ಹೊಸದಿಲ್ಲಿ: ಭಾರತಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಜಿ20 ರಾಷ್ಟ್ರಗಳ ಶೃಂಗವು ಸಂಪನ್ನವಾಗಿದ್ದು, ಯಶಸ್ವಿಯಾಗಿ ನಡೆದ 2 ದಿನಗಳ ಸಮ್ಮೇಳನವು ವಿಶ್ವ ನಾಯಕರ ಶಹಬ್ಟಾಸ್‌ಗಿರಿಯೊಂದಿಗೆ ರವಿವಾರ ತೆರೆಕಂಡಿದೆ.
“ಸ್ವಸ್ತಿ ಅಸ್ತು ವಿಶ್ವ’ ಎಂಬ ವಿಶ್ವ ಶಾಂತಿಯ ಮಂತ್ರದ ಘೋಷಣೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಶೃಂಗವನ್ನು ಸಮಾರೋಪಗೊಳಿಸಿದ್ದು, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೋ ಅವರಿಗೆ “ಜಿ20 ಅಧ್ಯಕ್ಷತೆಯ ದಂಡ’ವನ್ನು ಹಸ್ತಾಂತರಿಸಿದ್ದಾರೆ.
ಮತ್ತೂಂದು ಮಹತ್ವದ ಬೆಳವಣಿಗೆಯೊಂದರಲ್ಲಿ, ಶೃಂಗದ ಕೊನೆಯ ದಿನವಾದ ರವಿವಾರ ತುರ್ಕಿಯೇ (ಟರ್ಕಿ) ಅಧ್ಯಕ್ಷ ರೆಸೆಪ್ ತಯ್ಯಿಪ್ ಎಡೋìಗನ್ ಅವರು, ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ನೀಡಬೇಕು ಎಂಬ ಪ್ರಸ್ತಾಪವನ್ನು ಬೆಂಬಲಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಭಾರತದ ಒತ್ತಾಸೆಗೆ ಧ್ವನಿಗೂಡಿಸಿದ ಬೆನ್ನಲ್ಲೇ ಎಡೋìಗನ್ ಅವರಿಂದಲೂ ಇಂತಹ ಹೇಳಿಕೆ ಹೊರಬಿದ್ದಿದೆ. “ಜಗತ್ತು ಕೇವಲ ಐವರಿಗೆ ಸೀಮಿತವಾಗಿಲ್ಲ. ಅದಕ್ಕಿಂತಲೂ ವಿಶಾಲ ವಾಗಿದೆ. ಭಾರತದಂಥ ದೇಶವು ಭದ್ರತಾ ಮಂಡಳಿಯ ಲ್ಲಿದ್ದರೆ ನಮಗೆಲ್ಲರಿಗೂ ಹೆಮ್ಮೆ. ಕೇವಲ ಅಮೆರಿಕ, ಯುಕೆ, ಫ್ರಾನ್ಸ್, ಚೀನ ಮತ್ತು ರಷ್ಯಾ ಹೊರತಾದ ದೇಶಗಳಿಗೂ ಕಾಯಂ ಸದಸ್ಯತ್ವ ಪ್ರಾಪ್ತಿಯಾಗಬೇಕು. ಇಲ್ಲೂ ಕಡ ಆವರ್ತನ ಪದ್ಧತಿಯಲ್ಲಿ ಸದಸ್ಯತ್ವ ಎಲ್ಲರಿಗೂ ಸಿಗಬೇಕು’ ಎಂದು ಟರ್ಕಿ ಪ್ರತಿಪಾದಿಸಿದೆ. ಖಟ್ಟರ್ ಇಸ್ಲಾಂ ಮೂಲಭೂತವಾದಿ ದೇಶ ಎಂಬ ಹಣೆಪಟ್ಟಿ ಗಳಿಸಿರುವ ಟರ್ಕಿಯು ಭಾರತದ ಪರ ನಿಲುವು ವ್ಯಕ್ತಪಡಿಸಿರುವುದು ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ.
