಡ, ಇಂಗ್ಲಿಷ್‌, ಸಂಸ್ಕೃತ, ಮರಾಠಿ ಭಾಷೆಗಳಲ್ಲಿ ಪ್ರವೇಶವಿರುವ ಆಮೂರರು ಸಾಹಿತ್ಯ ಮತ್ತು ಜೀವನ ಜಿಜ್ಞಾಸೆಗೆ ತಮ್ಮ ಬದುಕನ್ನೇ ಮುಡಿಪುಮಾಡಿದವರು. 94ರ ವಯೋವೃದ್ಧರು. ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಸಮಸಮವಾಗಿ ಬರೆದುಕೊಂಡು ಬಂದಿರುವ ಸವ್ಯಸಾಚಿ. ಅವರೊಂದಿಗೆ ಮಾತಾಡುವಾಗ ನಮ್ಮ ಅರಿವಿನ ಕ್ಷಿತಿಜಗಳು ಸಹಜವಾಗಿಯೇ ವಿಸ್ತಾರಗೊಳ್ಳುತ್ತವೆ. ನಾವು ಅವರನ್ನು ಭೆಟ್ಟಿ ಮಾಡಿದ ಹೊತ್ತಲ್ಲಿ ಅವರು ಯಾವ ಗ್ರಂಥದ ರಚನೆಯಲ್ಲಿ ತೊಡಗಿರುವರೋ ಆ ಗ್ರಂಥಕ್ಕೆ ಸಂಬಂಧಿಸಿದ ಅನೇಕ ಮಾಹಿತಿಗಳು, ಅದಕ್ಕಾಗಿ ಅವರು ಕಟ್ಟಿಕೊಂಡ ತಾತ್ವಿಕ ಭಿತ್ತಿ, ಅವರು ತಮ್ಮ ಅಧ್ಯಯನದಿಂದ ಕಂಡುಕೊಂಡ ನವೋನವ ವಿಚಾರಗಳು ಅವರು ಮಾತಾಡುವಾಗ ನಮ್ಮ ಕಣ್ಣೆದುರು ದೃಶ್ಯಾವಳಿಗಳಂತೆ ಬಿಚ್ಚಿಕೊಳ್ಳುತ್ತವೆ. ಅವರ ಹೇಳುವ ಉತ್ಸಾಹ ನಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ. ಆಮೂರರೊಂದಿಗೆ ಸಂವಾದವೆಂದರೆ ಪುಣ್ಯಾಂಬುಸ್ನಾನದಂತೆಯೇ. ಇಂಥ ಅನುಭವ ನನಗೆ ಇನ್ನಿಬ್ಬರು ಹಿರಿಯರನ್ನು ಕಂಡಾಗಲೂ ಆಗಿದೆ. ಪುತಿನರಸಿಂಹಾಚಾರ್‌ ಮತ್ತು ಕುರ್ತಕೋಟಿ- ಆ ಹಿರಿಯರು. ಪುತಿನ, ಕುರ್ತಕೋಟಿ, ಆಮೂರ- ಈ ಮೂರು ಹೆಸರುಗಳನ್ನು ಅದ್ಯಾಕೋ ಒಂದೇ ಉಸಿರಲ್ಲಿ ಉಚ್ಚರಿಸಬೇಕೆಂದು ನನಗೆ ಯಾವಾಗಲೂ ಅನ್ನಿಸುತ್ತದೆ.

