Advertisement

ಕೃಷಿ ಮಾಡುವ ಮೊದಲು ಸಂಪೂರ್ಣ ಮಾಹಿತಿ ಅಗತ್ಯ: ನಳಿನಿ ಪ್ರದೀಪ್‌ ರಾವ್‌

08:27 PM Jun 10, 2019 | Sriram |

ಉಡುಪಿ: ರೈತರು ಯಾವುದೇ ಕೃಷಿ ಮಾಡುವ ಮೊದಲು ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಅಳವಡಿಸಿಕೊಂಡಾಗ ಉತ್ತಮ ಇಳುವರಿ ಪಡೆದು ರೈತರ ಸ್ವಯಂ ಅಭಿವೃದ್ಧಿ ಜತೆಗೆ ದೇಶದ ಅಭಿವೃದ್ಧಿ ಸಾಧ್ಯ ಎಂದು ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌ ಹೇಳಿದರು.

Advertisement

ಜಿ.ಪಂ., ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು, ಕೃಷಿ ಸಂಘ ಪೆರಂಪಳ್ಳಿ ಹಾಗೂ ಕೆಥೋಲಿಕ್‌ ಸಭಾ ಪೆರಂಪಳ್ಳಿ ಘಟಕದ ಸಂಯುಕ್ತ ಆಶ್ರಯದಲ್ಲಿ ಪೆರಂಪಳ್ಳಿ ಚರ್ಚ್‌ ಸಭಾಭವನದಲ್ಲಿ ನಡೆದ ಉಡುಪಿ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯ ಪ್ರತಿಯೊಂದು ಭಾಗದಲ್ಲೂ ಕೃಷಿ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಗಳು ನಡೆದರೆ ಆಯಾ ಭಾಗದಲ್ಲಿರುವ ರೈತರಿಗೆ ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಕೃಷಿ ಇಲಾಖೆಯಿಂದ ರೈತರಿಗೆ ಕೊಡ ಮಾಡುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ರೈತರು ಕೃಷಿ ಮಾಹಿತಿ ಆಧಾರಿತ ಸಭೆಗಳಲ್ಲಿ ಭಾಗವಹಿಸುವ ಜತೆಗೆ ಇಲಾಖೆಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡಾಗ ಕೃಷಿಯಲ್ಲಿ ಅಭಿವೃದ್ಧಿ ಕಾಣಬಹುದು ಎಂದು ಅವರು ಹೇಳಿದರು.

ಉಡುಪಿ ಜಿಲ್ಲಾ ಕೃಷಿ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಸಮಗ್ರ ಕೃಷಿ ಬಗ್ಗೆ ಮಾಹಿತಿ ನೀಡಿ, ರೈತರು ಕೃಷಿ ಯಲ್ಲಿ ಮಾಡುವ ಸಣ್ಣ ತಪ್ಪಿನಿಂದ ದೊಡ್ಡ ಪ್ರಮಾಣದ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದ್ದು, ತಾವು ಮಾಡುವ ಕೃಷಿ ಬಗ್ಗೆ ಸರಿಯಾದ ಮಾಹಿತಿ ಪಡೆದು ಕೃಷಿ ಮಾಡಿದಾಗ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದರು.

ಪೆರಂಪಳ್ಳಿ ಫಾತಿಮಾ ಮಾತೆ ದೇವಾಲಯದ ಧರ್ಮಗುರು ರೆ| ಫಾ| ಅನಿಲ್‌ ಡಿ’ಸೋಜಾ ಆಶೀರ್ವಚನಗೈದರು. ನಗರಸಭಾ ಸದಸ್ಯೆ ಸೆಲಿನ್‌ ಕರ್ಕಡ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕೃಷಿ ಮಾಹಿತಿ ಸಂಚಿಕೆ ಯನ್ನು ಅನಾವರಣಗೊಳಿಸಲಾಯಿತು.

Advertisement

ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್‌, ಉಡುಪಿ ತಾ.ಪಂ. ಉಪಾಧ್ಯಕ್ಷ ರಾಜೇಂದ್ರ ಪಿ., ಸಸ್ಯರೋಗ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ಡಾ| ಸೀಮಾ ಎಂ. ನಾಯ್ಕ, ಬ್ರಹ್ಮಾವರ ಸಸ್ಯರೋಗ ಶಾಸ್ತ್ರದ ಸಹ ಸಂಶೋಧಕ ಡಾ| ಸಂತೋಷ್‌, ಉಡುಪಿ ಸಹಾಯಕ ಕೃಷಿ ನಿರ್ದೇಶಕ ಮೋಹನ್‌ರಾಜ್‌, ಸಹಾಯಕ ತೋಟಗಾರಿಕಾ ಅಧಿಕಾರಿ ದೀಪಾ, ಜೋಸೆಫ್ ರೆಬೆಲ್ಲೋ ಉಪಸ್ಥಿತರಿದ್ದರು.
ಪೆರಂಪಳ್ಳಿ ಕೃಷಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶ್ರೀಯಾನ್‌ ಸ್ವಾಗತಿಸಿದರು.

ಉಡುಪಿ ಕೃಷಿ ಇಲಾಖೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ಸಂಜನಾ ಶೆಟ್ಟಿ ನಿರೂಪಿಸಿದರು. ಪೆರಂಪಳ್ಳಿ ಘಟಕದ ಕೆಥೋಲಿಕ್‌ ಸಭಾದ ರಫೆಲ್‌ ಡಿ’ಸೋಜಾ ವಂದಿಸಿದರು. ಸಮಗ್ರ ಕೃಷಿ ಬಗ್ಗೆ ಮಾಹಿತಿ ನೀಡುವ ನಾಟಕ ಪ್ರದರ್ಶನ ಹಾಗೂ ರೈತರೊಂದಿಗೆ ಸಂವಾದ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next