Advertisement

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಾಯಿಗೆ ಫ‌ುಲ್‌ ಟಿಕೆಟ್‌!

11:20 AM Feb 03, 2018 | Team Udayavani |

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ ಗಳಲ್ಲಿ ಪ್ರಯಾಣಿಕರು ಈಗ ನಾಯಿ, ಬೆಕ್ಕು, ಮೊಲ ಮತ್ತಿತರ ಸಾಕುಪ್ರಾಣಿಗಳನ್ನು ಕೊಂಡೊಯ್ಯಲು ಅವಕಾಶ ಮಾಡಿಕೊಡಲಾಗಿದೆ. ನಾಯಿಗೆ ಪ್ರಯಾಣ ದರ ವಯಸ್ಕರರಿಗೆ ವಿಧಿಸುವ ಟಿಕೆಟ್‌ನಷ್ಟು ಹಾಗೂ ಬೆಕ್ಕು, ಮೊಲದಂತಹ ಸಣ್ಣ ಪ್ರಾಣಿಗಳಿಗೆ ಮಕ್ಕಳ ಟಿಕೆಟ್‌ ದರ ನಿಗದಿಪಡಿಸಲಾಗಿದೆ. ಆದರೆ, ಈ ಸಾಕುಪ್ರಾಣಿಗಳನ್ನು ತೆಗೆದುಕೊಂಡು ಹೋಗುವ ಜವಾಬ್ದಾರಿ ಆ ಪ್ರಾಣಿಗಳ ವಾರಸುದಾರರದ್ದಾಗಿದೆ ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟಪಡಿಸಿದೆ. 

Advertisement

ಸಾರ್ವಜನಿಕ ಪ್ರಯಾಣಿಕರ ಲಗೇಜು/ ಸರಕುಗಳನ್ನು ನಿಗಮವು ಐದು ಪ್ರಕಾರಗಳಲ್ಲಿ ವರ್ಗೀಕರಣ ಮಾಡಿದ್ದು, ಹಗುರ ಲಗೇಜು, ಭಾರದ ಲಗೇಜು, ಸಾಗಿಸಲು ಸಾಧ್ಯವಿರುವ ವಸ್ತುಗಳು, ಸಾಕುಪ್ರಾಣಿಗಳು ಮತ್ತು ರೇಷ್ಮೆ ಗೂಡು ಎಂದು ವಿಂಗಡಿಸಲಾಗಿದೆ. ಅದರಲ್ಲಿ ನಾಯಿಯನ್ನು ಒಬ್ಬ ವಯಸ್ಕ ಪ್ರಯಾಣಿಕರಂತೆ ಪರಿಗಣಿಸಿ ಪೂರ್ಣ (ವಯಸ್ಕ)ದರ, ಮೊಲ, ನಾಯಿಮರಿ, ಬೆಕ್ಕು, ಪಕ್ಷಿ, ಪಂಜರದಲ್ಲಿನ ಪಕ್ಷಿ ಇತ್ಯಾದಿಗಳಿಗೆ ಅರ್ಧ (ಮಕ್ಕಳ) ದರ ವಿಧಿಸಲಾಗುವುದು ಎಂದು ತಿಳಿಸಿದೆ.

ಒಬ್ಬ ವ್ಯಕ್ತಿ ಒಂದು ಬಸ್ಸಿನಲ್ಲಿ ಒಂದು ನಾಯಿ ಅಥವಾ ನಾಯಿ ಮರಿಗಿಂತ ಹೆಚ್ಚು ಕೊಂಡೊಯ್ಯಲು ಅವಕಾಶ ಇಲ್ಲ. ಕೋಳಿ ಮರಿಗಳು ಒಂದು ಪಂಜರದಲ್ಲಿ ಇದ್ದರೆ, ಒಂದು ಯೂನಿಟ್‌ ಎಂದು ಪರಿಗಣಿಸಲಾಗುವುದು. ಈ ಸಾಕು ಪ್ರಾಣಿಗಳಿಗೆ ಪ್ರಯಾಣಿಕರು ಅಥವಾ ನಿಗಮದ ಸಿಬ್ಬಂದಿಗೆ ಅಥವಾ ಲಗೇಜ್‌ಗೆ ಹಾನಿಯಾಗದಂತೆ ವಾರಸುದಾರರು ಕಾಳಜಿ ವಹಿಸತಕ್ಕದ್ದು ಎಂದು ನಿಗಮದ ಆದೇಶದಲ್ಲಿ ಸೂಚಿಸಲಾಗಿದೆ. 

ಹಿಂದೆಯೂ ಅವಕಾಶ ಇತ್ತು: ಸಚಿವ ಸಾಕುಪ್ರಾಣಿಗಳ ಸಾಗಾಣಿಕೆಗೆ ಅವಕಾಶ ಮಾಡಿಕೊಟ್ಟಿರುವುದು ಇದೇ ಮೊದಲಲ್ಲ. ಈ ಹಿಂದೆಯೇ ಇದಕ್ಕೆ ಅವಕಾಶ ಇತ್ತು. ಗ್ರಾಮೀಣ ಭಾಗಗಳಲ್ಲಿ ಕುರಿ, ಕೋಳಿಗಳನ್ನು ಸಾಗಿಸುವುದನ್ನು ಈಗಲೂ ಕಾಣಬಹುದು. ಈಗ ಕೇವಲ ದರ ಪರಿಷ್ಕರಣೆ ಮಾಡಲಾಗಿದೆ ಅಷ್ಟೇ ಎಂದು ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ  ಸ್ಪಷ್ಟಪಡಿಸಿದ್ದಾರೆ. ಇನ್ನು ಪ್ರತಿ ಪ್ರಯಾಣಿಕರು 30 ಕೆ.ಜಿ. ತೂಕದವರೆಗಿನ ಲಗೇಜನ್ನು ಉಚಿತವಾಗಿ ಕೊಂಡೊಯ್ಯಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಯಾವೊಂದು ಗುಂಪಿನಲ್ಲಿ ಒಂದು ಬ್ಯಾಗ್‌ ಅಥವಾ ಬಂಡಲ್‌ ಲಗೇಜ್‌ ಕೊಂಡೊಯ್ಯುತ್ತಿದ್ದರೆ, ಆ ಇಡೀ ಗುಂಪು ಒಂದು ಲಗೇಜು ಮಾತ್ರ ಉಚಿತವಾಗಿ ಕೊಂಡೊಯ್ಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next