ಆಮೂರರು ಒಳ್ಳೆಯ ಕವಿತೆಗಳನ್ನು ಬರೆದಿರುವರಾದರೂ ವಿಮರ್ಶಕರಾಗಿಯೇ ಅವರು ವಿಖ್ಯಾತರು. ಸಾಕಷ್ಟು ಸಮಯವಿಟ್ಟುಕೊಂಡೇ ನಾವು ಆಮೂರರನ್ನು ಕಾಣಲು ಹೋಗಬೇಕು. ಗಂಟೆಗಟ್ಟಲೆ ಅವರೊಂದಿಗೆ ಇದ್ದರೂ ಅವರು ನಮಗೆ ಹೇಳಲೇಬೇಕಾದ ಸಂಗತಿಗಳು ಮುಗಿದಿರುವುದಿಲ್ಲ. ಬಂದವರು ಬೇರೆ ಯಾವುದೋ ಕಾರ್ಯದ ಒತ್ತಡದಿಂದ ಮೇಲೆದ್ದಾಗ ಆಮೂರರು ತಾವೂ ಎದ್ದು ತಮ್ಮ ಮಾತು ಮುಂದುವರೆಸುವರು. ಮುಂಬಾಗಿಲು ದಾಟಿ ಗೇಟಿನ ಬಳಿ ಬಂದಾಗಲೂ ಅವರಿಗೆ ಹೇಳಲೇಬೇಕಾದ ಸಂಗತಿಗಳು ಇದ್ದೇ ಇವೆ. ಗೇಟಿನ ಹೊರಗೆ ನಾವು! ಗೇಟಿನ ಒಳಗೆ ಅವರು. ಮಾತಿಗೆ ಗೇಟು ತಡೆಯಾಗದು. ನಾವು ಮೈಮರೆತು ನಿಂತೇ ಇರುತ್ತೇವೆ; ಅವರು ಮೈಮರೆತು ಮಾತಾಡಿಯೇ ಆಡುತ್ತಾರೆ.

ಹಿಂದಿರುಗುವಾಗ ನಾವು ಮೂಕವಿಸ್ಮಿತರಾಗಿರುತ್ತೇವೆ. ಎಷ್ಟೆಲ್ಲ ಹೊಸ ವಿಚಾರಗಳನ್ನು ಸಹಜವಾಗಿಯೇ ಆಮೂರರು ಹೇಳಿಬಿಟ್ಟರಲ್ಲ ! ಪ್ರಾಚೀನ ಮತ್ತು ಆಧುನಿಕವಾದ ಅದೆಷ್ಟು ಗ್ರಂಥಗಳು ಅವರ ಮಾತಲ್ಲಿ ಪ್ರಸ್ತಾಪಿತವಾದವು! ನಾವು ಅವನ್ನೆಲ್ಲ ಓದುವುದು ಯಾವಾಗ? ಬಹಳ ಜನ ಲೇಖಕರನ್ನು ನೋಡಿ ಮಾತಾಡಿದಾಗ ಮನಸ್ಸು ಮುದುಡಿಕೊಳ್ಳುವುದು, ಕಹಿಗೊಳ್ಳುವುದು, ಆಯಾಸವಾಗುವುದು. ಪುತಿನ, ಕುರ್ತಕೋಟಿ, ಆಮೂರರ ಸಾನಿಧ್ಯ ನಮಗೆ ಮರೆಯಲಾಗದ ಗಟ್ಟಿ ಕ್ಷಣಗಳನ್ನು ಪ್ರದಾನಮಾಡುವುದು. ಪರದೂಷಣೆ, ಆತ್ಮರತಿ, ಸಾಹಿತ್ಯರಾಜಕೀಯಗಳು ಅಲ್ಲಿ ಕಾಣಲಾರವು. ಅದೊಂದು ಸಾಂದ್ರ ವಿಪಿನ ವಿಹಾರ. ಅರಿವಿನ ಅಂಚು ಹಿಗ್ಗುವ ವಿಸ್ತರಣಯೋಗ.

ನಿವೃತ್ತಿಯ ನಂತರ ಬೆಳಗೆರೆ ಕೃಷ್ಣಶಾಸ್ತ್ರಿಗಳಂತೆ ನೂರಕ್ಕೆ ನೂರು ಪ್ರವೃತ್ತರಾದವರು ಆಮೂರರು. ವಿಶ್ವದ ವಿಸ್ತಾರದಲ್ಲಿ ಕನ್ನಡದ ತೇಜೋಪುರುಷರನ್ನು ಇರಿಸಿ ಅವರು ತೋರಿಸುವರು. ನಮ್ಮ ಸಾಹಿತ್ಯ ಪ್ರಕಾರಗಳು ಹೇಗೆ ಬೆಳೆಯುತ್ತ ಬೆಳೆಯುತ್ತ ವಿಸ್ತಾರಗೊಂಡವೆಂಬ ಸಮ್ಯಕ್‌ ದರ್ಶನ ನಮಗಾಗುವುದು.

