ಧಾರವಾಡ: ಜಿಲ್ಲೆಯಲ್ಲಿ ಅನ್‌ಲಾಕ್‌ನ 3ನೇ ಹಂತದ ಸಡಿಲಿಕೆಯಿಂದ ಬಹುತೇಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದ್ದು, ಸೋಮವಾರದಿಂದ ಮಾಲ್, ದೇವಸ್ಥಾನಗಳ ಬಾಗಿಲು ತೆರೆಯಲಿವೆ. ರಾಜ್ಯ ಸರಕಾರ ಮಾರ್ಗಸೂಚಿ ಅನ್ವಯ ಡಿಸಿ ನಿತೇಶ ಪಾಟೀಲ ರವಿವಾರ ಆದೇಶ ಹೊರಡಿಸಿದ್ದು, ಮಾರ್ಗಸೂಚಿ ಪ್ರಕಟಿಸಲಾಗಿದೆ.
ಸರ್ಕಾರಿ/ ಖಾಸಗಿ ಕಚೇರಿ, ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಶೇ. 100 ಸಿಬ್ಬಂದಿ ಬಳಸಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ತಿಂಗಳುಗಟ್ಟಲೇ ಬಂದ್ ಇದ್ದ ಮಾಲ್‌ಗಳು ತೆರೆಯಲಿವೆ. ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಅವಕಾಶವಿದ್ದು, ಧಾರ್ಮಿಕ ಸೇವೆಗೆ ಅವಕಾಶವಿಲ್ಲ. ಮದುವೆ-ಕೌಟುಂಬಿಕ ಶುಭ ಕಾರ್ಯಗಳಿಗೆ 100 ಜನ ಸೇರಬಹುದು. ಅಂತ್ಯಸಂಸ್ಕಾರಕ್ಕೆ 20 ಜನ ಭಾಗವಹಿಸಬಹುದು. ಈಜುಗೊಳಗಳಲ್ಲಿ ಸ್ಪರ್ಧಾಳುಗಳಿಗೆ ಮಾತ್ರ ಅವಕಾಶ ಇರಲಿದೆ. ಸಾಮಾಜಿಕ, ಧಾರ್ಮಿಕ, ರಾಜಕೀಯ ಸಭೆ- ಸಮಾರಂಭ, ಪ್ರತಿಭಟನೆಗಳಿಗೆ ಅವಕಾಶವಿಲ್ಲ. ಶಾಲೆ- ಕಾಲೇಜು, ಶಿಕ್ಷಣ ಸಂಸ್ಥೆಗಳು, ಚಿತ್ರಮಂದಿರಗಳಿಗೆ ಎಂದಿನಂತೆ ನಿರ್ಬಂಧ ವಿಧಿಸಲಾಗಿದೆ. ಬಾರ್‌ಗಳನ್ನು ತೆರೆಯಲು ಅವಕಾಶವಿದ್ದು, ಪಬ್‌ಗಳಿಗೆ ನಿರ್ಬಂಧವಿದೆ. ವಾರಾಂತ್ಯ ಕರ್ಫ್ಯೂ ತೆಗೆದು ಹಾಕಲಾಗಿದ್ದು, ಪ್ರತಿದಿನ ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಮುಂದುವರಿಸಲಾಗಿದೆ.
ಇಂದಿನಿಂದಮಠ-ಮಂದಿರಗಳುಸಾರ್ವಜನಿಕರಿಗೆಮುಕ್ತ
ಹುಬ್ಬಳ್ಳಿ: ರಾಜ್ಯಾದ್ಯಂತ ಕೊರೊನಾ ಲಾಕ್‌ಡೌನ್ ನಿಂದ ಕಳೆದ ಎರಡೂವರೆ ತಿಂಗಳಿಂದ ಬಂದ್ ಆಗಿದ್ದ ಎಲ್ಲ ಮಠ-ಮಂದಿರಗಳು, ಧಾರ್ಮಿಕ ಕ್ಷೇತ್ರಗಳು ಸೋಮವಾರದಿಂದ ಸಾರ್ವಜನಿಕರ ದರ್ಶನಕ್ಕೆ ಬಾಗಿಲು ತೆರೆದುಕೊಳ್ಳಲಿವೆ.
ಇಲ್ಲಿನ ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿ ಮಠ, ಮೂರು ಸಾವಿರ ಮಠ, ಶಿರಡಿ ಸಾಯಿ ಮಂದಿರ, ರಾಯಪುರ ಇಸ್ಕಾನ್ ದೇವಸ್ಥಾನ, ಇಂಡಿ ಪಂಪ್ ಫತೇಶಾವಲಿ ದರ್ಗಾ ಸೇರಿದಂತೆ ನಗರದ ಎಲ್ಲ ಧಾರ್ಮಿಕ ಕ್ಷೇತ್ರಗಳು ಬಾಗಿಲು ತೆರೆಯಲಿವೆ. ಎಲ್ಲ ದೇವಸ್ಥಾನ, ಮಠ- ಮಂದಿರಗಳಲ್ಲಿ ಸರಕಾರದ ನಿಯಮಾವಳಿಗಳನ್ನು ಚಾಚೂ ತಪ್ಪದೇ ಪಾಲಿಸಲಾಗುವುದು, ಸಾಮಾಜಿಕ ಅಂತರ, ಸ್ಯಾನಿಟೈಸರ್ ಸೇರಿದಂತೆ ಎಲ್ಲ ನಿಯಮಾವಳಿಗಳನ್ನು ಪಾಲಿಸಲಾಗುವುದು ಎಂದು ಶ್ರೀ ಸಿದ್ದಾರೂಢಸ್ವಾಮಿ ಮಠದ ಆಡಳಿತ ಮಂಡಳಿ ಹಾಗೂ ಮೂರುಸಾವಿರ ಮಠದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.