ಸರಣಿ ದ್ವಿಪಕ್ಷೀಯ ಮಾತುಕತೆ: ಜಿ20 ನೇಪಥ್ಯದಲ್ಲಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡ್ನೂ, ಟರ್ಕಿ ಅಧ್ಯಕ್ಷ ಎಡೋìಗನ್, ಜರ್ಮನ್ ಪ್ರಧಾನಿ ಒಲಾಫ್ ಮತ್ತು ಆಫ್ರಿಕಾ ಒಕ್ಕೂಟದ ಮುಖ್ಯಸ್ಥ ಅಝಾಲಿ ಜತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ರಕ್ಷಣೆ, ವ್ಯಾಪಾರ, ಮೂಲಸೌಕರ್ಯ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಎಲ್ಲ ದೇಶಗಳೊಂದಿ ಗಿನ ಬಾಂಧವ್ಯ ವೃದ್ಧಿ ಕುರಿತು ಮಾತುಕತೆ ನಡೆದಿದೆ. ಇದೇ ವೇಳೆ, ದಕ್ಷಿಣ ಏಷ್ಯಾದಲ್ಲಿ ಭಾರತವು ನಮ್ಮ ಅತಿದೊಡ್ಡ ವ್ಯಾಪಾರಿ ಪಾಲುದಾರ ರಾಷ್ಟ್ರ ಎಂದು ಎಡೋìಗನ್ ಬಣ್ಣಿಸಿದ್ದಾರೆ. ಶನಿವಾರ ಯುಕೆ ಪ್ರಧಾನಿ ರಿಷಿ ಸುನಕ್, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜತೆ, ಶುಕ್ರವಾರ ಅಮೆರಿಕ ಅಧ್ಯಕ್ಷ ಬೈಡೆನ್, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ಮಾರಿಷಿಯಸ್ ಪ್ರಧಾನಿ ಪ್ರವಿಂದ್ ಅವರೊಂದಿಗೆ ಮೋದಿ ಮಾತುಕತೆ ನಡೆಸಿದ್ದರು.
ರವಿವಾರದ ದ್ವಿಪಕ್ಷೀಯ ಮಾತುಕತೆ ಬಳಿಕ ಪ್ರಧಾನಿ ಮೋದಿಯವರು ಸಂಜೆ ಭಾರತ್ ಮಂಟಪಂನಲ್ಲಿನ ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿದ್ದ ಪತ್ರಕರ್ತರತ್ತ ಕೈಬೀಸಿ ಅಭಿನಂದಿಸಿದ್ದಾರೆ.
ನಾಯಕತ್ವಕ್ಕೆ ಶ್ಲಾಘನೆ: ಶೃಂಗಸಭೆಗೆ ಆಗಮಿಸಿದ್ದ ವಿಶ್ವ ನಾಯಕರು, ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಣಾಯಕ ನಾಯಕತ್ವಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜಾಗತಿಕ ದಕ್ಷಿಣದ ಧ್ವನಿಯನ್ನು ವಿಶ್ವಕ್ಕೆ ಕೇಳಿಸುವಂತೆ ಮಾಡಿದ ಮೋದಿ ಅವರಿಗೆ ಮೆಚ್ಚುಗೆ ಸೂಚಿಸಿದ್ದಾರೆ. “”ವಸುಧೈವ ಕುಟುಂಬಕಂ’ ಥೀಮ್‌ನಡಿ ಭಾರತದ ಅಧ್ಯಕ್ಷತೆಯಲ್ಲಿ ಈ ವರ್ಷ ಜಿ20 ಶೃಂಗಸಭೆ ಯಶಸ್ವಿಯಾಗಿ ನಡೆದಿದೆ. ಭಾರತದ ನಾಯಕತ್ವದಲ್ಲಿ ನಾವೆಲ್ಲರೂ ಒಂದಾಗಬಹುದೆಂದು ಈ ಶೃಂಗವು ತೋರಿಸಿದೆ. ಭಾರತ್ ಮಂಟಪಂನಲ್ಲಿ ನೀವು ನಡೆದಾಡಿದರೆ, ಪ್ರಧಾನಿ ಮೋದಿ ಅವರ ಸಾಧನೆ, ಡಿಜಿಟಲ್ ಉಪಕ್ರಮಗಳು, ತಂತ್ರಜ್ಞಾನದಲ್ಲಿ ಭಾರತದ ಯಶಸ್ಸು, ದೇಶದ ಮೂಲೆ ಮೂಲೆಗಳಲ್ಲಿರುವ ಜನರಿಗೆ ತಂತ್ರಜ್ಞಾನದ ಮೂಲಕ ಸೇವೆ ಒದಗಿಸುವುದನ್ನು ಕಾಣಬಹುದಾಗಿದೆ’ ಎಂದು ರಿಷಿ ಸುನಕ್ ಶ್ಲಾ ಸಿದ್ದಾರೆ.
