ಶಿರಸಿ: ಪವಿತ್ರ ಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಶ್ರೀರಾಮಚಂದ್ರಾಪುರ ಮಠದಿಂದ ನಡೆಸುತ್ತಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಪರಂಪರೆ, ಸಂಸ್ಕಾರಯುಕ್ತವಾದ ಶಿಕ್ಷಣ ನೀಡಲಾಗುತ್ತಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ನಗರದ ಅಂಬಾಗಿರಿಯ ಶ್ರೀ ರಾಮಕೃಷ್ಣ ಕಾಳಿಕಾಮಠದಲ್ಲಿ ಶ್ರೀ ಕಾಳಿಕಾಭವಾನಿ ಪ್ರತಿಷ್ಠಾಪನಾ 31ನೇ ವಾರ್ಷಿಕೋತ್ಸವದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂವಾದ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ನಮ್ಮ ದೇಶ, ಊರು, ಪರಂಪರೆಗೆ ತಕ್ಕ ಶಿಕ್ಷಣ ನೀಡುವುದು ಇಂದಿನ ಅಗತ್ಯತೆಯಿದೆ. ಈ ನಿಟ್ಟಿನಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಕುದುರೆ ಸವಾರಿ, ಮಲ್ಲಕಂಬ, ಯೋಗ, ವೇದಾಧ್ಯಯನ, ಆಯುರ್ವೇದ ಸೇರಿದಂತೆ 42ಕ್ಕೂ ಹೆಚ್ಚು ವಿಭಾಗದಲ್ಲಿ ಶಿಕ್ಷಣ ಲಭಿಸುತ್ತದೆ. 4ರಿಂದ 12ನೇ ತರಗತಿವರೆಗೆ ಗುರುಕುಲ ಮಾದರಿಯಲ್ಲಿ ಶಿಕ್ಷಣ ನೀಡಲಾಗುತ್ತಿದ್ದು 600ಕ್ಕೂ ಹೆಚ್ಚು ಮಕ್ಕಳು ಅಧ್ಯಯನ ಮಾಡುತ್ತಿದ್ದಾರೆ. ಮುಂದಿನ ವರ್ಷ ಇದು ಸಾವಿರ ದಾಟುವ ನಿರೀಕ್ಷೆಯಿದೆ ಎಂದರು.
ವಿಶ್ವವಿದ್ಯಾಪೀಠದಲ್ಲಿ ಎಲ್ಲರಿಗೂ ಅವಕಾಶವಿದೆ. ಬಡವ ಎನ್ನುವ ಕಾರಣಕ್ಕೆ ಪ್ರವೇಶ ಇಲ್ಲದೇ ಹಿಂದಿರುಗಿ ಹೋಗಬೇಕಾಗಿದ್ದಿಲ್ಲ. ಆರ್ಥಿಕವಾಗಿ ಶಕ್ತಿ ಇಲ್ಲದೇ ಶುಲ್ಕ ಭರಿಸಲಾಗದ ಅರ್ಹರಿಗೆ ವಿದ್ಯಾರ್ಜನೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಪೂರ್ಣಪ್ರಮಾಣದ ವಿದ್ಯಾರ್ಥಿ ವೇತನ ಸೇರಿ ನಾಲ್ಕು ಹಂತದಲ್ಲಿ ಈ ಸೌಲಭ್ಯ ದೊರೆಯಲಿದೆ. ನಿಜವಾದ ತೊಂದರೆ ಇದ್ದವರು ಇದರ ಪ್ರಯೋಜನ ಪಡೆಯಬೇಕು. ಆದರೆ ಇದರ ದುರುಪಯೊಗವಾಗಬಾರದು, ಹಣವಂತರು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಲು ಹಿಂಜರಿಯಬಾರದು ಎಂದು ಸಲಹೆ ನೀಡಿದರು.
