Advertisement

ಕಾಪು: ಐದು ಅಂತಸ್ತಿನ ಗೂಡು ನಿರ್ಮಿಸಿ ಉತ್ತರಕ್ರಿಯೆ

06:22 PM Jan 30, 2022 | Team Udayavani |

ಕಾಪು: ತುಳುನಾಡು ಹಲವಾರು ಜಾನಪದ, ಧಾರ್ಮಿಕ, ಸಾಂಸ್ಕೃತಿಕ ಮತ್ತು ವೈವಿಧ್ಯಮಯ ಆಚರಣೆಗಳಿಗೆ ಪ್ರಸಿದ್ಧವಾಗಿದ್ದು ಅಂತಹ ಆಚರಣೆಯಲ್ಲಿ ವ್ಯಕ್ತಿ ಸತ್ತ 13ನೇ ದಿನದಲ್ಲಿ ನಡೆಸುವ ಉತ್ತರಕ್ರಿಯೆ ಸಮಾರಂಭವೂ ಒಂದಾಗಿದೆ.

Advertisement

ಕುಟುಂಬದ ಯಜಮಾನ ಅಥವಾ ಹಿರಿಯರು ತೀರಿಕೊಂಡಾಗ ಅವರ ಆತ್ಮಸದ್ಗತಿಗಾಗಿ ಹದಿಮೂರನೇ ದಿವಸದಂದು ನಡೆಸುವ ಉತ್ತರಕ್ರಿಯೆಗಾಗಿ ಹತ್ತಾರು ಆಚರಣೆಗಳನ್ನು ನಡೆಸಲಾಗುತ್ತಿದ್ದು ಅದರಲ್ಲೂ ಸತ್ತವರ ನೆನಪಿನಲ್ಲಿ ನಿರ್ಮಿಸುವ ದೂಪೆ ಅಥವಾ ಗೂಡು ನಿರ್ಮಾಣದಲ್ಲೂ ವೈವಿಧ್ಯಗಳಿವೆ.

ಕಾಪುವಿನ ಹಿರಿಯ ವೈದ್ಯ, ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದ ದಿಗ್ಗಜರಾಗಿದ್ದ ಡಾ| ಕೆ. ಪ್ರಭಾಕರ ಶೆಟ್ಟಿ ಅವರ ಉತ್ತರಕ್ರಿಯೆಯ ಪ್ರಯುಕ್ತ ನಿರ್ಮಿಸಲಾಗಿದ್ದ ವೈವಿಧ್ಯಮಯವಾದ ಐದು ಅಂತಸ್ತಿನ ಗೂಡು ಜಾನಪದ, ಸಂಸ್ಕೃತಿ ಪ್ರತೀಕವಾಗಿದೆ. ಸಾಮಾನ್ಯವಾಗಿ ಉತ್ತರಕ್ರಿಯೆಯಂದು ಅನ್ನ ಬಡಿಸುವುದಕ್ಕಾಗಿ ಒಂದು ಒಂದು ಅಂತಸ್ತಿನ ದೂಪೆ ಅಥವಾ ಗೂಡು ನಿರ್ಮಿಸಲಾಗುತ್ತದೆಯಾದರೂ, ಇಲ್ಲಿ ಐದು ಆಂತಸ್ತಿನ ಗೂಡು ನಿರ್ಮಿಸಿದ್ದು ವಿಶೇಷ.

ಕಾಪುವಿನಲ್ಲಿ ಎರಡನೇ ಬಾರಿ ನಿರ್ಮಾಣ
ಕಳೆದ ಡಿಸೆಂಬರ್‌ನಲ್ಲಿ ನಿಧನ ಹೊಂದಿದ್ದ ಕಾಪು ಅಯೋಧ್ಯಾ ನಿವಾಸಿ ಸೀತಾ ಆರ್‌. ಶೆಟ್ಟಿ ಅವರ ಸ್ಮರಣಾರ್ಥ ಅವರ ಮಕ್ಕಳು ಈ ಮಾದರಿಯ ಐದು ಅಂತಸ್ತಿನ ದೂಪೆಯನ್ನು ನಿರ್ಮಿಸಿದ್ದು, ಅದೇ ಮಾದರಿಯ ದೂಪೆಯನ್ನು ಒಂದೂವರೆ ತಿಂಗಳ ಅಂತರದಲ್ಲಿ ಕಾಪುವಿನಲ್ಲಿ ಮತ್ತೊಮ್ಮೆ ಕಾಣುವಂತಾಗಿದೆ. ಈ ಗೂಡು ನಿರ್ಮಾಣ ಕಾರ್ಯ ಅತ್ಯಂತ ಕ್ಲಿಷ್ಟಕರವಾಗಿದೆ. ಕೊಪ್ಪಲಂಗಡಿಯ ರಘುರಾಮ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಗಣೇಶ್‌ ಕುಂದರ್‌, ಮಾಧವ ಸಾಲಿಯಾನ್‌, ಸಂದೀಪ್‌ ಕುಮಾರ್‌ ಅವರು ಜತೆಗೂಡಿ ಶಿಸ್ತುಬದ್ಧವಾಗಿ ನಿರ್ಮಿಸಿದ್ದಾರೆ.