ಕೆನಡಾ ಜತೆ ಖಲಿಸ್ಥಾನಿ ಪ್ರಸ್ತಾವ
ಕೆನಡಾ ಪ್ರಧಾನಿ ಜಸ್ಟಿನ್ ತ್ರುದ್ರೂ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆ ವೇಳೆ ಪ್ರಧಾನಿ ಮೋದಿಯವರು, ಕೆನಡಾದಲ್ಲಿ ಹೆಚ್ಚುತ್ತಿರುವ ಭಾರತ ವಿರೋಧಿ ಚಟುವಟಿಕೆಗಳು ಹಾಗೂ ಖಲಿಸ್ಥಾನಿ ಉಗ್ರರ ಹಾವಳಿ ಬಗ್ಗೆ ಪ್ರಸ್ತಾಪಿಸಿ ಕಳವಳ ವ್ಯಕ್ತಪಡಿಸಿದ್ದಾರೆ. ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಪರಸ್ಪರ ನಂಬಿಕೆ ಮತ್ತು ವಿಶ್ವಾಸ ಅತ್ಯಗತ್ಯ ಎಂಬ ಸಂದೇಶವನ್ನೂ ಸಾರಿದ್ದಾರೆ. ಈ ಬಗ್ಗೆ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಕೆನಡಾ ಪ್ರಧಾನಿ ಯವರನ್ನು ಪ್ರಶ್ನಿಸಿದಾಗ ಅವರು, “ಕೆನಡಾ ಯಾವತ್ತೂ ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತ ಪ್ರತಿಭಟನೆಯ ಸ್ವಾತಂತ್ರ್ಯವನ್ನು ಎತ್ತಿಹಿಡಿಯು ತ್ತದೆ. ಅದೇ ರೀತಿ, ನಾವು ಹಿಂಸೆ ಮತ್ತು ದ್ವೇಷವನ್ನು ಸಹಿಸುವುದಿಲ್ಲ. ಕೆಲವರು ಮಾಡುವ ಕೃತ್ಯಗಳಿಗೆ ನಾವು ಇಡೀ ಸಮುದಾಯವನ್ನು ಗುರಿ ಮಾಡುವುದು ಸರಿಯಲ್ಲ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು’ ಎಂದಿದ್ದಾರೆ. ಇದೇ ವೇಳೆ, ಖಲಿಸ್ಥಾನಿ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನೂ ಅವರು ನೀಡಿದ್ದಾರೆ.
ಅಪೂರ್ವ ಗಳಿಗೆ, ಬರಿಗಾಲ ನಡಿಗೆ…
ಈ ಬಾರಿಯ ಜಿ20 ಶೃಂಗ ಅಭೂತಪೂರ್ವ ಯಶಸ್ಸು ಕಂಡಿದೆ. ಇಲ್ಲಿ ಹಲವು ಅಪೂರ್ವ ನೋಟಗಳು ಕಾಣಸಿಕ್ಕಿವೆ. ಭಾರತದ ಮಟ್ಟಿಗಂತೂ ಇದೊಂದು ಮಹತ್ವದ ಯಶಸ್ಸೆಂದು ಹೇಳಬಹುದು. ಶೃಂಗದ ಗಮನಾರ್ಹ ಸಂಗತಿಗಳು ಇಲ್ಲಿವೆ.
