Advertisement

ಸಿಎಂ ಎದುರು ಸಮಸ್ಯೆಗಳ ಸುರಿಮಳೆ

07:52 PM Jul 29, 2021 | Team Udayavani |

ವರದಿ: ನಾಗರಾಜ ಹರಪನಹಳ್ಳಿ

Advertisement

ಕಾರವಾರ: ಉತ್ತರ ಕನ್ನಡ ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊಟ್ಟ ಮೊದಲ ಪ್ರವಾಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಮೇಲೆ ಅವರ ಮೊದಲ ಪ್ರವಾಸ ಸಹ ಉತ್ತರ ಕನ್ನಡ ಜಿಲ್ಲೆಗೆ ಎಂಬುದು ಗಮನಾರ್ಹ.

ನೆರೆಯಿಂದ ನಾಲ್ಕು ದಿನದ ಹಿಂದೆ ಅಕ್ಷರಶಹ ನಲುಗಿರುವ ಜಿಲ್ಲೆಯ ನದಿ ದಂಡೆ ಗ್ರಾಮಗಳ 5000 ಕುಟುಂಬಗಳು ದುಃಖದಲ್ಲಿವೆ. ಮನೆ ಸೇರಿದಂತೆ ಬದುಕನ್ನು ನದಿ ದಂಡೆ ಜನರು ಕಳೆದುಕೊಂಡಿದ್ದಾರೆ. 2019-20ರಲ್ಲಿ ಬಂದ ನೆರೆಗೆ ಪರಿಹಾರ ಸಿಗದ ಹಲವು ಕುಟುಂಬಗಳಿವೆ. ನೂರಾರು ಮನೆಗಳನ್ನು ನದಿ ದಡದಿಂದ ಎತ್ತರದ ಸ್ಥಳಕ್ಕೆ ಸ್ಥಳಾಂತರಿಸಿ ಅವರಿಗೆ ಹೊಸ ಮನೆಗಳನ್ನು ನಿರ್ಮಿಸಿಕೊಡುವ ಬಹುದೊಡ್ಡ ಸವಾಲು ನೂತನ ಮುಖ್ಯಮಂತ್ರಿ ಮುಂದಿದೆ.

ಬಾಳೆಗುಳಿ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಅರಬೈಲ್‌ ಬಳಿ ಕುಸಿದಿದೆ. ಕೈಗಾ ಇಳಕಲ್‌, ಅಣಶಿ ಖಾನಾಪುರ, ಕುಮಟಾ ಶಿರಸಿ ರಾಜ್ಯ ಹೆದ್ದಾರಿಗಳು ಕ್ರಮವಾಗಿ ಕಳಚೆ, ಚಾಪೋಲಿ, ಉಪ್ಪಿನಪಟ್ಟಣ ಬಳಿ ಸಮಸ್ಯೆ ಎದುರಿಸುತ್ತಿವೆ. ರಸ್ತೆಗಳನ್ನು ಪುನಃ ನಿರ್ಮಿಸುವ ಬಹುದೊಡ್ಡ ಸವಾಲು ಬಸವರಾಜ ಬೊಮ್ಮಾಯಿ ಎದುರು ಇದೆ. ಇನ್ನು ಗುಳ್ಳಾಪುರ ಸೇತುವೆ ಸೇರಿದಂತೆ 30 ಸೇತುವೆಗಳು ಕೊಚ್ಚಿಹೋಗಿವೆ. 500 ಹೆಕ್ಟೇರ್‌ಗೂ ಮಿಕ್ಕಿ ಭೂಮಿ ನೆರೆ ಹಾವಳಿಗೆ ತುತ್ತಾಗಿದೆ. ಇವುಗಳಿಗೆ ವಿಶೇಷ ಅನುದಾನ ಘೋಷಣೆಯನ್ನು ಜಿಲ್ಲೆ ಎದುರು ನೋಡುತ್ತಿದೆ. ಜೊತೆಗೆ ಈಗಾಗಲೇ ಮುಗಿದ ಕಾಮಗಾರಿಗಳಿಗೆ ಚಾಲನೆ ಹಾಗೂ ಯಡಿಯೂರಪ್ಪ ಅವರ ಕಾಲದಲ್ಲಿ ಮಂಜೂರಾದ ಕೋಟ್ಯಾಂತರ ರೂ. ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಬೇಕಿದೆ.

ಪ್ರಮುಖ ಸವಾಲುಗಳು: ಉತ್ತರ ಕನ್ನಡ ಜಿಲ್ಲೆ 12 ತಾಲೂಕುಗಳಿರುವ ದೊಡ್ಡ ಜಿಲ್ಲೆ. ಬೆಳಗಾವಿ ಜಿಲ್ಲೆಯನ್ನು ಬಿಟ್ಟರೆ ಅತೀ ದೊಡ್ಡ ಭೌಗೋಳಿಕವಾಗಿ ಸಹ ಅತೀ ಹೆಚ್ಚು ವಿಸ್ತೀರ್ಣ ಹಾಗೂ ವೈವಿಧ್ಯತೆ ಹೊಂದಿರುವ ಜಿಲ್ಲೆ. ದೊಡ್ಡ ಜಿಲ್ಲೆಯನ್ನು ವಿಭಜಿಸಿ ಎರಡು ಜಿಲ್ಲೆಯನ್ನಾಗಿಸಬೇಕೆಂಬ ಸವಾಲು ಸಹ ನೂತನ ಮುಖ್ಯಮಂತ್ರಿಯ ಮುಂದಿದೆ. ಆಡಳಿತಾತ್ಮಕ ಅನುಕೂಲಕ್ಕಾಗಿ ಜಿಲ್ಲೆಯನ್ನು ಎರಡಾಗಿಸಬೇಕಿದೆ. ಇದಕ್ಕೆ ಬೇಕಾದ ಪೂರ್ವ ತಯಾರಿ ದಶಕದಿಂದ ನಡೆದಿದೆ. ನೂತನ ಜಿಲ್ಲೆಯ ಘೊಷಣೆ ಬಾಕಿಯಿದ್ದು ಅದು ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ ಆಗಬಹುದೇ ಎಂಬ ಪ್ರಶ್ನೆಯಿದೆ.

