ಹರಪನಹಳ್ಳಿ: ಹರಿದ್ವಾರ ಬಳಿ ರಸ್ತೆ ಅಪಘಾತದಲ್ಲಿ ಶುಕ್ರವಾರ ಮೃತಪಟ್ಟ ಜಿಐಎಸ್‌ಎಫ್ ಯೋಧ ತಿಪ್ಪನಳ್ಳಿ ಬಸವರಾಜ್ ಅವರ ಅಂತ್ಯ ಸಂಸ್ಕಾರ ಸ್ವಗ್ರಾಮ ತಾಲೂಕಿನ ಹಲುವಾಗಲು ಗ್ರಾಮದಲ್ಲಿ ಸೋಮವಾರ ಸರ್ಕಾರಿ ಸಕಲ ಗೌರವಗಳೊಂದಿಗೆ ನೆರವೇರಿತು.
ಕೇಂದ್ರೀಯ ಕೈಗಾರಿಕಾ ಭದ್ರತಾ ದಳದಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಯೋಧ ತಿಪ್ಪನಳ್ಳಿ ಬಸವರಾಜ್ ಪಾರ್ಥಿವ ಶರೀರ ಹೊತ್ತ ವಾಹನ ಭಾನುವಾರ ರಾತ್ರಿ 10 ಗಂಟೆಗೆ ಸ್ವಗ್ರಾಮಕ್ಕೆ ಆಗಮಿಸಿತು. ಗ್ರಾಮಕ್ಕೆ ಪಾರ್ಥಿವ ಶರೀರ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಪಾರ ಬಂಧು ಬಳಗದ ಸದಸ್ಯರು, ಊರಿನವರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಯೋಧನ ದರ್ಶನ ಪಡೆಯಲು ಸಾಗರೋಪಾದಿಯಲ್ಲಿ ಆಗಮಿಸಿದ್ದರು. ಇದಕ್ಕೂ ಮೊದಲು ತಾಲೂಕಿನ ದುಗ್ಗಾವತ್ತಿ ಗ್ರಾಮದ ಬಳಿ ರಾತ್ರಿ 7.30ರ ಸಮಯದಲ್ಲಿ ತಹಶೀಲ್ದಾರ್ ಡಾ.ನಾಗವೇಣಿ ಅವರಿಗೆ ಜಿಐಎಸ್‌ಎಫ್ ಸಿಬ್ಬಂದಿ ಮೃತ ದೇಹವನ್ನು ಹಸ್ತಾಂತರಿಸಿದರು.
ಮನೆಯ ಮುಂದೆ ಕುಟುಂಬಸ್ಥರ ದರ್ಶನಕ್ಕೆಂದು ಕೆಲ ಹೊತ್ತು ಪಾರ್ಥಿವ ಶರೀರ ಇಡಲಾಯಿತು. ಬಳಿಕ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಇಟ್ಟು ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಬೆಳಗ್ಗೆ 9.30 ಕ್ಕೆ ರಾಜ್ಯ ಪೊಲೀಸ್ ಸಿಬ್ಬಂದಿ ಗಾಳಿಯಲ್ಲಿ ಮೂರು ಸುತ್ತು ಕುಶಾಲ ತೋಪು ಹಾರಿಸಿ ಅಗಲಿದ ಯೋಧನಿಗೆ ಗೌರವ ನಮನ ಸಲ್ಲಿಸಿದರು. ಬಳಿಕ ಗ್ರಾಮದ ಪ್ರಮುಖ ಬೀದಿಯಲ್ಲಿ ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ ಅಂತ್ಯಕ್ರಿಯೆ ಸ್ಥಳಕ್ಕೆ ತರಲಾಯಿತು. ಈ ವೇಳೆ ಬಸವರಾಜ್ ಅಮರ್ ರಹೇ, ವಂದೇ ಮಾತರಂ ಎಂದು ಜನ ಘೋಷಣೆ ಕೂಗಿದರು.
ಗ್ರಾಮದ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಹಿಂಭಾಗದ ಜಮೀನಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ತಂದೆ ಹನುಮಂತಪ್ಪ, ಅಣ್ಣ ದುರುಗಪ್ಪ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಇದಕ್ಕೂ ಮೊದಲು ತಾಲೂಕು ಆಡಳಿತದವತಿಯಿಂದ ಉಪವಿಭಾಗಾದಿಕಾರಿ ಪಿ.ಎನ್.ಲೋಕೇಶ್ ಅವರು ಪುಷ್ಪ ನಮನ ಸಲ್ಲಿಸಿದರು. ಜಿಐಎಸ್‌ಎಫ್ ಇನ್ಸ್‌ಪೆಕ್ಟರ್ ನವೀನಕುಮಾರ ನೇತೃತ್ವದ ತಂಡ ಅಂತಿಮ ನಮನ ಸಲ್ಲಿಸಿತು. ಯೋಧನ ತಾಯಿ ದುರುಗಮ್ಮ ಅವರಿಗೆ ಜಿಐಎಸ್‌ಎಫ್ ಇನ್ಸ್‌ಪೆಕ್ಟರ್ ರಾಷ್ಟ್ರಧ್ವಜ ಹಸ್ತಾಂತರಿಸಿದರು.
ಶಾಸಕ ಜಿ. ಕರುಣಾಕರರೆಡ್ಡಿ ಅವರು ಗೌರವ ಸಲ್ಲಿಸಿ ಯೋಧನ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು. ಉಪವಿಭಾಗಾಧಿಕಾರಿ ಪಿ.ಎನ್. ಲೊಕೇಶ್, ತಹಶೀಲ್ದಾರ್ ಡಾ.ನಾಗವೇಣಿ, ಸಿಪಿಐ ಡಿ.ದುರುಗಪ್ಪ, ಜಿಪಂ ಸದಸ್ಯೆ ಸುವರ್ಣ ಆರುಂಡಿ ನಾಗರಾಜ್, ಗ್ರಾಪಂ ಅಧ್ಯಕ್ಷೆ ರತ್ನಮ್ಮ ಸೋಮಪ್ಪ ಸೇರಿದಂತೆ ಗಣ್ಯರು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಅಂತಿಮ ದರ್ಶನ ಪಡೆದರು.