ಮೊಬೈಲ್‌ಗಳಿಂದ ಮಕ್ಕಳು ಅನುಕೂಲ ಪಡೆಯುವ ಹಾಗೂ ದಾರಿ ತಪ್ಪುವ ಎರಡೂ ಅವಕಾಶವಿರುತ್ತದೆ. ವಿವೇಕ ಇಲ್ಲದೇ ಯಾವುದನ್ನು ನೋಡಬೇಕು, ಯಾವುದನ್ನು ನೋಡಬಾರದು, ಯಾವುದನ್ನು ಓದಬೇಕು, ಯಾವುದನ್ನು ಓದಬಾರದು ಎಂಬುದು ಗೊತ್ತಾಗುವುದಿಲ್ಲ ಎಂದರು.
ಬದುಕಿನ ಮಾರುಕಟ್ಟೆಯಲ್ಲಿ ಪರೀಕ್ಷೆಯಲ್ಲಿ ಪಡೆಯುವ ಅಂಕ, ವಿದ್ಯಾರ್ಹತೆಗಿಂತ ಪರಿಪೂರ್ಣತೆಯುಳ್ಳ ಗುಣಕ್ಕೆ ಹೆಚ್ಚು ಬೆಲೆಯಿದೆ. ಅಂಕ ಅರ್ಧದಷ್ಟು ಮಾನದಂಡವಾದರೂ ಇನ್ನರ್ಧ ಗುಣಕ್ಕೂ ಪ್ರಾಶಸ್ತ್ಯ ದೊರೆಯುತ್ತದೆ. ಮನುಷ್ಯನ ವ್ಯಕ್ತಿತ್ವ ನೀಡಿ ಸಮಾಜ ಕೈ ಹಿಡಿಯುತ್ತದೆ, ಗೌರವ ನೀಡುತ್ತದೆ. ಮಹಾಪುರುಷರುಗಳು, ಸಾಧಕರು ಎಷ್ಟು ಶಿಕ್ಷಣ ಪಡೆದಿದ್ದಾರೆ ಎಂಬುದು ಮುಖ್ಯವಾಗುವುದಿಲ್ಲ. ಅವರು ಸಮಾಜಕ್ಕೆ ಏನು ಆದರ್ಶ, ಕೊಡುಗೆ ನೀಡಿದ್ದಾರೆ ಎಂಬುದೇ ಸಮಾಜ ಗಮನಿಸುತ್ತದೆ ಎಂದು ಶ್ರೀ ಹೇಳಿದರು.
ಈ ಸಂದರ್ಭದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕುರಿತು ಭಕ್ತರು ಸಂವಾದದ ಪ್ರಶ್ನೋತ್ತರದ ಮೂಲಕ ಶ್ರೀಗಳಿಂದ ಮಾಹಿತಿ ಪಡೆದುಕೊಂಡರು.
ಆಡಳಿತ ಖಂಡದ ಮುಖ್ಯಸ್ಥ ಪ್ರಮೋದ ಪಂಡಿತ, ಮಹಾಮಂಡಳದ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಮಂಡಳದ ಅಧ್ಯಕ್ಷ ಮಹೇಶ ಚಟ್ನಳ್ಳಿ, ವಲಯದ ಅಧ್ಯಕ್ಷ ವಿ.ಎಂ.ಹೆಗಡೆ ಆಲ್ಮನೆ, ಮಾತೃ ಪ್ರಧಾನ ಸಾವಿತ್ರಿ ಹೆಗಡೆ, ವೀಣಾ ಭಟ್ಟ, ಪ್ರಮೋದ ಹೆಗಡೆ ಯಲ್ಲಾಪುರ, ಅಂಬಾಗಿರಿ ಮಠದ ದಿಗ್ಧರ್ಶಕರಾದ ಎಲ್.ಆರ್.ಭಟ್ಟ ಬಿ.ಕೆ.ಹೆಗಡೆ ಕೆಶಿನ್ಮನೆ, ಕಾರ್ಯಾಲಯದ ಕಾರ್ಯದರ್ಶಿ ಶಂಕರ ಹೆಗಡೆ, ಕೋಶಾಧ್ಯಕ್ಷ ಲಕ್ಷ್ಮಣ ಶಾನಭಾಗ ಮುಂತಾದವರು ಪಾಲ್ಗೊಂಡಿದ್ದರು.