ಸರ್ವಸಮ್ಮತಿಯ ನಿರ್ಣಯ
ಯಾರೂ ನಿರೀಕ್ಷೆ ಮಾಡಿರದ ರೀತಿಯಲ್ಲಿ ದೆಹಲಿ ಜಿ20 ಶೃಂಗದಲ್ಲಿ ಸರ್ವಸಮ್ಮತಿಯ ನಿರ್ಣಯಗಳಾಗಿವೆ. ಇದು ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಸಿಕ್ಕ ಜಯವೆಂದೇ ಹೇಳಲಾಗಿದೆ. ಚೀನ, ರಷ್ಯಾ ಹಲವು ಸಂಗತಿಗಳಿಗೆ ವಿರುದ್ಧವಾಗಿದ್ದರೂ ಸರ್ವಸಮ್ಮತಿಯ ನಿರ್ಣಯಗಳಿಗೆ ಸಹಿಹಾಕಿವೆ.
ಕೌಟುಂಬಿಕ ಚಿತ್ರವಲ್ಲ
ಜಿ20ಯಲ್ಲಿ ಎಲ್ಲರೂ ಒಟ್ಟಾಗಿದ್ದಾಗ ಚಿತ್ರವನ್ನು ತೆಗೆಯಲಾಗುತ್ತದೆ. ಇದನ್ನು ಕೌಟುಂಬಿಕ ಚಿತ್ರವೆಂದೇ ಹೇಳಲಾಗುತ್ತದೆ. ಆದರೆ ಈ ಬಾರಿ ಹಾಗಾಗಲಿಲ್ಲ, ರಷ್ಯಾ ಅಧ್ಯಕ್ಷ ಪುಟಿನ್ ಬದಲು ಅಲ್ಲಿನ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಬಂದಿದ್ದರು. ಅವರನ್ನು ಒಪ್ಪಿಕೊಳ್ಳಲು ಇತರರು ಸಿದ್ಧರಿರಲಿಲ್ಲ. ಹಾಗಾಗಿ ಈ ಚಿತ್ರ ಕೌಟುಂಬಿಕವಲ್ಲ ಎಂದು ವಿಶ್ಲೇಷಿಸಲಾಗಿದೆ.
ಭಾರತದ ವಿಕಾಸದ ಸಂಕೇತ
ದೆಹಲಿ ರಾಜಘಾಟ್‌ನಲ್ಲಿರುವ ಗಾಂಧಿ ಪ್ರತಿಮೆಗೆ ರವಿವಾರ ಬೆಳಗ್ಗೆ ಎಲ್ಲ ನಾಯಕರನ್ನು ಮೋದಿ ಕರೆದೊಯ್ದರು. ಅಲ್ಲಿ ಆತ್ಮೀಯ ಮಾತುಕತೆ, ಪರಸ್ಪರ ಶ್ಲಾಘನೆ, ನಗು ಕಾಣಿಸುತ್ತಿತ್ತು. ಜಿ20 ನಾಯಕರು ಗಾಂಧಿ ಪ್ರತಿಮೆಗೆ ನಮಿಸಿದ ಘಳಿಗೆ ಭಾರತದ ಏರುಮುಖದ ವಿಕಾಸವನ್ನು ಸ್ಪಷ್ಟವಾಗಿ ಸಂಕೇತಿಸಿದೆ.
ಬರಿಗಾಲ ನಡಿಗೆ
ಗಾಂಧಿ ಪ್ರತಿಮೆಗೆ ನಮನ ಸಲ್ಲಿಸಲು ಹೋಗುವಾಗ ಜರ್ಮನಿ ಪ್ರಧಾನಿ ಒಲಾಫ್ ಶೋಲ್ಜ್, ಕೆನಡಾ ಪ್ರಧಾನಿ ಜಸ್ಟಿನ್ ತ್ರುದೌ ಬರಿಗಾಲಲ್ಲೇ ನಡೆದರು. ಇನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲು ಡಿ ಸಿಲ್ವಾ ಚಪ್ಪಲಿ ಅಥವಾ ಸಾದಾ ಶೂಗಳನ್ನು ಧರಿಸಿದ್ದರು.