Advertisement

ಬೇಂದ್ರೆ, ಶ್ರೀರಂಗ, ಕುವೆಂಪು ಮೊದಲಾದ ಮಹಾನ್‌ ಸಾಧಕರನ್ನು ಸಮಗ್ರವಾಗಿ ಅಧ್ಯಯನ ಮತ್ತು ಪರಿಶೀಲನೆಗೆ ಒಳಪಡಿಸಿದ ಬೃಹತ್ತುಗಳು ಆಮೂರರು ಕನ್ನಡಕ್ಕೆ ಕೊಟ್ಟ ಮಹತ್ವದ ಕೃತಿಗಳು. ವ್ಯಾಸಭಾರತದಲ್ಲಿ ಬರುವ ವಾಗ್ವಾದಗಳ ಚರ್ಚೆ ಮತ್ತು ಅವುಗಳ ತಾತ್ವಿಕ ಗ್ರಹಿಕೆ ನಮಗೆ ತನ್ಮಯ ಓದಿನ ಲಿಪ್ತತೆಯನ್ನು ದೊರಕಿಸುವಂಥಾದ್ದು. ಅವರು ಭಗವದ್ಗೀತೆಯನ್ನು ಕುರಿತು ಬರೆದ ವೈಚಾರಿಕ ಕೃತಿಯನ್ನು ನಾನು ಓದದೇ ಹೋಗಿದ್ದರೆ ನನ್ನ ಗೀತೆಯ ಅನುವಾದ ಬರುತ್ತಲೇ ಇರಲಿಲ್ಲ. ಹೊಸದನ್ನು ಚಿಂತಿಸಲು ಹೊಸದನ್ನು ಬರೆಯಲು ಚೋದನೆ ಕೊಡುವ ಮೂಲಮಾತೃಕೆಯಂತೆ ಆಮೂರರು ನನಗೆ ಕಾಣುವರು.

ಕೇವಲ ಸಾಹಿತ್ಯಕ ನೆಲೆಯಲ್ಲೇ ಆಮೂರರು ಒಂದು ಕೃತಿಯ ಬೆಲೆ ಗಟ್ಟಲಾರರು. ಅವರು ಬೇಂದ್ರೆಯನ್ನು ಕುರಿತು ಬರೆಯುವಷ್ಟೇ ಘನವಾಗಿ ಅನಕೃ ಅವರನ್ನು ಕುರಿತೂ ಧ್ಯಾನಿಸಬಲ್ಲರು. ಒಬ್ಬ ತೀರಾ ಹೊಸ ಲೇಖಕನನ್ನೋ ಲೇಖಕಿಯನ್ನೋ ಕುರಿತು ಬರೆಯುವಾಗಲೂ ಆಮೂರರ ದೃಷ್ಟಿ ಯಾವತ್ತೂ ಲಘುವಾಗದು. ಯಾವುದೇ ಕೃತಿಯನ್ನು ಅವರು ಅಭ್ಯಾಸಕ್ಕೆ ಎತ್ತಿಕೊಂಡರೂ ಅದನ್ನು ಅವರು ಗಂಭೀರವಾಗಿಯೇ ಪರಿಶೀಲಿಸಿ ಒಂದು ಕೃತಿ ಹೀಗಾಗಲು ಏನು ಕಾರಣ ಎಂದು ಗಹನವಾದ ಜಿಜ್ಞಾಸೆ ನಡೆಸುವರು.

