ಮಡಿಕೇರಿ: ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಜ್ಞಾನ ದೇಗುಲವನ್ನೇ ಬಿಡದ ದುಷ್ಕರ್ಮಿಗಳು ಶಾಲೆಯ ಬೀಗ ಹೊಡೆದು ಒಳ ನುಗ್ಗಿದಲ್ಲದೆ ಮೋಜು ಮಸ್ತಿ ಮಾಡಿ ಅನೈತಿಕ ಚಟುವಟಿಕೆ ನಡೆಸಿ ಪರಾರಿಯಾಗಿರುವ ಘಟನೆ ನಾಪೋಕ್ಲುವಿನಲ್ಲಿ ಬೆಳಕಿಗೆ ಬಂದಿದೆ.
ನಾಪೋಕ್ಲು ಹಳೇತಾಲೂಕು ಮುಖ್ಯ ರಸ್ತೆಯಲ್ಲಿರುವ ಕರ್ನಾಟಕ ಪ್ರಾಥಮಿಕ ಪಬ್ಲಿಕ್ ಶಾಲೆಯ ಕೊಠಡಿಯ ಬೀಗ ಹೊಡೆದು ಒಳನುಗ್ಗಿದ ಕಿಡಿಗೇಡಿಗಳು ಅನೈತಿಕ ಚಟುವಟಿಕೆ ನಡೆಸಿದ ಕುರುಹುಗಳು ಪತ್ತೆಯಾಗಿವೆ.
ಬುಧವಾರ ರಾತ್ರಿ ಕೃತ್ಯ ನಡೆದಿರಬಹುದು ಎನ್ನಲಾಗಿದ್ದು, ಗುರುವಾರ ಬೆಳಗ್ಗೆ ಮಕ್ಕಳು ಶಾಲೆಗೆ ಬಂದಾಗ ಶಾಲೆಯ ಒಳಾಂಗಣದ ಕೊಠಡಿಯ ಬೀಗ ಹೊಡೆದಿರುವುದು ಗೋಚರಿಸಿದೆ. ಈ ಬಗ್ಗೆ ಮಕ್ಕಳು ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಶಿಕ್ಷಕರು ಪರಿಶೀಲಿಸಿದಾಗ ಶಾಲೆಯ ಮೇಲ್ಚಾವಣಿಯಲ್ಲಿ ಮಹಿಳೆ ಮತ್ತು ಗಂಡಸರ ಬಟ್ಟೆಗಳು ಹಾಗೂ ಧೂಮಪಾನ ಮಾಡಿ ಬಿಸಾಡಿದ ಸಿಗರೇಟ್ ತುಂಡುಗಳು ಪತ್ತೆಯಾಗಿವೆ.
ಘಟನೆ ಸಂಬಂಧ ಶಾಲೆಯ ಮುಖ್ಯೋಪಾಧ್ಯಾಯರು ನಾಪೋಕ್ಲು ಠಾಣೆಗೆ ನೀಡಿದ ದೂರಿನ ಹಿನ್ನಲೆ ಸ್ಥಳಕ್ಕೆ ಧಾವಿಸಿದ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.