Advertisement

ನಾಲ್ಕು ತಿಂಗಳಿಂದ ಮೊಟ್ಟೆ  ಖರೀದಿಗಿಲ್ಲ ಅನುದಾನ

01:00 AM Feb 27, 2019 | Team Udayavani |

ಮಣಿಪಾಲ: ಗೌರವಧನದಲ್ಲೇ ಜೀವನ ಸಾಗಿಸುವ ಅಂಗನವಾಡಿ ಕಾರ್ಯಕರ್ತೆಯರು ಈಗ ತಮ್ಮ ಸಂಭಾವನೆಯಿಂದಲೇ ಅದೂ ಒಂದು ತಿಂಗಳಿಂದ ಬಾಕಿ ಇರುವ ಪರಿಸ್ಥಿತಿಯಲ್ಲಿ ಅಂಗನವಾಡಿ ಮಕ್ಕಳಿಗೆ ವಾರಕ್ಕೆರಡು ಬಾರಿ ಮೊಟ್ಟೆ ಖರೀದಿಸಿ ನೀಡುವ ಅನಿವಾರ್ಯತೆಗೆ ಸಿಲುಕಿದ್ದಾರೆ.

Advertisement

ಅಕ್ಟೋಬರ್‌ನಿಂದ ಮೊಟ್ಟೆ ಖರೀದಿಸಲು ಇಲಾಖೆಯಿಂದ ಹಣ ಬಾರದ ಕಾರಣ  ಸಮಸ್ಯೆ ಉಂಟಾಗಿದೆ. ಇರುವ ಅಲ್ಪ ಆದಾಯದಲ್ಲಿ ಅಂಗನವಾಡಿ ಮತ್ತು ಇಲಾಖೆಗೆ ಸಂಬಂಧಿಸಿದ ಯೋಜನೆಗಳ ಕೆಲಸ ಮಾಡುವ ಕಾರ್ಯಕರ್ತೆಯರಿಗೆ ಅನುದಾನ ಸಕಾಲಕ್ಕೆ ಬಾರದಿರುವುದು ಸಂಕಷ್ಟಕ್ಕೀಡು ಮಾಡಿದೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 1,191 ಅಂಗನವಾಡಿ ಕೇಂದ್ರಗಳಿದ್ದು 24,311 ಮಂದಿ ಮಕ್ಕಳಿಗೆ ವಾರಕ್ಕೆರಡು ಬಾರಿ ಮೊಟ್ಟೆ ನೀಡಲಾಗುತ್ತದೆ. ಒಂದೆರಡು ತಿಂಗಳಾದರೂ ಅನುದಾನ ದೊರೆಯದಿದ್ದರೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದ ಕಾರ್ಯಕರ್ತೆಯರಿಗೆ 4 ತಿಂಗಳಿಂದ ಅನುದಾನ ಬಾರದಿರುವುದು ಭಾರೀ ತೊಂದರೆಯಾಗಿ ಪರಿಣಮಿಸಿದೆ. 

ಸರಕಾರದ “ಮೊಟ್ಟೆಗೆ’ 5 ರೂ. ಮಾತ್ರ! 
ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ 5.50/6 ರೂ. ಆದರೂ ಇಲಾಖೆ ಕೊಡುವುದು 5 ರೂ. ಮಾತ್ರ. ಹೆಚ್ಚುವರಿ ಮೊತ್ತವನ್ನು ಕಾರ್ಯಕರ್ತೆಯರೇ ಭರಿಸಬೇಕು. ಜತೆಗೆ ಭಾಗ್ಯಲಕ್ಷ್ಮೀ ಸಹಿತ ವಿವಿಧ ಮಕ್ಕಳ ಕಲ್ಯಾಣ ಯೋಜನೆಗಳನ್ನು ಕಾರ್ಯಕರ್ತೆಯರು ಅನುಷ್ಠಾನಿಸಬೇಕಾಗುತ್ತದೆ. ಈ ವೇಳೆ ಕೆಲವೊಮ್ಮೆ ಹೆಚ್ಚುವರಿ ಪ್ರತಿಗಳ ಜೆರಾಕ್ಸ್‌ ಖರ್ಚನ್ನು ಅವರೇ ಭರಿಸಬೇಕಾಗುತ್ತದೆ. 8 ಸಾವಿರ ರೂ. ಗೌರವಧನದಲ್ಲಿ ಇವೆಲ್ಲವನ್ನೂ ಕಾರ್ಯಕರ್ತೆಯರು ನಿರ್ವಹಿಸಬೇಕಿದೆ.