ಆಮೂರರ ವಿಮಶಾìಸ್ಪಂದನವನ್ನು ಎಲ್ಲ ಲೇಖಕರೂ ಹಪಹಪಿಸುವುದು ಸ್ವಾಭಾವಿಕ. ಆದರೆ, ಸ್ವತಃ ಅವರಿಗೆ ತಮ್ಮ ಕವಿತೆಗಳನ್ನು ಕುರಿತು ಒಬ್ಬ ಕವಿಯ ಅಭಿಪ್ರಾಯ ಮುಖ್ಯವೆನ್ನಿಸುತ್ತದೆ! ಒಮ್ಮೆ ಆಮೂರರು ನನಗೆ ಫೋನ್‌ ಹಚ್ಚಿ, “”ಮೂರ್ತಿಯವರೇ, ನನ್ನದೊಂದು ಕವಿತಾ ಸಂಗ್ರಹ ಬರುತ್ತಾ ಇದೆ. ಅದಕ್ಕೆ ಸ್ಪಂದಿಸಿ ನಾಕು ಮಾತು ಬರೆಯುವಿರಾ” ಎಂದು ಕೇಳಿ ನನ್ನನ್ನು ಸಂಭಾತಗೊಳಿಸಿದರು. ನಾನು ನನ್ನ ಸಂಗ್ರಹ ಕಳಿಸಿದಾಗ ಅದರಲ್ಲಿನ ಕೆಲವು ಕವನಗಳನ್ನು ತಾವಾಗಿಯೇ ಇಂಗ್ಲಿಷ್‌ ಭಾಷೆಗೆ ಅನುವಾದಿಸಿ ನನ್ನ ಮನಸ್ಸು ತುಂಬಿಬರುವಂತೆ ಮಾಡಿದರು. ಅನಾತ್ಮಕಥನ ಓದಿ ಪತ್ರದ ಮೂಲಕ ಪ್ರತಿಸ್ಪಂದಿಸುವಾಗ ಅದಕ್ಕೆ ಘನವಾದ ತಾತ್ವಿಕ ಅಸ್ತಿವಾರ ಕಲ್ಪಿಸಿ ಬರೆದರು. ತಾತ್ವಿಕವಾದ ಅಡಿಪಾಯ ಚಿಂತಿಸದೆ ಅವರು ಏನನ್ನೂ ಸುಖಾಸುಮ್ಮನೆ ರಚಿಸಲಾರರು.

“ನಮಗೆ ವಯಸ್ಸಾಯಿತು… ನಾವಿನ್ನು ಓದಲಾರೆವು, ಬರೆಯಲಾರೆವು’ ಎಂದು ನಮ್ಮಲ್ಲಿ ಅನೇಕರು ಅಲವತ್ತುಕೊಳ್ಳುವುದನ್ನು ನಾನು ಕೇಳಿರುವೆ. ನಿಶ್ಚಲವಾದ ಹಣತೆಯ ಕುಡಿಯಂತೆ, ದಾಸರು ಹೇಳುವ ಅಸ್ಖಲಿತ ತೈಲ ಧಾರೆಯಂತೆ ಈಗಲೂ ಆಮೂರರು ನಿತ್ಯವ್ಯವಸಾಯದಲ್ಲಿ ತೊಡಗಿರುವರು. ಸಣ್ಣಪುಟ್ಟ ಕೃತಿಗಳಲ್ಲ. ಸಾವಿರಾರು ಪುಟದ ಹೊಸ ಯೋಜನೆಗಳನ್ನು ಹೆಗಲಮೇಲೆ ಹಾಕಿಕೊಳ್ಳುವರು. “ಪಂಪ ಬರೆದುದ್ದನ್ನೇ ಈವತ್ತು ಯಾರೂ ಓದುತ್ತ ಇಲ್ಲ! ಇನ್ನು ನಾನು ಬರೆದು ಏನು ಪ್ರಯೋಜನ? ಅದನ್ನು ಓದುವ ಮಂದಿ ಎಲ್ಲಿದ್ದಾರೆ?’ ಎಂದು ಹಿರಿಯ ಲೇಖಕರೊಬ್ಬರು ನನಗೆ ಹೇಳಿದರು. ಬರೆಯುವುದು, ಬರೆಯುವುದಕ್ಕಾಗಿಯೇ ವಿನಾ ಕೇವಲ ಬೇರೆಯವರು ಓದುವುದಕ್ಕಾಗಿಯಲ್ಲ. ಓದು ಆನುಷಂಗಿಕ ಎಂದು ಆಮೂರರಂಥ ಹುತ್ತಗಟ್ಟಿದ ಚಿತ್ತ ಕಂಡಾಗ ನನಗೆ ಅನಿಸುವುದು.

