ಮೈಸೂರು: ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರಕಾರದಿಂದ ಐದು ವರ್ಷಗಳಿಂದ ಹಣ ಬಿಡುಗಡೆಯಾಗಿಲ್ಲ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಸೋಮವಾರ ಇಲ್ಲಿ ಪ್ರವಾಸೋದ್ಯಮ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿರುವ ಕರ್ನಾಟಕ ವಸ್ತು ಪ್ರದರ್ಶನದ ಅಭಿವೃದ್ಧಿಗಾಗಿ ಸ್ವದೇಶಿ ದರ್ಶನ್ ಯೋಜನೆಯಲ್ಲಿ 80 ಕೋಟಿ ರೂ. ಕೇಂದ್ರ ಸರಕಾರದಿಂದ ಬಿಡುಗಡೆಯಾಗಿಲ್ಲ. ಈ ಕುರಿತು ಸಂಸದ ಪ್ರತಾಪ ಸಿಂಹ ಸಭೆ ನಡೆಸಿರುವ ವಿಚಾರವೂ ತಮ್ಮ ಗಮನಕ್ಕೆ ಬಂದಿಲ್ಲ ಎಂದರು.
ಪ್ರವಾಸೋದ್ಯಮದ ಬಗ್ಗೆ ತಮಗೆ ಅಷ್ಟಾಗಿ ನೈಪುಣ್ಯ ಇರಲಿಲ್ಲ. ಪ್ರವಾಸೋದ್ಯಮ ಸಚಿವನಾದ ಬಳಿಕ ಈ ಕುರಿತು ಅಧ್ಯಯನ ಮಾಡುತ್ತಿದ್ದೇನೆ. ಮೈಸೂರು ಪ್ರವಾಸಿ ನಗರ. ಸಾಂಸ್ಕೃತಿಕ ರಾಜಧಾನಿ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ದೃಢ ಹೆಜ್ಜೆಗಳನ್ನು ಇರಿಸಲು ಅಧ್ಯಯನಕ್ಕಾಗಿ ಮೈಸೂರಿಗೆ ಬಂದಿದ್ದೇನೆ ಎಂದು ಅವರು ತಿಳಿಸಿದರು.
ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ಸ್ ಗೆ ಸಂಬಂಧಪಟ್ಟಂತೆ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಕೋವಿಡ್ ವೇಳೆ ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ ಆದಾಯಕ್ಕೆ ಹೊಡೆತ ಬಿದ್ದಿತ್ತು. 2021-22ರಲ್ಲಿ ಕೇವಲ 6 ಕೋ.ರೂ. ಸಂಗ್ರಹವಾಗಿತ್ತು. 2022-23ರಲ್ಲಿ 111 ಕೋ. ರೂ.ಆದಾಯ ಬಂದಿದೆ. ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್‌ನಲ್ಲಿ ಈಗ ಶೇ.47ರಷ್ಟು ಕೊಠಡಿಗಳು ಭರ್ತಿಯಾಗುತ್ತಿವೆ. ಇದನ್ನು 2023-24ರ ಅಂತ್ಯದ ವೇಳೆಗೆ ಶೇ.75ರಷ್ಟು ಹೆಚ್ಚಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಸಿಗರಿಗೆ ರಿಯಾಯಿತಿ ಪ್ಯಾಕೇಜ್‌ಗಳು, ಹಿರಿಯ ನಾಗರಿಕರು, ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ಪ್ಯಾಕೇಜ್‌ಗಳನ್ನು ರೂಪಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಸೂಚಿಸಿದ್ದೇನೆ ಎಂದರು.
ಮಾಧ್ಯಮಗಳ ಸೃಷ್ಟಿ
ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ನೀಡಿರುವ ಹೇಳಿಕೆ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಲು ಸಚಿವ ಎಚ್.ಕೆ.ಪಾಟೀಲ್ ನಿರಾಕರಿಸಿದರು. ಹರಿಪ್ರಸಾದ್ ಏನು ಹೇಳಿ¨ªಾರೆ ಎಂಬುದನ್ನು ನೋಡಿಲ್ಲ. ಈ ಕುರಿತು ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ. ಹರಿಪ್ರಸಾದ್ ಪಕ್ಷದ ಹಿರಿಯ ನಾಯಕರು. ಅವರು ಸಾಕಷ್ಟು ಮುಖ್ಯಮಂತ್ರಿಗಳನ್ನು ಮಾಡಿ¨ªಾರೆ. ಅವರು ಅಂಥ ಹೇಳಿಕೆ ನೀಡಿರಲಾರರು. ಇದೆಲ್ಲವೂ ಮಾಧ್ಯಮಗಳ ಸೃಷ್ಟಿ ಎಂದು ಎಚ್.ಕೆ.ಪಾಟೀಲ್ ಹೇಳಿದರು.