Advertisement

ಇನ್ನು ಬಂದರುಗಳು ನಿರ್ಮಾಣದಲ್ಲಿ ವಿವಾದಗಳು ಎದ್ದಿವೆ. ಹೊನ್ನಾವರ ವಾಣಿಜ್ಯ ಬಂದರು ವಿವಾದ, ಕಾರವಾರ ಬಂದರು ಎರಡನೇ ಹಂತದ ವಿಸ್ತರಣೆ, ಬೇಲೆಕೇರಿ ಬಂದರು ನಿರ್ಮಾಣ ಹಾಗೂ ಅಲಗೇರಿ ಬಳಿ ನೂತನ ನಾಗರಿಕ ವಿಮಾನ ನಿಲ್ದಾಣ ಕಾರ್ಯ ಎಲ್ಲವೂ ಹೀಗೆ ಸಾಲು ಸಾಲು ಸಮಸ್ಯೆಗಳಿವೆ. ಇವುಗಳನ್ನು ಅತ್ಯಂತ ಚಾಣಕ್ಷತನದಿಂದ ನಿರ್ವಹಿಸಬೇಕಿದೆ. ಕೆಲ ವಿವಾದಗಳು ಅನಗತ್ಯವಾಗಿ ಹುಟ್ಟಿಕೊಂಡವುಗಳಿದ್ದು, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಹಲವು ಅಭಿವೃದ್ಧಿ ಕಾರ್ಯಗಳಿಗೆ ಪರಿಸರದ ನೆಪದಲ್ಲಿ ಹೊರಗಿನವರು, ಒಳಗಿನವರು ಮುಳ್ಳಾಗಿದ್ದಾರೆ. ಕೆಲ ಕುಡಿಯುವ ನೀರಿನ ಯೋಜನೆಗಳಿಗೆ ಸ್ವಪಕ್ಷೀಯರೇ ಅಡ್ಡಿಯಾಗಿದ್ದಾರೆ. ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವ ಸವಾಲು ಇದೆ. ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗದ ಯೋಜನೆ 30 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಅಟಲ್‌ ಬಿಹಾರಿ ವಾಜಪೇಯಿ ಅಡಿಗಲ್ಲು ಇಟ್ಟ ಯೋಜನೆಯನ್ನು ಬಿಜೆಪಿ ಸರ್ಕಾರ ಅನುಷ್ಟಾನ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಹುಬ್ಬಳ್ಳಿ ಮೂಲದವರೇ ಮುಖ್ಯಮಂತ್ರಿಯಾಗಿದ್ದು, ಈಗ ಅತೀ ದೊಡ್ಡ ಸವಾಲನ್ನು ನೂತನ ಮುಖ್ಯಮಂತ್ರಿ ಎದುರಿಸುತ್ತಿದ್ದಾರೆ.

ನೂತನ ಅರಣ್ಯ ಪರಿಸರ ನೀತಿ ಬಳಸಿ ರೈಲು ಯೋಜನೆಯ ಅನುಷ್ಠಾನದ ಸವಾಲು ಇದೆ. ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶಗಳಿವೆ. ಪ್ರವಾಸಿತಾಣಗಳಿಗೆ ರಸ್ತೆ ಸಹ ಮಾಡಲು ಬಿಡದ ಮನಸುಗಳನ್ನು ಕಾನೂನಿ ಅಡಿ ಬಂಧಿಸಿ, ಕೆಲಸ ಮಾಡಬೇಕಾದ ತುರ್ತು ಸನ್ನಿವೇಶ ಈಗ ನಿರ್ಮಾಣವಾಗಿದೆ. ಯೋಜನೆಗಳಿಗೆ ವೈಜ್ಞಾನಿಕ ಕಾರಣ ನೀಡದೆ ಅಡ್ಡಿ ಮಾಡುವವರನ್ನು ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಮಾಡದಿದ್ದರೆ, ಜಿಲ್ಲೆ ಇನ್ನು ಕತ್ತಲೆಯಲ್ಲೇ ಉಳಿಯಬೇಕಿದೆ. ಶಾಪಗ್ರಸ್ತ ಕನ್ಯೆಯಂತಿರುವ ಜಿಲ್ಲೆಗೆ ನೂತನ ಮುಖ್ಯಮಂತ್ರಿಯ ಕರುಣೆಯ ಕಣ್ಣು ಬೀಳಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next