ಸೀತೆಯನ್ನು ಹುಡುಕುವ ಕೆಲಸವನ್ನು ಶ್ರೀರಾಮನಿಗೆ ಸಿದ್ಧಿಸಿ ತೋರಿಸಿದ ಹನುಮ, ಕಲಿಯುಗದಲ್ಲೂ ಭಕ್ತರ ಕಾರ್ಯಸಿದ್ಧಿ ಆಗುವಂತೆ ಹರಸುತ್ತಿದ್ದಾನೆ. ಬೆಂಗಳೂರಿನ ಗಿರಿನಗರದ ಅವಧೂತ ದತ್ತ ಪೀಠ ಆಶ್ರಮದಲ್ಲೂ ಇಂಥ ಅಪರೂಪದ ಹನುಮನಿದ್ದು, “ಕಾರ್ಯಸಿದ್ಧಿ ಹನುಮ’ ಅಂತಲೇ ಪ್ರಸಿದ್ಧಿ. ಈ ಹನುಮನಿಗೆ ಹರಕೆ ಹೊತ್ತರೆ, ಅಂದುಕೊಂಡ ಕೆಲಸ 48 ದಿನಗಳಲ್ಲಿ ನೆರವೇರುತ್ತದೆ ಎನ್ನುವುದು ಜನರ ನಂಬಿಕೆ. ಜನರಿಂದ ಸದಾ ಗಿಜಿಗುಡುವ ಈ ದೇವಸ್ಥಾನದಲ್ಲಿ, ಹರಕೆ ಹೊತ್ತು, ತೆಂಗಿನಕಾಯಿಗಳನ್ನು ಕಟ್ಟಲಾಗುತ್ತದೆ.
ದೇವಸ್ಥಾನದ ಪರಿಸರ ಪ್ರಶಾಂತ ವಾತಾವರಣದಿಂದ ಕೂಡಿದೆ. ದೇವಸ್ಥಾನ ಪ್ರವೇಶಿಸುತ್ತಿದ್ದಂತೆಯೇ, ಬೃಹದಾಕಾರದ ಹನುಮನ ಮೂರ್ತಿ ಸ್ವಾಗತಿಸುತ್ತದೆ. ಗರ್ಭಗುಡಿಯಲ್ಲಿನ ಹನುಮಂತನ ಕೈಗಳು ನಮಸ್ಕಾರ ಮುದ್ರೆಯಲ್ಲಿದೆ. ಪ್ರಾಂಗಣದ ಸುತ್ತಲೂ ಹನುಮನ ಶಿಲ್ಪಗಳಿದ್ದು, ಪಂಚಮುಖೀ ಅಂಜನೇಯನ ವಿಶ್ವದರ್ಶನ ಹಾಗೂ ಶ್ರೀರಾಮ ಪಟ್ಟಾಭಿಷೇಕದ ಶಿಲ್ಪಗಳು ಮನಸ್ಸಿಗೆ ಮುದ ನೀಡುತ್ತವೆ. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಇಲ್ಲಿನ ಹನುಮನನ್ನು ಪ್ರತಿಷ್ಠಾಪಿಸಿದ್ದಾರೆ. ಈ ದೇವಸ್ಥಾನದ ವಿಶೇಷತೆ, ಪೂರ್ಣಫಲ ಸಮರ್ಪಣೆ. ಮನಸ್ಸಿನಲ್ಲಿ ಏನಾದರೂ ಕೋರಿಕೆ ಇದ್ದರೆ, ಅದರ ಫಲಿಸುವಿಕೆಗಾಗಿ ಹನುಮನಿಗೆ ಪೂರ್ಣಫಲವನ್ನು ಸಮರ್ಪಿಸಿ, ಹರಕೆ ಹೊರಬೇಕು.