ಆಮೂರರಿಂದ ನನ್ನ ಕವಿತಾಸಂಗ್ರಹಕ್ಕೆ ಮುನ್ನುಡಿ ಬರೆಸಿಕೊಳ್ಳಬೇಕೆಂ ಬುದು ನನ್ನ ಬಹುದಿನದ ಬಯಕೆಯಾಗಿತ್ತು. ಅಗ್ನಿಸ್ತಂಭಕ್ಕೆ ಮುನ್ನುಡಿ ಬರೆದುಕೊಡಲು ಅವರು ಒಪ್ಪಿದ್ದರು ಕೂಡ. ಆದರೆ, ಆ ಸಮಯದಲ್ಲೇ ಅವರ ಮನೆಯ ಸುಣ್ಣಬಣ್ಣದ ಕಾರ್ಯ ಪ್ರಾರಂಭವಾಗಿ, ಅವರ ಪುಸ್ತಕ ಸಂಗ್ರಹ ಅಸ್ತವ್ಯಸ್ತವಾಗಿಬಿಟ್ಟಿತು. ಆಮೂರರು ಏನನ್ನಾದರೂ ಬರೆಯಲು ಕೂತರೆಂದರೆ ಅವರಿಗೆ ಬೇಕಾದಾಗ ಬೇಕೆನಿಸುವ ಗ್ರಂಥ ಕೈಗೆ ಎಟಕುವಂತಿರಬೇಕು. ಅವರ ಏಕಾಗ್ರತೆ ಮತ್ತು ಚಿತ್ತ ಶಾಂತಿಗೆ ಪೂರಕವಾದಂಥ ವಾತಾವರಣವಿರಬೇಕು. ಕಾಟಾಚಾರಕ್ಕೆ ಏನೋ ಮಾಡಿ ಮುಗಿಸುವ ಸ್ವಭಾವವಲ್ಲ ಅವರದ್ದು. ಅವರಿಗೆ ಮುನ್ನುಡಿಯೂ ಕೃತಿರಚನೆಯಷ್ಟೇ ಗಹನ. ಆಮೂರರು ನನಗೆ ಕಾರಣ ವಿವರಿಸಿ, “ಅಗ್ನಿಸ್ತಂಭದ ಬಗ್ಗೆ ಬರೆಯಲು ಸಾಧ್ಯವಾಗುತ್ತಿಲ್ಲ. ಸ್ಸಾರಿ’ ಎಂದರು. ಕೆಲವು ವರ್ಷಗಳು ಕಳೆದವು. ಅಮೆರಿಕದಲ್ಲಿ ಬಿಲ್ಲು ಹಬ್ಬ ಎಂಬ ಇನ್ನೊಂದು ಸಂಗ್ರಹ ಪ್ರಕಟಣೆಗೆ ಸಿದ್ಧವಾದಾಗ ಮತ್ತೆ ನಾನು ಆಮೂರರ ಸಂಪರ್ಕ ಮಾಡಿದೆ. ಆಮೂರರು ಅಮೆರಿಕದಲ್ಲಿ ಬಿಲ್ಲು ಹಬ್ಬಕ್ಕೆ ಮುನ್ನುಡಿ ಬರೆದರು:

