ಚಿತ್ರದುರ್ಗ: ಜಿಲ್ಲೆಗೆ ಮಂಜೂರಾಗಿರುವ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸರ್ಕಾರ ನಿರಾಸಕ್ತಿ ತೋರಿಸುತ್ತಿರುವಹಿನ್ನೆಲೆಯಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ನಗರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆಭಿಕ್ಷೆ ಬೇಡಿ ಹಣ ಸಂಗ್ರಹಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.
ಮಂಗಳವಾರ ನಗರದ ಗಾಂಧಿ ವೃತ್ತದಿಂದ ಒನಕೆ ಓಬವ್ವ ವೃತ್ತದವರೆಗೆ ಭಿಕ್ಷಾಟನೆ ಮಾಡುವ ಮೂಲಕ ಸಂಗ್ರಹವಾದ 1886 ರೂ.ಗಳನ್ನು ಮುಖ್ಯಮಂತ್ರಿಗಳ ನಿಧಿಗೆ ಪೋಸ್ಟ್ ಮೂಲಕ ರವಾನಿಸಿದರು. ಬರಪೀಡಿತ ಹಾಗೂ ಹಿಂದುಳಿದಿರುವ ಚಿತ್ರದುರ್ಗ ಜಿಲ್ಲೆಗೆ 2013ರಲ್ಲಿಯೇ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರಾಗಿದ್ದು, ಇದಕ್ಕಾಗಿ ಜಿಲ್ಲಾಸ್ಪತ್ರೆ ಪಕ್ಕದಲ್ಲಿ 13.3 ಎಕರೆ ಭೂಮಿಯನ್ನು ಮೀಸಲಿಡಲಾಗಿದೆ. ಆದರೆ, ಸರ್ಕಾರ ಹಣ ಬಿಡುಗಡೆ ಮಾಡಿ ಕಟ್ಟಡ ಆರಂಭಿಸಲು ಮೀನಾಮೇಷ ಎಣಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು, ಸಾಕಷ್ಟು ಅಪಘಾತವಾಗುತ್ತಿವೆ. ಸಣ್ಣ ಪುಟ್ಟ ಕಾಯಿಲೆ ಹೊರತುಪಡಿಸಿ ಎಲ್ಲದಕ್ಕೂ ದೂರದ ಬೆಂಗಳೂರು, ಮಂಗಳೂರು, ಮಣಿಪಾಲ್, ದಾವಣಗೆರೆ ಖಾಸಗಿ ಆಸ್ಪತ್ರೆಗಳಿಗೆ ಓಡಾಡಬೇಕಾಗಿದೆ. ಸಕಾಲಕ್ಕೆ ಸೂಕ್ತ ಚಿಕಿತ್ಸೆ ದೊರೆಯದೆ ಸಾಕಷ್ಟು ಬಡವರ ಪ್ರಾಣಗಳು ಹೋಗಿವೆ. ಇಷ್ಟಾದರೂ ಎಚ್ಚೆತ್ತುಕೊಳ್ಳದ ಜಿಲ್ಲೆಯ ಜನಪ್ರತಿನಿಧಿ ಗಳು ಹಾಗೂ ರಾಜ್ಯ ಸರ್ಕಾರ ಜನರ ಜೀವದ ಜತೆಗೆ ಚೆಲ್ಲಾಟ ಆಡುತ್ತಿದೆ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ. ಶಿವಕುಮಾರ್ ಹೇಳಿದರು.
ಈಗಾಗಲೇ ಹಲವು ಹೋರಾಟ ಮಾಡಿದರೂ ಮಣಿಯದ ಸರ್ಕಾರದ ವಿರುದ್ಧ ಭಿಕ್ಷೆ ಬೇಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿದ್ದೇವೆ. ಮುಂದೆಯೂ ಸರ್ಕಾರ ಮಣಿಯದಿದ್ದರೆ ಇದನ್ನು ಮುಂದುವರೆಸುತ್ತೇವೆ ಎಂದು ಎಚ್ಚರಿಸಿದರು. ಈ ವೇಳೆ ಮಹಿಳಾಘಟಕದ ಅಧ್ಯಕ್ಷೆ ವೀಣಾ ಗೌರಣ್ಣ, ನಗರಾಧ್ಯಕ್ಷ ಎಂ.ತಿಪ್ಪೇಸ್ವಾಮಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಬಿ.ಅನಿಲ್, ಉಪಾಧ್ಯಕ್ಷ ಹರೀಶ್, ವಿದ್ಯಾರ್ಥಿ ಘಟಕದ ಕಾರ್ಯದರ್ಶಿ ಧನರಾಜ್, ನಗರ ಘಟಕದ ಉಪಾಧ್ಯಕ್ಷ ಓಬಳೇಶ್, ಚೌಡೇಶ್, ಎಂ.ಮಂಜುನಾಥ್, ರವಿ, ಬಿ.ಶಿವರಾಜ್, ಕರುಣಾ ಮತ್ತಿತರರು ಭಾಗವಹಿಸಿದ್ದರು.