ಬೆಂಗಳೂರು: ಮಾಜಿ ಭೂಗತ ದೊರೆ, ಜಯ ಕರ್ನಾಟಕ ಸಂಘಟನೆಯ ಎನ್.ಮುತ್ತಪ್ಪ (68ವರ್ಷ) ಅವರ ಪಾರ್ಥಿವ ಶರೀರವನ್ನು ಬಿಡದಿಯ ನಿವಾಸದ ಆವರಣದಲ್ಲಿಯಢ ಬಂಟ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನೆರವೇರಿಸಿ ಪುತ್ರ ರಿಕ್ಕಿ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮುತ್ತಪ್ಪ ರೈ ಶುಕ್ರವಾರ ಮುಂಜಾನೆ 1.55ರ ಸುಮಾರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ನಂತರ ಮಧ್ಯಾಹ್ನ ಪಾರ್ಥಿವ ಶರೀರವನ್ನು ಬಿಡದಿಗೆ ರವಾನಿಸಲಾಗಿತ್ತು. ಅಲ್ಲಿ ಕೆಲವು ನಿಮಿಷಗಳ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.
ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ರೈ ಅಂತ್ಯಕ್ರಿಯೆಯಲ್ಲಿ ಕುಟುಂಬ ಸದಸ್ಯರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಭೂಗತ ಲೋಕದ ದೊರೆ ಎನ್ನಿಸಿಕೊಂಡಿದ್ದ ರೈ ದೀರ್ಘಕಾಲ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.
ದೇಹಕ್ಕೆ 5 ಗುಂಡು ಬಿದ್ದಿದ್ದರೂ ಸಾವಿನಿಂದ ಪಾರಾಗಿದ್ದೆ. ಹೀಗಾಗಿ ಇದೀಗ ನನ್ನ ದೊಡ್ಡ ಶತ್ರು ಕ್ಯಾನ್ಸರ್. ನಾನು ಅದರ ವಿರುದ್ಧ ಹೋರಾಡಿ ಖಂಡಿತ ಗೆದ್ದು ಬರುತ್ತೇನೆ ಎಂದು ಬಿಡದಿಯ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ವಿಶ್ವಾಸ ವ್ಯಕ್ತಪಡಿಸಿದ್ದರು.