Advertisement

ಕೆರಗೋಡು ಧ್ವಜಸ್ತಂಭ ತೆರವು ಆದೇಶ ವೈರಲ್‌ ಆದೇಶ ಮಾಡಿಲ್ಲ ಎಂದು ಜಿ.ಪಂ. ಸಿಇಒ ಸ್ಪಷ್ಟನೆ

12:30 AM Feb 03, 2024 | Team Udayavani |

ಮಂಡ್ಯ: ಹನುಮ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಜಿಪಂ ಉಪಕಾರ್ಯದರ್ಶಿ (ಆಡಳಿತ) ಧ್ವಜ ಸ್ತಂಭ ತೆರವುಗೊಳಿಸುವಂತೆ ಆದೇಶ ನೀಡಿದ್ದಾರೆಂಬ ಸುದ್ದಿ ಹರಿದಾಡುತ್ತಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಧ್ವಜಸ್ತಂಭ ತೆರವುಗೊಳಿಸುವ ಸಂಬಂಧ ಯಾವುದೇ ಆದೇಶ ಮಾಡಿಲ್ಲ ಎಂದು ಜಿ.ಪಂ. ಸಿಇಒ ಶೇಖ್‌ ತನ್ವೀರ್‌ ಆಸಿಫ್‌ ಸ್ಪಷ್ಟನೆ ನೀಡಿದ್ದಾರೆ.

Advertisement

ಜ. 25ರಂದೆ ಜಿ.ಪಂ. ಉಪಕಾರ್ಯದರ್ಶಿ ಧ್ವಜಸ್ತಂಭ ನಿರ್ಮಾಣಕ್ಕೆ ಗ್ರಾ.ಪಂ. ನೀಡಿರುವ ಅನುಮತಿ ರದ್ದುಪಡಿಸುವ ಬಗ್ಗೆ ಆದೇಶ ಹೊರಡಿಸಿದ್ದಾರೆ. ಆದರೆ, ಜ. 26ರಂದು ಗಣರಾಜ್ಯೋತ್ಸವ ದಿನ ಹನುಮ ಧ್ವಜ ಇಳಿಸಿ ರಾಷ್ಟ್ರಧ್ವಜ ಹಾರಿಸಲಾಗಿದೆ. ಅನಂತರ ಸಂಜೆ ರಾಷ್ಟ್ರಧ್ವಜ ಇಳಿಸಿ ಹನುಮ ಧ್ವಜ ಏರಿಸಿದ್ದಾರೆ. ಆಗ ಮಾಡಿರುವ ಆದೇಶ ಪ್ರತಿ ಈಗ ವೈರಲ್‌ ಆಗಿದ್ದು, ಗ್ರಾಮಸ್ಥರಲ್ಲಿ ಧ್ವಜಸ್ತಂಭವನ್ನೇ ತೆರವುಗೊಳಿಸುತ್ತಾರೆಂಬ ಸುದ್ದಿಯೂ ಕಾಳ್ಗಿಚ್ಚಿನಂತೆ ಹರಿದಾಡಿದೆ.

ಸ್ಪಷ್ಟನೆ ನೀಡಿದ ಜಿಪಂ ಸಿಇಒ
ವಿವಾದ ಮತ್ತೆ ಭುಗಿಲೇಳುವ ಸಾಧ್ಯತೆ ಅರಿತ ಜಿ.ಪಂ. ಸಿಇಒ ಶೇಖ್‌ ತನ್ವೀರ್‌ ಆಸಿಫ್‌ ಸ್ಪಷ್ಟನೆ ನೀಡಿದ್ದಾರೆ. ಕೆರಗೋಡು ಗ್ರಾಮದ ಧ್ವಜಸ್ತಂಭವನ್ನು ತೆರವುಗೊಳಿಸುವಂತೆ ಆದೇಶವಾಗಿರುವುದಾಗಿ ಜಾಲತಾಣ ದಲ್ಲಿ ಬಿತ್ತರಿಸಲಾಗುತ್ತಿದೆ. ಆದರೆ ಈ ಸಂಬಂಧ ಯಾವುದೇ ಆದೇಶ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದುವರಿದ ನಿಷೇಧಾಜ್ಞೆ
ಕೆರಗೋಡು ಗ್ರಾಮದಲ್ಲಿ ಧ್ವಜ ವಿವಾದ ತಣ್ಣಗಾದಂತೆ ಕಾಣುತ್ತಿಲ್ಲ. ಘಟನೆ ನಡೆದು 6ನೇ ದಿನವಾಗಿದ್ದರೂ ಪರಿಸ್ಥಿತಿ ಅಷ್ಟೇನೂ ತಿಳಿಗೊಳ್ಳದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಮುಂದುವರಿದಿದೆ.

ಪ್ರಭಾಕರ್‌ ಭಟ್‌, ಮುತಾಲಿಕ್‌, ಚಕ್ರವರ್ತಿ ಸೂಲಿಬೆಲೆ ಪ್ರವೇಶಕ್ಕೆ ನಿರ್ಬಂಧ; ಮನವಿ
ಮಂಡ್ಯ: ಕೆರಗೋಡು ಹನುಮ ಧ್ವಜ ವಿವಾದದ ಹಿನ್ನೆಲೆಯಲ್ಲಿ ಕೋಮು ಪ್ರಚೋದನೆಗೆ ಕೆಲವು ಸಂಘಟನೆಗಳು ಮುಂದಾಗುತ್ತಿದ್ದು, ಪ್ರಚೋದನಕಾರಿ ಭಾಷಣ ಮಾಡಿ ಜಿಲ್ಲೆಯ ನೆಮ್ಮದಿ ಹಾಳು ಮಾಡುವ ಕಲ್ಲಡ್ಕ ಪ್ರಭಾಕರ್‌ ಭಟ್‌, ಪ್ರಮೋದ್‌ ಮುತಾಲಿಕ್‌ ಹಾಗೂ ಚಕ್ರವರ್ತಿ ಸೂಲಿಬೆಲೆ ಜಿಲ್ಲೆಗೆ ಪ್ರವೇಶಿಸಿದಂತೆ ನಿರ್ಬಂಧಿಸಬೇಕು ಎಂದು ಪ್ರಗತಿಪರರು ಮನವಿ ಮಾಡಿದರು. ಸಮಾನ ಮನಸ್ಕರ ವೇದಿಕೆ ನೇತೃತ್ವದಲ್ಲಿ ಪ್ರಗತಿಪರ ನಿಯೋಗ ಜಿಲ್ಲಾ ಧಿಕಾರಿ ಕಚೇರಿ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ, ಜಿಲ್ಲಾ ಧಿಕಾರಿ ಡಾ| ಕುಮಾರ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿಗಳಿಗೆ ಮನವಿ ಸಲ್ಲಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next