ಗೂಡು ನಿರ್ಮಾಣ ಹೇಗೆ ?
ಇಷ್ಟು ದೊಡ್ಡ ಅಂತಸ್ತು ಗೂಡು ನಿರ್ಮಾಣಕ್ಕೆ ಅದರದ್ದೇ ಆದ ಚೌಕಟ್ಟುಗಳಿದ್ದು, ವಿಶ್ವಕರ್ಮ ಸಮುದಾಯದ ಪ್ರತಿನಿಧಿಯ ಮೂಲಕವಾಗಿ ಅದಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಸಿದ್ಧ ಪಡಿಸಲಾಗುತ್ತದೆ. ಒಂದು ಇಡೀ ಅಡಕೆ ಮರವನ್ನು ಬಳಸಿಕೊಂಡು, ಸೀಮೆ ಕೋಲು, ಬಟ್ಟೆ, ರೀಪು ಸಹಿತ ಇತರ ಸಾಮಗ್ರಿಗಳನ್ನು ಬಳಸಲಾಗುತ್ತದೆ. ಕೆಳಗೆ ಒಂದೊಂದೇ ಅಂತಸ್ತು ಗೂಡುಗಳನ್ನು ಕಟ್ಟಿ ಅದನ್ನು ಹಂತ ಹಂತವಾಗಿ ಮೇಲಕ್ಕೇರಿಸಲಾಗುತ್ತದೆ. ಬಲಕ್ಕಾಗಿ ಹುರಿ ಹಗ್ಗವನ್ನು ಬಳಸಿ ಬಿಗಿಯಲಾಗುತ್ತದೆ. ಮಧ್ಯಾಹ್ನ ಅನ್ನ ಬಡಿಸಿ, ಊರಿನ ಗಣ್ಯರು, ಹಿರಿಯರು ಸಾಮೂಹಿಕ ಪ್ರಾರ್ಥನೆ ನಡೆಸಿ ಬಳಿಕ ಅದನ್ನು ಹಂತ ಹಂತವಾಗಿ ಕೆಳಗಿಳಿಸಲಾಗುತ್ತದೆ.

Advertisement

ದೊಡ್ಡ ದೂಪೆ, ಗೂಡು ನಿರ್ಮಾಣ
ಸಾಮಾನ್ಯವಾಗಿ ಎಂಭತ್ತು ವರ್ಷ ಮೇಲ್ಪಟ್ಟ ಪ್ರಾಯದವರಿಗೆ, ಮನೆಯ ಯಜಮಾನ, ಧಾರ್ಮಿಕೈ ಸಾಮಾಜಿಕ ಮುಖಂಡರ ಸ್ಮರಣಾರ್ಥವಾಗಿ ಅವರ ಉತ್ತರಕ್ರಿಯೆಯಂದು ಈ ಮಾದರಿಯ ದೊಡ್ಡ ದೂಪೆ ಅಥವಾ ಗೂಡನ್ನು ನಿರ್ಮಿಸಲಾಗುತ್ತದೆ. ಇಲ್ಲಿ ಐದು ಅಂತಸ್ತಿನ ಗೂಡು ನಿರ್ಮಿಸಲಾಗಿದ್ದು ಕೆಲವೆಡೆ 6 , 12 , 13 ಅಂತಸ್ತುಗಳಲ್ಲಿಯೂ ನಿರ್ಮಿಸಲಾಗುತ್ತದೆ. ಈ ಗೂಡು ನಿರ್ಮಿಸಿದ ಬಳಿಕ ಡೋಲು, ವಾದ್ಯ ಘೋಷದೊಂದಿಗೆ ಮನೆಯವರು ಪಲ್ಲಕ್ಕಿಯಲ್ಲಿ ಅನ್ನವನ್ನು ತಂದು ಬಡಿಸಲಾಗುತ್ತದೆ.
-ಗಣೇಶ್‌ ಕುಂದರ್‌,
ಐದು ಅಂತಸ್ತಿನ ಗೂಡು ನಿರ್ಮಾತೃ

ಉತ್ತಮ ರೀತಿಯಲ್ಲಿ ನಿರ್ಮಾಣ
ಐದು ಅಂತಸ್ತಿನ ಗೂಡು ನಿರ್ಮಿಸುವುದಕ್ಕೂ ಹಲವು ಚೌಕಟ್ಟು, ನೀತಿ, ನಿಯಮಾವಳಿಗಳಿದ್ದು ಗಣೇಶ್‌ ಕುಂದರ್‌ ಮತ್ತು ಅವರ ಬಳಗದವರು ಉತ್ತಮವಾಗಿ ನಿರ್ಮಿಸಿದ್ದಾರೆ.
-ರಘುರಾಮ ಶೆಟ್ಟಿ , ಕೊಪ್ಪಲಂಗಡಿ

ಮುಂದಿನ ಪೀಳಿಗೆಗೂ ಉಳಿಸುವ ಪ್ರಯತ್ನ
ಜಾನಪದ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದ ನಮ್ಮ ತಂದೆ ಡಾ| ಪ್ರಭಾಕರ ಶೆಟ್ಟಿ ಅವರ ಆತ್ಮ ಸದ್ಗತಿಗಾಗಿ ಐದು ಆಂತಸ್ತಿನ ಗೂಡು ನಿರ್ಮಿಸಿ ಅದರಲ್ಲಿ ಸಂಪ್ರದಾಯ ಬದ್ಧವಾಗಿ ಬೆಲ್ಲ, ತೆಂಗಿನಾಯಿ ಮತ್ತು ಅಕ್ಕಿಯಿಂದ ತಯಾರಿಸಿದ ಅನ್ನವನ್ನು ಬಡಿಸಲಾಗಿದೆ. ಇಂತಹ ಆಚರಣೆಗಳನ್ನು ಮುಂದಿನ ಪೀಳಿಗೆಯವರೆಗೂ ಉಳಿಸುವ ಪ್ರಯತ್ನ ನಡೆಸಲಾಗಿದೆ.
-ಡಾ| ಕೆ. ಪ್ರಶಾಂತ್‌ ಶೆಟ್ಟಿ,

Advertisement

Udayavani is now on Telegram. Click here to join our channel and stay updated with the latest news.

Next