ಲುಕ್ಕಾ (ಇಟೆಲಿ): ನಾಗರಿಕರ ಮೇಲೆ ಇತ್ತೀಚೆಗೆ ವಿಷಾನಿಲ ಬಾಂಬ್ ದಾಳಿ ನಡೆಸಿದ ಸಿರಿಯಾದ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಸರಕಾರ ಅಥವಾ ಅದರ ಮೈತ್ರಿ ರಾಷ್ಟ್ರ ರಷ್ಯಾ ಮೇಲೆ ಹೊಸ ನಿರ್ಬಂಧಗಳನ್ನು ಹೇರಲು ಜಿ7 ರಾಷ್ಟ್ರಗಳ ಒಕ್ಕೂಟ ವಿಫಲವಾಗಿದೆ.
ನಿರ್ಬಂಧ ಹೇರುವ ಕುರಿತಂತೆ ಒಮ್ಮತಾ ಭಿಪ್ರಾಯಕ್ಕೆ ಬರಲು ರಾಷ್ಟ್ರಗಳು ವಿಫಲ ವಾಗಿವೆ ಎಂದು ಇಟೆಲಿಯ ವಿದೇಶಾಂಗ ಸಚಿವ ಆ್ಯಂಜೆಲಿನೊ ಅಲ್ಫಾನೋ ಹೇಳಿದ್ದಾರೆ.
ಇಟೆಲಿಯಲ್ಲಿ ಎರಡು ದಿನಗಳ ಜಿ7 ರಾಷ್ಟ್ರಗಳ ಸಭೆ ನಡೆದಿದ್ದು, ಬ್ರಿಟಿಷ್ ವಿದೇಶಾಂಗ ಸಚಿವರು ನಿರ್ಬಂಧ ಹೇರುವ ಬಗ್ಗೆ ವಿಷಯವನ್ನೆತ್ತಿದ್ದರು. ನಿರ್ಬಂಧ ವಿಚಾರದಲ್ಲಿ ವಿವಿಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದಾಗ್ಯೂ ಈ ಹಿಂದೆ ಹೇರಿರುವ ನಿರ್ಬಂಧಗಳನ್ನು ಮುಂದುವರಿ ಸುವುದನ್ನು ಅನುಮೋದಿಸಿವೆ.
ಸಿರಿಯಾ ಭವಿಷ್ಯದಲ್ಲಿ ಅಸ್ಸಾದ್‌ಗೆ ಸ್ಥಾನವಿಲ್ಲ: ಸಿರಿಯಾ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿರುವಂತೆಯೇ, ಸಿರಿಯಾದ ಭವಿಷ್ಯದಲ್ಲಿ ಅಧ್ಯಕ್ಷ ಅಸ್ಸಾದ್‌ಗೆ ಯಾವುದೇ ಸ್ಥಾನವಿಲ್ಲ ಎಂದು ಅಮೆರಿಕ ಕಠಿನ ಮಾತುಗಳನ್ನಾಡಿದೆ. ಜತೆಗೆ ಸಿರಿಯಾವನ್ನು ಹತೋಟಿಗೆ ತರುವಂತೆ ರಷ್ಯಾದ ಮೇಲೆ ಹೆಚ್ಚಿನ ಒತ್ತಡಗಳನ್ನು ಹೇರಿದೆ. ಜಿ7 ಸಭೆ ಬಳಿಕ ಮಾತನಾಡಿದ ಅಮೆರಿಕ ವಿದೇಶಾಂಗ ಸಚಿವ ರೆಕ್ಸ್ ಟಿಲ್ಲೆರನ್ ಸಿರಿಯಾದ ಮುಂದಿನ ದಿನಗಳಲ್ಲಿ ಅಸ್ಸಾದ್ ಭಾಗವಾಗಿರಲಾರರು. ಅಸ್ಸಾದ್ ಆಡಳಿತದ ಬರ್ಬರತೆಗೆ ನಮ್ಮ ಮಿಲಿಟರಿ ಕ್ರಮ ನೇರ ಉತ್ತರವಾಗಿದೆ ಎಂದೂ ಅವರು ಹೇಳಿದ್ದಾರೆ.