ದೇವಸ್ಥಾನದ ಕೌಂಟರಿನಲ್ಲಿ ಸಿಪ್ಪೆಕಾಯಿಯನ್ನು ತೆಗೆದುಕೊಂಡು ರಶೀದಿ ಪಡೆದರೆ, ಕಾಯಿಯ ಮೇಲೆ ರಶೀದಿ ನಂಬರ್ ಹಾಗೂ ದಿನಾಂಕವನ್ನು ಬರೆದು ಕೊಡುತ್ತಾರೆ. ದೇವರ ಮುಂದೆ ನಿಂತು ಮನಸ್ಸಿನಲ್ಲಿರುವ ಕೋರಿಕೆಯನ್ನು ಹನುಮನ ಮುಂದಿಡಬೇಕು. ಆರ್ಚಕರು ಮಂತ್ರ ಹೇಳಿಸಿ, ಸಂಕಲ್ಪ ಮಾಡಿಸುತ್ತಾರೆ. ನಂತರ, ಸಿಪ್ಪೆ ಸಮೇತ ಇರುವ ತೆಂಗಿನಕಾಯಿಯನ್ನು ದೇಗುಲದ ಆವರಣದಲ್ಲಿ ಕಟ್ಟಬೇಕು. ದಿನವೂ ಮನೆಯಲ್ಲಿ ಕಾರ್ಯಸಿದ್ಧಿ ಹನುಮನ ಮಂತ್ರವನ್ನು ಜಪಿಸಬೇಕು.
ವಾರದಲ್ಲಿ ಎರಡು ದಿನವಾದರೂ ಈ ದೇವಸ್ಥಾನಕ್ಕೆ ಬಂದು 16 ಬಾರಿ ಪ್ರದಕ್ಷಿಣೆ ಹಾಕಬೇಕು. ಹದಿನಾರನೇ ದಿನ, ಕಟ್ಟಿದ ತೆಂಗಿನಕಾಯಿಯನ್ನು ತೆಗೆದು ದೇವರಿಗೆ ಸಮರ್ಪಿಸಿ, ಭಕ್ತರಿಗೆ ನೀಡಲಾಗುತ್ತದೆ. ಈ ಪೂರ್ಣಫಲವನ್ನು ಮನೆಗೆ ಕೊಂಡೊಯ್ದು, ಇದರಿಂದ ಸಿಹಿತಿಂಡಿಯನ್ನು ತಯಾರಿಸಿ, ಮನೆಮಂದಿಯೆಲ್ಲ ಪ್ರಸಾದವಾಗಿ ಸ್ವೀಕರಿಸಬೇಕು. ಹೀಗೆ ಮಾಡಿದರೆ, ಅಂದುಕೊಂಡ ಕೆಲಸ ನೆರವೇರುತ್ತದೆ ಎನ್ನುವುದು ನಂಬಿಕೆ. ಇಲ್ಲಿ ಹರಕೆ ತೀರಿಸಿ, ಒಳಿತನ್ನು ಕಂಡ ಉದಾಹರಣೆಗಳು ಸಾಕಷ್ಟಿವೆ. ಕಂಕಣಭಾಗ್ಯ, ಸಂತಾನ ಭಾಗ್ಯ, ಕೆಲಸ, ರೋಗರುಜಿನಗಳಿಂದ ಮುಕ್ತಿ- ಹೀಗೆ ವರವಿತ್ತ ಹನುಮನ ಮಹಿಮೆ ಅಪಾರ.
ದರುಶನಕೆ ದಾರಿ…: ಬೆಂಗಳೂರಿನ ಗಿರಿನಗರದ 1ನೇ ಫೇಸ್‌ನಲ್ಲಿ, 3ನೇ “ಸಿ’ ಮುಖ್ಯ ರಸ್ತೆಯಲ್ಲಿ ಕಾರ್ಯಸಿದ್ಧಿ ಆಂಜನೇಯ ಸ್ವಾಮಿಯ ದೇವಸ್ಥಾನವಿದೆ.
* ಪ್ರಕಾಶ್ ಕೆ. ನಾಡಿಗ್, ತುಮಕೂರು