ಕಲಬುರಗಿ: ಆಳಂದ ತಾಲೂಕಿನಲ್ಲಿ ರಸ್ತೆ ದುರಸ್ತಿ ಮಾಡಿಸಲು ಶಾಸಕ ಬಿ.ಆರ್.ಪಾಟೀಲ ಅವರ ನಿಧಿಗಾಗಿ ಅಹಿಂದ ಚಿಂತಕರ ವೇದಿಕೆ ಸದಸ್ಯರು ಶನಿವಾರ ನಗರದ ನಗರೇಶ್ವರ ದೇವಸ್ಥಾನ ದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಸಾರ್ವಜನಿಕರಿಂದ ಹಣ ಬೇಡಿ ಸಂಗ್ರಹಿಸಿ ಜಿಲ್ಲಾಧಿಕಾರಿಗೆ ನೀಡಿದರು.
ಶನಿವಾರ ಬೆಳಗ್ಗೆ ನಗರದ ನಗರೇಶ್ವರ ದೇವಸ್ಥಾನದಿಂದ ಐದು ಡಬ್ಬಿಗಳನ್ನು ಹಿಡಿದು ಎಡ-ಬಲ ರಸ್ತೆಗಳಲ್ಲಿ ಸಾರ್ವಜನಿಕ ರಿಂದ ಹಣ ಸಂಗ್ರಹಿಸುತ್ತಾ ಬಂಬೂ ಬಜಾರ, ಕಿರಾಣಾ ಬಜಾರ್ ಹಾಗೂ ಜಗತ್‌ವೃತ್ತದಿಂದ ಹಾಯ್ದು ಲಾಹೋಟೆ ಪೆಟ್ರೋಲ್ ಬಂಕ್ ಎದುರು ಹಾಯ್ದು ಜಿಲ್ಲಾಧಿಕಾರಿ ಕಚೇರಿ ತಲುಪಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಬಳಿಯಲ್ಲಿ ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿದ ವೇದಿಕೆ ಅಧ್ಯಕ್ಷ ಸೈಬಣ್ಣಾ ಜಮಾದಾರ ಹಾಗೂ ಕಾರ್ಯದರ್ಶಿ ರಾಜೇಂದ್ರ ರಾಜವಾಳ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ಅನಿರೀಕ್ಷಿತ ಘಟನೆಯಾಗಿದೆ.
ಆಳಂದ ಶಾಸಕರು ತಾಲೂಕಿನ ರಸ್ತೆಗಳ ದುರಸ್ತಿಗೆ ಹಣವಿಲ್ಲ ಎಂದು ಹೇಳಿಕೊಂಡು ಮಾಧ್ಯಮಗಳ ಮುಂದೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಎರಡು ಬಾರಿ ಪ್ರತಿಭಟನೆ, ಧರಣಿ ಮಾಡಿ ಶಾಸಕರಿಗೆ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಹೆಬಳಿ, ಮಂಟಗಿ, ನಿರಗುಡಿ, ಶುಕ್ರವಾಡಿ, ಬೆಣ್ಣೆಶಿರೂರ, ನಿಂಬರ್ಗಾ, ದೇಗಾಂವ ಸೇರಿದಂತೆ ಹಲವು ಹಳ್ಳಿಗಳಲ್ಲಿ ರಸ್ತೆಗಳನ್ನು ದುರಸ್ತಿ ಮಾಡುವುದಿರಲಿ ಕೊಂಚ ಮಣ್ಣು ಹಾಕಲು ಕೂಡ ಜಿಲ್ಲಾಡಳಿತದ ಬಳಿಯಲ್ಲಿ ಹಣವಿಲ್ಲ ಎನ್ನುವುದು ನೋವಿನ ಸಂಗತಿಯಾಗಿದೆ ಎಂದರು.
ಈ ಹಂತದಲ್ಲಿ ಅಹಿಂದ ಚಿಂತಕರ ವೇದಿಕೆ ಶಾಸಕರ ನಿಧಿಗಾಗಿ ಹಣವನ್ನು ಸಂಗ್ರಹಿಸಲು ಮುಂದಾಯಿತು. ಈ ಮೂಲಕವಾದರೂ ರಸ್ತೆಗಳ ದುರಸ್ತಿಗೆ ಹಣ ಸಂಗ್ರಹ ಮಾಡುವುದು ಉದ್ದೇಶವಾಗಿತ್ತು. ಲಕ್ಷಾಂತರವಲ್ಲವಾದರೂ, ಸಾವಿರಾರು ರೂ.ಗಳನ್ನು ಸಂಗ್ರಹ ಮಾಡುವುದು ನಮ್ಮ ಯೋಜನೆಯಾಗಿತ್ತು. ಆದ್ದರಿಂದ ಇವತ್ತು ಹಣದ 5 ಡಬ್ಬಿಗಳನ್ನು ಜಿಲ್ಲಾಧಿಕಾರಿಗಳಿಗೆ ಒಪ್ಪಿಸಲಾಗಿದೆ. ಶೀಘ್ರವೇ ಹಣವನ್ನು ಲೆಕ್ಕ ಹಾಕಿ ಶಾಸಕರ ನಿಧಿಗೆ ಹಣ ಹಾಕಬೇಕು ಎಂದು ಮನವಿ ಮಾಡಲಾಗಿದೆ ಎಂದರು.
ಕೇಂದ್ರ ಸ್ಥಾನಿಕ ಅಧಿಕಾರಿಗಳಿಗೆ ಹಣ ಸಂಗ್ರಹದ 5 ಡಬ್ಬಿಗಳನ್ನು ನೀಡಲಾಯಿತು. ಉಪಾಧ್ಯಕ್ಷ ಅನೀಲಕುಮಾರ ವಚ್ಚಾ, ಖಜಾಂಚಿ ಸಂಜು ಹೊಡೆಲ್, ರಾಚಣ್ಣ ಯಡ್ರಾಮಿ, ಸಹ ಕಾರ್ಯದರ್ಶಿ ಸಿದ್ರಾಮಪ್ಪ ಘಾಳೆ, ಸದಸ್ಯರಾದ ಶಿವಪ್ಪ ಹಡಪದ , ಜ್ಯೋರ್ತಿಲಿಂಗಯ್ಯ ಹಿರೇಮಠ, ಚಂದ್ರಕಾಂತ ಗಂವ್ಹಾರ್, ರವಿ ಮರಪಳ್ಳಿ, ಗುಂಡಯ್ಯ ಗುತ್ತೇದಾರ ಹಾಗೂ ಸಾರ್ವಜನಿಕರು ಇದ್ದರು.