Advertisement

ಗ್ರಾ.ಪಂ. ಚುನಾವಣೆಗೆ ಜಿಲ್ಲಾಡಳಿತದ ಪೂರ್ವ ತಯಾರಿ ಆರಂಭ

10:46 PM Mar 11, 2020 | mahesh |

ಉಡುಪಿ: ಜೂನ್‌ ತಿಂಗಳಲ್ಲಿ ಅವಧಿ ಮುಗಿಯಲಿರುವ ಗ್ರಾ.ಪಂ. ಆಡಳಿತ ಮಂಡಳಿಗಳಿಗೆ ಚುನಾವಣೆ ನಡೆಸಲು ಬೇಕಾದ ಮತದಾರರ ಯಾದಿಯನ್ನು ತಯಾರಿ ಸಲಾಗುತ್ತಿದೆ. ಗ್ರಾ.ಪಂ. ಕ್ಷೇತ್ರ ವ್ಯಾಪ್ತಿಯ ಮತದಾರರನ್ನು ಗುರುತಿಸುವ ಕೆಲಸ ಈಗಾಗಲೇ ಆರಂಭ ಗೊಂಡಿದ್ದು ಮಾ.14ರ ವರೆಗೆ ನಡೆಸಲಾಗುತ್ತದೆ. ಮನೆ ಮನೆಗೆ ಭೇಟಿ ನೀಡಿ ಕ್ಷೇತ್ರದ ಗಡಿ ಗುರುತಿಸುವಿಕೆ ಕೆಲಸ ಮಾ. 16ರಿಂದ 23ರ ವರೆಗೆ ನಡೆಯಲಿದೆ. ಕರಡು ಮತದಾರರ ಪಟ್ಟಿಯನ್ನು ಮಾ. 30ರಂದು ಪ್ರಕಟಿಸಲಾಗುತ್ತದೆ. ಆಯಾ ಗ್ರಾ.ಪಂ., ತಾ.ಪಂ., ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾ. 31ರಂದು ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಎ. 8ರ ವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು ಎ. 15ರ ಒಳಗೆ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲು ದಿನಾಂಕ ನಿಗದಿಪಡಿಸಲಾಗಿದೆ. ಎ. 20ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ.

Advertisement

ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮತ್ತು ಗ್ರಾಮ ಕರಣಿಕರಿಗೆ ಮತದಾರರನ್ನು ಗುರುತಿಸುವ ಕೆಲಸಗಳಿಗೆ ಈಗಾಗಲೇ ಸೂಚನೆಯನ್ನು ಜಿಲ್ಲಾಡಳಿತದಿಂದ ಕೊಡಲಾಗಿದೆ.

ಚುನಾವಣೆಗೆ 45 ದಿನಗಳು ಮುಂಚಿತವಾಗಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಬೇಕಾಗಿರುವುದರಿಂದ ಮೇ ತಿಂಗಳಲ್ಲಿ ಗ್ರಾ.ಪಂ. ಚುನಾವಣೆ ನಡೆಯಬಹುದು ಎಂದು ಊಹಿಸಲಾಗುತ್ತಿದೆ. ಗ್ರಾಮ ಸ್ವರಾಜ್‌ ಕಾಯಿದೆಗೆ ಸರಕಾರ ತಿದ್ದುಪಡಿ ತರುವುದಾದರೆ ಜೂನ್‌ ತಿಂಗಳಲ್ಲಿ ಅವಧಿ ಮುಗಿದಾಕ್ಷಣ ಆಡಳಿತಾಧಿಕಾರಿಗಳನ್ನು ನೇಮಿಸಿ ಮುಂದಿನ ಆರು ತಿಂಗಳಲ್ಲಿ ಚುನಾವಣೆ ನಡೆಸಬೇಕಾಗುತ್ತದೆ.

ಉಡುಪಿ ಜಿಲ್ಲೆಯಲ್ಲಿ 158 ಗ್ರಾ.ಪಂ.ಗಳಿದ್ದು ಇವುಗಳಲ್ಲಿ ಬೈಂದೂರಿನ ಮೂರು ಗ್ರಾ.ಪಂ.ಗಳನ್ನು (ಬೈಂದೂರು, ಯಡ್ತರೆ, ಪಡುವರಿ) ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸಿ ಅಧಿಸೂಚನೆ ಹೊರಡಿಸಿರುವುದರಿಂದ ಇವುಗಳನ್ನು ಹೊರತುಪಡಿಸಿ ಚುನಾವಣೆಗೆ ಸಿದ್ಧತೆ ನಡೆಸಲಾಗಿದೆ. ಹೆಬ್ರಿ ಮತ್ತು ಚಾರ ಗ್ರಾ.ಪಂ.ಗಳನ್ನು ಮೇಲ್ದಜೆಗೇರಿಸಿ ಪಟ್ಟಣ ಪಂಚಾಯತ್‌ ಆಗಿ, ಬ್ರಹ್ಮಾವರದ ಆಸುಪಾಸಿನ ಹಂದಾಡಿ, ವಾರಂಬಳ್ಳಿ, ಹಾರಾಡಿ, ಚಾಂತಾರು ಗ್ರಾ.ಪಂ.ಗಳನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವವಿದ್ದರೂ ಇದಿನ್ನೂ ಘೋಷಣೆಯಾಗಿಲ್ಲ. ಹೀಗಾಗಿ ಘೋಷಣೆಯಾಗುವ ಮುನ್ನ ಒಂದು ವೇಳೆ ಗ್ರಾಮ ಪಂಚಾಯತ್‌ ಚುನಾವಣೆ ನಿಗದಿಯಾದರೆ ಗ್ರಾಮಪಂಚಾಯತ್‌ ಚುನಾವಣೆ ಇಲ್ಲಿಯೂ ನಡೆಯಲಿದೆ. ಮೇಲ್ದರ್ಜೆಗೇರಿದ ಬಳಿಕ ಪರಿವರ್ತಿತ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲಾಗುತ್ತದೆ.