ಒಂಟಿಯಾದ ಲಾವ್ರೋವ್
ಅಮೆರಿಕದೊಂದಿಗೆ ರಷ್ಯಾ ವಿರೋಧ ಹೊಂದಿದೆ, ಚೀನ ಅಧ್ಯಕ್ಷ ಜಿನ್‌ಪಿಂಗ್ ಕೂಡ ಅಮೆರಿಕದ ಕಾರಣಕ್ಕೆ ಭಾರತಕ್ಕೆ ಬಂದಿಲ್ಲ ಎನ್ನಲಾಗಿದೆ. ಮೋದಿ ಜೊತೆಗೆ ಬೈಡೆನ್ ಹೆಜ್ಜೆ ಹಾಕಿದರೆ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಇಬ್ಬರನ್ನೂ ಕೂಡಿಕೊಂಡರು. ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ, ದ.ಕೊರಿಯದ ಯೂನ್ ಸುಕ್ ಯಿಯೋಲ್‌ರನ್ನು ಕೂಡಿಕೊಂಡರು. ಏಕಾಂಗಿಯಾಗಿ ಕಾಣುತ್ತಿದ್ದ ರಷ್ಯಾ ವಿದೇಶಾಂಗ ಸಚಿವ ಲಾವ್ರೋವ್, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಗುಟೆರಸ್ ಜೊತೆ ನಿಂತಿದ್ದರು.
ಅಧ್ಯಕ್ಷತೆ ಹಸ್ತಾಂತರ ಹೇಗೆ?
ಈ ವರ್ಷದ ಡಿ.1ರಂದು ಬ್ರೆಜಿಲ್ ಅಧಿಕೃತವಾಗಿ ಜಿ20 ಅಧ್ಯಕ್ಷತೆ ವಹಿಸಿಕೊಳ್ಳುತ್ತದೆ. ನವೆಂಬರ್ 30ರ ರಾತ್ರಿ ಅಧ್ಯಕ್ಷತೆಯನ್ನು ಭಾರತವು ಬ್ರೆಜಿಲ್‌ಗೆ ಹಸ್ತಾಂತರಿಸುತ್ತದೆ. ಆಗ ಎಲ್ಲ ಡೊಮೈನ್‌ಗಳು ಮತ್ತು ಜಿ20 ವೆಬ್‌ಸೈಟ್‌ಗಳ ಪಾಸ್‌ವರ್ಡ್ ಗಳನ್ನು ಬ್ರೆಜಿಲ್‌ಗೆ ನೀಡಲಾಗುತ್ತದೆ ಇದಾದ ಬಳಿಕ, ಜಿ20ಯ ಎಲ್ಲ ವೆಬ್‌ಸೈಟ್‌ಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು, ಎಲ್ಲ ಡೊಮೈನ್‌ಗಳ ನಿಯಂತ್ರಣದ ಹೊಣೆಯನ್ನು ಬ್ರೆಜಿಲ್ ಹೊರಬೇಕಾಗುತ್ತದೆ.
ಪರಿಹಾರ ಸಾಧ್ಯ ಎಂಬುದು ಸಾಬೀತಾಯ್ತು: ಬೈಡೆನ್
“ಭಾರತದ ಅಧ್ಯಕ್ಷತೆಯಲ್ಲಿ ಈ ವರ್ಷ ನಡೆದ ಜಿ20 ಶೃಂಗಸಭೆಯು ಹವಾಮಾನ ಬಿಕ್ಕಟ್ಟು, ಸಂಘರ್ಷ ಸೇರಿದಂತೆ ಮಹತ್ವದ ವಿಷಯಗಳಿಗೆ ಈಗಲೂ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂಬುದನ್ನು ನಿರೂಪಿಸಿದೆ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅಭಿಪ್ರಾಯಪಟ್ಟಿದ್ದಾರೆ. “ಹವಾಮಾನ ಬಿಕ್ಕಟ್ಟು, ಸಂಘರ್ಷ ಸೇರಿದಂತೆ ಹಲವು ಆಘಾತಗಳಿಂದ ಜಾಗತಿಕ ಆರ್ಥಿಕತೆಯು ಬಳಲುತ್ತಿರುವ ಈ ಸಂದರ್ಭದಲ್ಲಿ ಈ ವರ್ಷದ ಜಿ20 ಶೃಂಗವು ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಾಧ್ಯ ಎಂಬುದನ್ನು ಸಾಬೀತುಪಡಿಸಿದೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಆರ್‌ಆರ್‌ಆರ್”ಗೆ ಬ್ರೆಜಿಲ್ ಅಧ್ಯಕ್ಷರ ಮೆಚ್ಚುಗೆ
