ವಾಷಿಂಗ್ಟನ್ : ಕೋವಿಡ್ ನಿಂದ ಹೊರ ಬರಲು ಮತ್ತು ಸದ್ಯದ ಕಷ್ಟದಿಂದ ಮುಕ್ತಿ ಪಡೆಯಲು ಅಮೆರಿಕಾ ದೇಶವು ತ್ವರಿತವಾಗಿ ಸಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಸದ್ಯ ಸಂಶೋಧನಾ ವರದಿಯೊಂದನ್ನು ಬಿಡುಗಡೆ ಮಾಡಿದೆ. ಸಂಪೂರ್ಣ ಲಸಿಕೆ ಹಾಕಿದ ಜನರು ಇನ್ನು ಮುಂದೆ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (Disease Control and Prevention) ತಿಳಿಸಿದೆ.
ಗುರುವಾರ ಈ ಬಗ್ಗೆ ಪ್ರಕಟಣೆ ಹೊರಡಿಸಲಾಗಿದ್ದು, ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಮಾಸ್ಕ್ ಧರಿಸದೆ ಶ್ವೇತಭವನದ ರೋಸ್ ಗಾರ್ಡನ್ ನಲ್ಲಿ ವರದಿಗಾರರ ಮುಂದೆ ಹಾಜರಾಗಿದ್ದರು.
ಈ ಬಗ್ಗೆ ಮಾತನಾಡಿರುವ ಬೈಡನ್, ಇದು ಒಂದು ದೊಡ್ಡ ಮೈಲಿಗಲ್ಲು ಎಂದು ನಾನು ಭಾವಿಸುತ್ತೇನೆ. ಹಲವು ಅಮೆರಿಕನ್ನರಿಗೆ ನಾವು ಲಸಿಕೆ ಹಾಕುವಲ್ಲಿ ಯಶಸ್ವಿಯಾಗಿದ್ದೇವೆ. ಇದರ ಫಲವಾಗಿ ಇದು ಸಾಧ್ಯವಾಗಿದೆ ಎಂದಿದ್ದಾರೆ. ಮತ್ತೊಂದು ಮಾಹಿತಿ ನೀಡಿರುವ ಬೈಡನ್, ಲಸಿಕೆ ಹಾಕಿಸಿಕೊಂಡ ಜನರು ಕೋವಿಡ್ ವಿರುದ್ಧ ಹೋರಾಡಲು ಸದೃಢರಾಗಿದ್ದಾರೆ ಎಂದಿದ್ದಾರೆ.
ಅಗತ್ಯವಿರುವ ಸ್ಥಳಗಳನ್ನು ಹೊರತುಪಡಿಸಿ ಉಳಿದ ಕಡೆ ಮಾಸ್ಕ್ ಕಡ್ಡಾಯವಲ್ಲ. ಆದರೆ ಈ ರೀತಿ ಮಾಸ್ಕ್ ಇಲ್ಲದೆ ಓಡಾಡಬೇಕು ಅಂದರೆ ಸಂಪೂರ್ಣವಾಗಿ ಕೋವಿಡ್ ಲಸಿಕೆಯನ್ನು ಪಡೆದಿರಬೇಕು ಎಂದು ಸಿಡಿಸಿ ತನ್ನ ಇತ್ತೀಚಿನ ಮಾರ್ಗಸೂಚಿಗಳಲ್ಲಿ ತಿಳಿಸಿದೆ.