ಮಿತ್ರ ಎಚ್‌.ಎಸ್‌. ವೆಂಕಟೇಶಮೂರ್ತಿಯವರು ತಮ್ಮ ಅಗ್ನಿಸ್ತಂಭಕ್ಕೆ ನನ್ನ ಮುನ್ನುಡಿ ಬಯಸಿದ್ದರು. ಅವರ ಕಾವ್ಯವನ್ನು ಮೊದಲಿನಿಂದಲೂ ಮೆಚ್ಚಿಕೊಳ್ಳುತ್ತ ಬಂದ ನನಗೆ ಇದು ಸಂತೋಷದ ವಿಷಯವಾಗಿದ್ದರೂ ಹಲವಾರು ಕಾರಣಗಳಿಂದ ಬರೆಯಲಾಗಲಿಲ್ಲ. ಈಗ ದೊರೆತ ಹೊಸ ಅವಕಾಶವನ್ನು ಈ ಪ್ರಸ್ತಾವನೆಯ ಮೂಲಕ ಉಪಯೋಗಿಸಿಕೊಳ್ಳುತ್ತಿದ್ದೇನೆ. ತಮ್ಮ ತಲೆಮಾರಿನ ಕವಿಗಳಲ್ಲಿ ಪ್ರತಿಭಾವಂತರೆಂದು ಹೆಸರಾದ ಎಚ್‌ಎಸ್‌ವಿ ಅವರಿಗೆ ಈ ಲೇಖನದಿಂದ ಯಾವ ಪ್ರಯೋಜನವಿದೆಯೋ ತಿಳಿಯದು. ಆದರೆ, ಕನ್ನಡ ಕಾವ್ಯ ಪರಂಪರೆಯ ಬಗ್ಗೆ, ಅದು ಸಮಕಾಲೀನ ಕವಿಗಳನ್ನು ಪ್ರಭಾವಿಸಿದ ರೀತಿಯನ್ನು ಕುರಿತು ಚಿಂತಿಸಲು ಈ ಲೇಖನದ ಮೂಲಕ ತೊಡಗಿಕೊಳ್ಳುವುದು ನನಗಂತೂ ಲಾಭದಾಯಕವಾಗಿದೆ.

ವಾಸ್ತವವಾಗಿ ಲಾಭ ಅವರಿಗೂ ಅಲ್ಲ; ನನಗೂ ಅಲ್ಲ. ಆಮೂರರು ಏನಾದರೂ ಬರೆದರೆ ಅದು ಒಟ್ಟಾರೆ ಸಾಹಿತ್ಯ ಸಂದರ್ಭಕ್ಕೆ ಲಾಭಪ್ರದವಾಗುತ್ತದೆ ಎಂಬುದು ನನ್ನ ದೃಢ ವಿಶ್ವಾಸ.
ನಾನು ಮೊತ್ತಮೊದಲು ಆಮೂರರ ಭಾಷಣ ಕೇಳಿದ್ದು ರಾಮಚಂದ್ರ ಶರ್ಮರ ಕವಿತಾಸಂಗ್ರಹದ ಬಿಡುಗಡೆಯ ಸಂದರ್ಭದಲ್ಲಿ. ಸಪ್ತಪದಿ ಎಂಬ ಸಂಗ್ರಹ ಅಂತ ನೆನಪು. ಆವತ್ತು ವೇದಿಕೆಯ ಮೇಲೆ ಯು. ಆರ್‌. ಅನಂತಮೂರ್ತಿ, ಕಿ. ರಂ. ನಾಗರಾಜ ಆಮೂರರೊಂದಿಗಿದ್ದರು.

ಭಾಷಣ ಕೂಡ ವಿಮರ್ಶೆಯ ನೆಲೆಯನ್ನು ಬಿಟ್ಟುಕೊಡಬಾರದು ಎನ್ನುವಂತೆ ಆವತ್ತು ಆಮೂರರು ಆಡಿದ ಮಾತು ಈವತ್ತೂ ನನ್ನ ಮನಸ್ಸಲ್ಲಿ ನಾಟಿವೆ. ಬಾಯುಪಚಾರಕ್ಕಾಗಿ ಅವರು ಮಾತನ್ನು ಎಂದೂ ದುಂದು ಮಾಡುವವರಲ್ಲ. ಔಚಿತ್ಯ ಮತ್ತು ಗಾಂಭೀರ್ಯ, ಲೇಖಕನಿಗೆ ಅನ್ಯಾಯವಾಗಬಾರದು ಎಂಬ ಕಾಳಜಿ ಅವರ ಮಾತ‌ು-ಬರವಣಿಗೆಯ ಮುಖ್ಯ ಕಾಳಜಿ.