ಜಿ20 ಶೃಂಗಸಭೆಗೆ ಆಗಮಿಸಿದ್ದ ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡ ಸಿಲ್ವ ಅವರು “ಆರ್‌ಆರ್‌ಆರ್’ ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಭಾರತದ ಬಗ್ಗೆ ಯಾರೇ ನನ್ನ ಜತೆ ಮಾತನಾಡಿದರೂ ಆರ್‌ಆರ್‌ಆರ್ ಸಿನಿಮಾ ಕುರಿತು ಪ್ರಸ್ತಾಪಿಸುತ್ತಾರೆ. ದೃಶ್ಯಗಳು, ನೃತ್ಯ ಸೇರಿದಂತೆ ಒಟ್ಟಾರೆ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ನನ್ನನ್ನು ಮೋಡಿ ಮಾಡಿರುವ ಈ ಚಿತ್ರದ ನಿರ್ದೇಶಕರು ಮತ್ತು ಕಲಾವಿದರಿಗೆ ಅಭಿನಂದನೆಗಳು’ ಎಂದು ಇನಾಸಿಯೊ ಹೇಳಿದ್ಧಾರೆ. ಇದಕ್ಕೆ ಪ್ರತಿಕ್ರಿಯಿಸಿರುವ “ಆರ್‌ಆರ್‌ಆರ್’ ನಿರ್ದೇಶಕ ಎಸ್.ಎಸ್.ರಾಜಮೌಳಿ, “ಸಿನಿಮಾ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಕ್ಕೆ ನಿಮಗೆ ಧನ್ಯವಾದಗಳು’ ಎಂದು ಟ್ವೀಟ್(ಎಕ್ಸ್) ಮಾಡಿದ್ಧಾರೆ. ರಾಮ್‌ಚರಣ್ ತೇಜ ಮತ್ತು ಜೂನಿಯರ್ ಎನ್‌ಟಿಆರ್ ನಟಿಸಿರುವ “ಆರ್‌ಆರ್‌ಆರ್’ ಸಿನಿಮಾ ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದಿದ್ದು, ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಋಗ್ವೇದದ ಹಸ್ತಪ್ರತಿ, ಪಾಣಿನಿಯ ವ್ಯಾಕರಣ ಗ್ರಂಥ
ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ಹೊಸದಿಲ್ಲಿಯ ಭಾರತ ಮಂಟಪಂನಲ್ಲಿ ಆಯೋಜಿಸಿದ್ದ “ಕಲ್ಚರ್ ಕಾರಿಡಾರ್-ಜಿ20 ಡಿಜಿಟಲ್ ಮ್ಯೂಸಿಯಂ’ನಲ್ಲಿ ಭಾರತದ ಋಗ್ ವೇದದ ಹಸ್ತಪ್ರತಿ, ಪಾಣಿನಿಯ ವ್ಯಾಕರಣ ಗ್ರಂಥ “ಅಷ್ಟಾಧ್ಯಾಯಿ’, ಪ್ಯಾರಿಸ್‌ನ ಮೋನಾ ಲೀಸಾ ಚಿತ್ರ ಸೇರಿದಂತೆ ಅನೇಕ ಅಮೂಲ್ಯ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯವು ಈ ಪ್ರದರ್ಶನವನ್ನು ಆಯೋಜಿಸಿತ್ತು. ಭೌತಿಕ ಮತ್ತು ಡಿಜಿಟಲ್ ರೂಪದ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಾಗಿತ್ತು. ಜಿ20 ನಾಯಕರು ಮತ್ತು ಪ್ರತಿನಿಧಿಗಳು ಮ್ಯೂಸಿಯಂಗೆ ಭೇಟಿ ನೀಡಿ ಅಪರೂಪದ ಕಲಾಕೃತಿಗಳನ್ನು ವೀಕ್ಷಿಸಿದರು. 16ನೇ ಶತಮಾನದಲ್ಲಿ ಖ್ಯಾತ ಕಲಾವಿದ ಲಿಯಾನಾರ್ಡೊ ಡಾ ವಿನ್ಸಿ ರಚಿಸಿದ ಅಪೂರ್ವ ಚಿತ್ರ “ಮೋನಾ ಲೀಸಾ’ದ ಡಿಜಿಟಲ್ ಅವತರಣಿಕೆ, ಬ್ರಿಟನ್‌ನ ಮ್ಯಾಗ್ನಾ ಕಾರ್ಟಾದ ಅಪರೂಪದ ಹಸ್ತಪ್ರತಿ, ಅಮೆರಿಕದ ಚಾರ್ಟರ್ ಆಫ್ ಫ್ರೀಡಂ, ಚೀನದ “ಫಹುವಾ-ಲಿದ್ ಜಾರ್’ನ ಹಸ್ತಪ್ರತಿಗಳು ಸೇರಿದಂತೆ ಅಮೂಲ್ಯ ವಸ್ತುಗಳನ್ನು ಪ್ರದರ್ಶಿಸಲಾಗಿತ್ತು. ಇವೆಲ್ಲವೂ ಜಾಗತಿಕ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿದವು.