ಹೊಸ ಗ್ರಾಮ ಪಂಚಾಯತ್‌
ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿದ್ದ ನಾಡ ಗ್ರಾ.ಪಂ.ನಲ್ಲಿ ಸೇನಾಪುರ, ನಾಡ, ಹಡವು, ಬಡಾಕೆರೆ ಗ್ರಾಮಗಳಿವೆ. ತಾಲೂಕು ಬೇರ್ಪಡೆಯಾದ ಬಳಿಕ ಇದರಲ್ಲಿ ಸೇನಾಪುರ ಗ್ರಾಮವು ಕುಂದಾಪುರ ತಾಲೂಕಿನಲ್ಲಿದ್ದು ಉಳಿದ ನಾಡ, ಹಡವು, ಬಡಾಕೆರೆ ಗ್ರಾಮಗಳು ಬೈಂದೂರು ತಾಲೂಕಿಗೆ ಸೇರ್ಪಡೆಯಾಗಿದೆ. ಸೇನಾಪುರ ಗ್ರಾಮದಲ್ಲಿ 2,500 ಜನಸಂಖ್ಯೆ ಇರುವುದರಿಂದ ಹೊಸ ಗ್ರಾ.ಪಂ. ಆಗಿ ರೂಪಿಸಲು ಅವಕಾಶವಿದೆ. ಇದರ ಪ್ರಸ್ತಾವ ಜಿಲ್ಲಾಡಳಿತದಿಂದ ಸರಕಾರಕ್ಕೆ ಹೋಗಿದೆ. ಹೀಗಾಗಿ ಮುಂದೆ ಸೇನಾಪುರ ಗ್ರಾ.ಪಂ. ರಚನೆಯಾಗುವ ಸಾಧ್ಯತೆ ಇದೆ. ಕಮಲಶಿಲೆ ಗ್ರಾ.ಪಂ.ನಲ್ಲಿ ಹಳ್ಳಿಹೊಳೆ ಮತ್ತು ಕಮಲಶಿಲೆ ಗ್ರಾಮಗಳಿವೆ. ಈಗ ಕಮಲಶಿಲೆ ಕುಂದಾಪುರ ತಾಲೂಕಿಗೂ, ಹಳ್ಳಿಹೊಳೆ ಬೈಂದೂರು ತಾಲೂಕಿಗೂ ಹಂಚಿಕೆಯಾಗಿದೆ. ಕಮಲಶಿಲೆ ಗ್ರಾಮದಲ್ಲಿ 1,450 ಜನಸಂಖ್ಯೆ ಇರುವ ಕಾರಣ ಕಾಯಿದೆ ಪ್ರಕಾರ ಹೊಸ ಗ್ರಾ.ಪಂ. ರಚನೆಗೆ ಅವಕಾಶವಿಲ್ಲ. ಹೀಗಾಗಿ ಕಮಲಶಿಲೆ ಗ್ರಾಮವನ್ನು ಪಕ್ಕದ ಆಜ್ರಿ ಗ್ರಾ.ಪಂ.ಗೆ ಸೇರಿಸುವ ಪ್ರಸ್ತಾವವಿದೆ.

Advertisement

ಪ್ರಕ್ರಿಯೆ ಆರಂಭ
ಸರಕಾರದ ನಿರ್ದೇಶನದಂತೆ ಮತದಾರರ ಪಟ್ಟಿ ತಯಾರಿಯ ಪ್ರಕ್ರಿಯೆ ಆರಂಭಗೊಂಡಿದೆ. ಇದಕ್ಕಾಗಿ ಬಿಎಲ್‌ಒ ಮತ್ತು ಗ್ರಾಮಕರಣಿಕರಿಗೆ ಸೂಚನೆ ನೀಡಲಾಗಿದೆ.
-ಆನಂದಪ್ಪ ನಾಯ್ಕ, ಚುನಾವಣ ತಹಶೀಲ್ದಾರ್‌, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next