ಗೌರವಧನ ನಿಯಮಿತವಾಗಿಲ್ಲ
ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನವೂ ನಿಯಮಿತವಾಗಿ ಬರುತ್ತಿಲ್ಲ ಎಂಬ ದೂರುಗಳಿವೆ. ಹಿಂದೊಮ್ಮೆ 3 ತಿಂಗಳ ಗೌರವಧನ ಬಾಕಿಯಾಗಿದ್ದರೆ ಪ್ರಸ್ತುತ ಒಂದು ತಿಂಗಳ ವೇತನ ಬಾಕಿ ಇದೆ ಎಂದು ತಿಳಿದು ಬಂದಿದೆ. ಕೊಡುವ ಗೌರವಧನವನ್ನಾದರೂ ಸಕಾಲಿಕವಾಗಿ ನೀಡಿದರೆ ಉತ್ತಮ ಎಂಬುದು ಕಾರ್ಯಕರ್ತೆಯರ ಒತ್ತಾಯವಾಗಿದೆ. 

Advertisement

ಯಾಕೆ ಸಮಸ್ಯೆ?
ಸೆಪ್ಟಂಬರ್‌ ವರೆಗೆ ಅಂಗನವಾಡಿ ಕಾರ್ಯಕರ್ತೆಯರ ವೈಯಕ್ತಿಕ ಖಾತೆಗೆ ಮೊಟ್ಟೆ ಖರೀದಿ
ಅನುದಾನವೂ ಬರುತ್ತಿತ್ತು. ಸರಕಾರದ ಆದೇಶ ಬಂದಿದ್ದರಿಂದ ಬಾಲವಿಕಾಸ ಸಮಿತಿ ಅಧ್ಯಕ್ಷರು ಮತ್ತು ಅಂಗನವಾಡಿ ಕಾರ್ಯಕರ್ತೆಯ ಹೆಸರಿಗೆ ಜಂಟಿ ಖಾತೆ ತೆರೆಯಬೇಕಿದ್ದು ಇದಕ್ಕೆ ಅನುದಾನ ಒದಗಿಸಬೇಕಾಗುತ್ತದೆ. ಜತೆಗೆ ಉಡುಪಿ ಮತ್ತು ಗದಗ ಜಿಲ್ಲೆಗಳಲ್ಲಿ ಖಜಾನೆ 2 ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿ ಮಾಡಿದ್ದರಿಂದ ಇದರ ಮೂಲಕವೇ ಅನುದಾನವನ್ನು ಜಂಟಿ ಖಾತೆಗೆ ಹಾಕಬೇಕಾಗುತ್ತದೆ. ಎಲ್ಲರೂ ಜಂಟಿ ಖಾತೆ ತೆರೆಯದೇ ಇದ್ದುದರಿಂದ ಈ ಸಮಸ್ಯೆ ಉಂಟಾಗಿದೆ. ಆದರೆ ಖಾತೆಯನ್ನು ಸಕಾಲದಲ್ಲಿ ತೆರೆದವರಿಗೂ ಅನುದಾನ ಬಾರದಿರುವುದು ವಿಪರ್ಯಾಸ.

ಖಜಾನೆ 2 ಮೂಲಕ ಅನುದಾನ ಬಿಡುಗಡೆ ಮಾಡಬೇಕಿದೆ. ಹಲವರು ಜಂಟಿ ಖಾತೆ ತೆರೆಯದಿರುವುದರಿಂದ ಸಮಸ್ಯೆಯಾಗಿತ್ತು. ಬಾಕಿ ಮೊತ್ತವನ್ನು ಒಂದೇ ಕಂತಿನಲ್ಲಿ ಖಾತೆಗೆ ಜಮೆ ಮಾಡಲಾಗುವುದು. ವಾರದಲ್ಲಿ ಸಮಸ್ಯೆ ಬಗೆಹರಿಯಲಿದೆ. ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ ಒಂದೇ ಪ್ರತಿ ಸಲ್ಲಿಸಿದರೆ ಸಾಕು. ಹೆಚ್ಚುವರಿ ಪ್ರತಿ ಅಗತ್ಯವಿಲ್ಲ. 
-ಗ್ರೇಸಿ ಗೊನ್ಸಾಲ್ವಿಸ್‌, ಉಪನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next