ಖಾದಿಗೂ ಉತ್ತೇಜನ
ರವಿವಾರ ಬೆಳಗ್ಗೆ ರಾಜ್‌ಘಾಟ್‌ಗೆ ವಿಶ್ವ ನಾಯಕರು ಆಗಮಿಸಿದಾಗ ಪ್ರಧಾನಿ ಮೋದಿಯವರು ಪ್ರತಿಯೊಬ್ಬರಿಗೂ ಖಾದಿಯಿಂದ ತಯಾರಿಸಿದ ಶಾಲನ್ನು ನೀಡುವ ಮೂಲಕ ತಮ್ಮ “ವೋಕಲ್ ಫಾರ್ ಲೋಕಲ್’ ಪರಿಕಲ್ಪನೆಗೆ ಒತ್ತು ನೀಡಿದರು. ಮೋದಿಯವರ ಈ ನಡೆಯ ಬಗ್ಗೆ ಪ್ರತಿಕ್ರಿಯಿಸಿದ ಖಾದಿ ಗ್ರಾಮೋದ್ಯೋಗ ಆಯೋಗದ ಮುಖ್ಯಸ್ಥ ಮನೋಜ್ ಕುಮಾರ್, “ಖಾದಿ ಎನ್ನುವುದು ಆತ್ಮನಿರ್ಭರ ಭಾರತದ ಸಂಕೇತ. ಇದು ನಮ್ಮ ಸಂಸ್ಕೃತಿಯ ಭಾಗವೂ ಹೌದು. ವಿದೇಶಿ ಅತಿಥಿಗಳಿಗೆ ಖಾದಿಯನ್ನು ಉಡುಗೊರೆಯಾಗಿ ನೀಡಿದ್ದು ನಮ್ಮ ದೇಶಕ್ಕೆ ಹೆಮ್ಮೆಯ ಸಂಗತಿ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಚೀನಗೆ ಗುಡ್‌ಬೈ
ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್ (ಬಿಆರ್‌ಐ) ನಿಂದ ನಿರ್ಗಮಿಸುವ ಬಗ್ಗೆ ಚೀನ ಪ್ರಧಾನಿ ಲಿ ಕಿಯಾಂಗ್ ಅವರಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ. ಹೊಸದಿಲ್ಲಿಯಲ್ಲಿ ನಡೆದ ಜಿ20 ರಾಷ್ಟ್ರಗಳ ಸಮ್ಮೇಳನ ಸಂದರ್ಭದಲ್ಲಿ ಚೀನ ಪ್ರಧಾನಿಗೆ ಖಾಸಗಿಯಾಗಿ ಇಟಲಿ ಪ್ರಧಾನಿ ಈ ಮಾತುಗಳನ್ನು ತಿಳಿಯಪಡಿಸಿದ್ದಾರೆ. ಆದರೆ, ಬೀಜಿಂಗ್ ಜತೆಗೆ ಇತರ ಹಂತದ ಅತ್ಯುತ್ತಮ ಬಾಂಧವ್ಯವನ್ನು ಮುಂದುವರಿಸುವ ಬಗ್ಗೆ ಇಚ್ಛೆ ಹೊಂದಿರುವುದಾಗಿ ಮೆಲೊನಿ ಹೇಳಿದ್ದಾರೆ.