ಈಗ ಆಮೂರರು ಧಾರವಾಡದಿಂದ ಬೆಂಗಳೂರಿಗೆ ಬಂದಿರುವರು. ಓದು-ಬರಹಗಳೇ ಅವರ ಸವ್ಯಸಾಚಿತ್ವ. ಯಾವಾಗಲಾದರೂ ಫೋನು ಹಚ್ಚಿ “ಮನೆಗೆ ಬನ್ನಿ’ ಎಂದು ಪ್ರೀತಿಯಿಂದ ಆಹ್ವಾನಿಸುವರು. ಹೋದರೆ ಆತಿಥ್ಯದ ನಂತರ ಅನೇಕ ಅರಿವಿಗೆ ಅನ್ನವಾಗುವ ಮಾತನಾಡುವರು. ಅವರು ಸದಾ ಹೀಗೇ ಓದುತ್ತ ಬರೆಯುತ್ತ ನಮ್ಮಂಥವರನ್ನು ಚೋದಿಸುತ್ತಾ ನಮ್ಮೊಂದಿಗಿರಲಿ ಎಂದು ಆಶಿಸುವೆ. ಈಗವರು ಶಂಕರಾಚಾರ್ಯರ ದಕ್ಷಿಣಾಮೂರ್ತಿ ಸ್ತೋತ್ರದ ಬಗ್ಗೆ ಕೆಲಸ ಮಾಡುತ್ತಿರುವರು. ಅದ್ವೆ„ತದ ಪರಮ ಸೂಕ್ಷ್ಮಗಳನ್ನು ಸಮಗ್ರವಾಗಿ ಶಂಕರರು ಆ ಸ್ತೋತ್ರದಲ್ಲಿ ವಿವೇಚಿಸಿರುವರು ಎಂಬುದು ಆಮೂರರ ಅನಿಸಿಕೆ.

ಮೊನ್ನೆ ದೂರವಾಣಿಯಲ್ಲಿ ಮಾತಾಡುವಾಗ “ಆರೋಗ್ಯ ಮೊದಲಿನಂತೆ ಇಲ್ಲ. ದೇಹದ ಪ್ರತಿಯೊಂದು ವಿಭಾಗದ ಕಾರ್ಯಶೀಲತೆಯ ಬಗ್ಗೆಯೂ ಧ್ಯಾನಿಸುವಂತಾಗಿದೆ ‘ ಎಂದು ಆಮೂರರು ಹೇಳಿದಾಗ ತತ್‌ಕ್ಷಣ ನನಗೆ ಕುಮಾರವ್ಯಾಸನ ಭೀಮನ ಮಾತು ನೆನಪಾಯಿತು. “ದೇಹವಿದಪಜಯ ಧಾಮವಲಾ’ ಎನ್ನುತ್ತಾನೆ ಅವನು. ಒಮ್ಮೆ ಗೆಲುವಿನ ಸಾಧನಸಾಮಗ್ರಿಯಾಗಿದ್ದ ದೇಹ ವಯಸ್ಸಾಗುತ್ತ ದುರ್ಬಲಗೊಂಡು ನಿತ್ಯವ್ಯವಸಾಯ ಮತ್ತು ಏರುಪ್ರಯಾಣಕ್ಕೆ ತೊಡಕಾಗಿ ಪರಿಣಮಿಸುತ್ತದೆ. ಯಾಕೋ ಕೈಗೆತ್ತಿಕೊಂಡ ಕೃತಿಯನ್ನು ಮುಗಿಸುವೆನೋ ಇಲ್ಲವೋ ಎನ್ನಿಸುತ್ತಿದೆ ನನಗೆ- ಎಂದು ಆಮೂರರು ಹೇಳಿದಾಗ ನನ್ನ ಮನಸ್ಸು ಕಲಕುತ್ತದೆ. ಅವರ ಸಂಕಲ್ಪ ಬಲ ದೊಡ್ಡದು. ಕೈಗೊಂಡ ಕೃತಿಯನ್ನು ಕೊನೆಗಾಣಿಸದೆ ಅವರು ಬಿಡರು. ಅವರ ಕ್ರಿಯಾಶಕ್ತಿಯ ಬಗ್ಗೆ ಅಪಾರ ವಿಶ್ವಾಸ ಇರುವ ನಮ್ಮಂಥವರ ಬಯಕೆಯೂ ಅಷ್ಟೆ. ಅವರ ಕೃತಿ ಬೇಗ ಪೂರ್ಣಗೊಳ್ಳಲಿ. ಅದು ಕನ್ನಡಕ್ಕೆ ಮಹತ್ವದ ಮತ್ತೂಂದು ಕೊಡುಗೆಯಾಗಲಿ.

