ಉಡುಪಿ: ಮದುವೆ ಸಮಾರಂಭಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಿದ್ದು, ಆದರೆ ಕೇವಲ 200 ಜನರು ಮಾತ್ರ ಸೇರಬೇಕು ಎಂದು ಷರತ್ತು ವಿಧಿಸಿದೆ. ಆದರೆ ಮದುವೆ ಸಮಾರಂಭಗಳಲ್ಲಿ 300-400 ಜನರು ಸೇರುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಇಂತಹ ಘಟನೆಗಳು ಕಂಡುಬಂದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ಕೋವಿಡ್ ಸ್ಥಿತಿಗತಿಯ ಬಗ್ಗೆ ಮಾತನಾಡಿರುವ ಅವರು, ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸುವ ಮೂಲಕ ಸಾರ್ವಜನಿಕರ ಅನಾರೋಗ್ಯಕ್ಕೆ ಕಾರಣವಾಗಬೇಡಿ ಎಂದಿದ್ದಾರೆ.
ಮದುವೆ ಕಾರ್ಯಕ್ರಮಗಳಲ್ಲಿ 200ಕ್ಕೂ ಹೆಚ್ಚಿನ ಜನರು ಭಾಗವಹಿಸುತ್ತಿರುವ ಬಗ್ಗೆ ವರದಿಯಾಗುತ್ತಿದೆ, ಮೆಹಂದಿ ಮುಂತಾದ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆಯೂ ನಮ್ಮ ಅರಿವಿಗೆ ಬಂದಿದೆ. ಆದರೆ ಸಾರ್ವಜನಿಕ ಹಿತದೃಷ್ಟಿಯಿಂದ ಇದು ಸೂಕ್ತವಲ್ಲ ಎಂದಿದ್ದಾರೆ.
ಇದನ್ನೂ ಓದಿ:ಕರವಸ್ತ್ರ, ಬಟ್ಟೆಯನ್ನೂ ಮಾಸ್ಕ್ ಎಂದೇ ಪರಿಗಣಿಸಬೇಕು: ಬಿಬಿಎಂಪಿ ಆಯುಕ್ತರು
ಮದುವೆ ಕಾರ್ಯಕ್ರಮಗಳಿಗೆ ತಹಶೀಲ್ದಾರರು ಅನುಮತಿ ನೀಡುವಾಗ ನಿಗಾ ಇಡಲು ಓರ್ವ ಅಧಿಕಾರಿಯನ್ನು ನೇಮಿಸಿರುತ್ತಾರೆ. ಒಂದು ವೇಳೆ ನಿಯಮ ಉಲ್ಲಂಘನೆಯಾದಲ್ಲಿ ಆ ಅಧಿಕಾರಿಯ ಮೇಲೂ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಸಿ ಹೇಳಿದ್ದಾರೆ.
ಮಾಸ್ಕ್ ಕಡ್ಡಾಯ
ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಳ್ಳಬೇಕು. ಅಂಗಡಿಗಳಲ್ಲಿ ವ್ಯವಹಾರ ನಡೆಸುವಾಗ ಮಾಸ್ಕ್ ಕಡ್ಡಾಯ. ವ್ಯಾಪಾರಿಗಳು ಮಾಸ್ಕ್ ಹಾಕದೇ ವ್ಯಾಪಾರ ಮಾಡಿದರೆ ಅಂತಹವರ ಪರವಾನಿಗೆ ರದ್ದು ಮಾಡಲಾಗುವುದು ಎಂದು ಡಿಸಿ ಹೇಳಿದರು.