ನೀರಲ್ಲಿ ಮುಳುಗಿದವ ಚಡಪಡಿಸುವಂತುಸಿರಿಗೆ ನಿಮಗೆ ಸದಾ ಸಾಹಿತ್ಯದ ಚಡಪಡಿಕೆ. ಹೊಸದಾಗಿ ಕಂಡದ್ದ , ಕಾಣ ಬಂದವ ರಿಗೆ ಫ‌ಡ ಫ‌ಡ ತಿಳಿಸುವ ವರೆಗೆ ನಿಲ್ಲದ ನುಡಿ. ಹೇಗಿರುವಿರಿ ಯಾವಾಗ ಬಂದಿರಿ ಎಂಬುದಷ್ಟೆ ನೆಲದ ಗಡಿ. ಮೂರನೇ ವಾಕ್ಯದಿಂದಲೇ ಮೋಡಗಳ ನುಡಿಸಿ ಒಳಮಿಡುಕುವ ಬಾನಗಡಿ.
ಕಾರ್ಮುಗಿಲಿಂದ ಹೊರಕ್ಕೆ ನಾಗಮಿಂಚೆಳೆದು ಚಾಟಿ ಝಳಪಿಸುವ ಚಕಿತಾತ್ಮ ಚಮತ್ಕೃತಿ. ಏನು ತಿಂದೆವೊ ಏನು ಕುಡಿದೆವೋ… ಉಂಡ ಅಗುಳಿನ ಲೆಕ್ಖ ಇಡದ ತಾರಾಚಕಿತ ತೆವಲಿನ ಬಾಲನ ನೋಡಿ ಬಾಳ ಹಿಂಬಾಲಕ ಕಾಲ ಕಿಸಕ್ಕನೆ ನಕ್ಕ!

ಶಾಲೆ ಮಕ್ಕಳ ಕ್ಯೂನಲ್ಲಿ ಮೊಗದ ಹಿಂದಿನ ಅರೆಮೊಗದ ತವಕದಿಣುಕಿನ ಕತ್ತರಿಗಣ್ಣು. ಮುಗಿಯದ ಮಾತು. ಕೂತು- ನಿಂತು-ನಡೆಯುತ್ತ-ಹೊಸಿಲು ದಾಟುತ್ತ-ಗೇಟ ತೆರೆದು ಹಾಗೇ ಒರಗಿ ನಿಲ್ಲುತ್ತ-ಕಡೆದು ತೇಲಿದ ಬೆಣ್ಣೆಮುದ್ದೆ ಬಲ ಗೈಯಲ್ಲಾಡಿಸುತ್ತ-ಮಾತಿನೊಳಮಾತ ನವನೀತ ಧ್ಯಾನ. ಗದ್ಯದ ಮೂಲಕ ಹೇಳಬೇಕಾದದ್ದನ್ನು ಪೂರ್ತಿ ಹೇಳಲಿಕ್ಕಾಗಿಲ್ಲ ಎನಿಸಿದಾಗ ಹೀಗೆ ಗದ್ಯದಿಂದ ಪದ್ಯಕ್ಕೆ ಅನಿವಾರ್ಯವಾಗಿ ನಾನು ಹೊರಳಿಕೊಳ್ಳುತ್ತೇನೆ. ತಮ್ಮ ಅಸೀಮತೆಯ ಮೂಲಕವೇ ನನ್ನನ್ನು ನನ್ನ ಸ್ವಧರ್ಮಕ್ಕೆ ಚೋದಿಸಿದ ಆಮೂರರನ್ನು ನಾನಿಲ್ಲಿ ಕೃತಜ್ಞತೆಯಿಂದ ನೆನೆಯಲೇ ಬೇಕು.

ಎಚ್. ಎಸ್. ವೆಂಕಟೇಶಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next